ನವದೆಹಲಿ, ಸೆ. 29: ಭಾರತೀಯ ಸೇನೆ ಬುಧವಾರ ತಡರಾತ್ರಿ ಪಾಕಿಸ್ತಾನ ಉಗ್ರರ ಶಿಬಿರಗಳ ಮೇಲೆ ನಡೆಸಿದ ಸೀಮಿತ ಧಾಳಿಗೆ ಪ್ರತಿಯಾಗಿ ಪಾಕಿಸ್ತಾನದ ಸಂಭವನೀಯ ಧಾಳಿಯನ್ನು ಎದುರಿಸಲು ಭಾರತ ಸನ್ನದ್ಧವಾಗಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಜಮ್ಮು ಮತ್ತು ಕಾಶ್ಮೀರದ ಹಾಗೂ ಪಂಜಾಬ್ ಗಡಿ ವ್ಯಾಪ್ತಿಯ ಎಲ್ಲಾ ಹಳ್ಳಿಗಳನ್ನು ಗುರುವಾರ ತೆರವುಗೊಳಿಸಲಾಗಿದೆ.

ಎಎನ್‍ಐ ವರದಿ ಪ್ರಕಾರ, ಅತ್ತಾರಿ ಸೆಕ್ಟರ್‍ನ ಗ್ರಾಮಗಳನ್ನು ಹಾಗೂ ಪಠಾಣ್ ಕೋಟ್‍ನ ಸರ್ಕಾರಿ ಆಸ್ಪತ್ರೆಯ ತುರ್ತು ನಿಗಾಘಟಕ ಸೇರಿದಂತೆ ಇಡೀ ಗ್ರಾಮವನ್ನು ತೆರವುಗೊಳಿಸಲಾಗಿದೆ.

ಮುಂಜಾಗ್ರತಾ ಕ್ರಮವಾಗಿ ಗಡಿಯಿಂದ ಸುಮಾರು 10 ಕಿ.ಮೀ ವ್ಯಾಪ್ತಿಯಲ್ಲಿ ಜನರನ್ನು ತೆರವುಗೊಳಿಸುವಂತೆ ಪಂಜಾಬ್, ಜಮ್ಮು ಮತ್ತು ಕಾಶ್ಮೀರ ಸೇರಿದಂತೆ ಪಾಕಿಸ್ತಾನದೊಂದಿಗೆ ಗಡಿ ಹಂಚಿಕೊಂಡಿರುವ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರು ಸೂಚಿಸಿದ್ದರು. ಅಲ್ಲದೆ ಗಡಿಯುದ್ದಕ್ಕೂ ಕಟ್ಟೆಚ್ಚರವಹಿಸುವಂತೆ ಸೇನಾಧಿಕಾರಿಗಳಿಗೆ ಸೂಚಿಸಿದ್ದಾರೆ.

ಇದೇ ವೇಳೆ ಉಭಯ ದೇಶಗಳ ಗಡಿಯಲ್ಲಿ ಉದ್ವಿಗ್ನ ವಾತಾವರಣ ನೆಲೆಸಿರುವಂತೆಯೇ ಇಂಡೋ-ಪಾಕ್ ಗಡಿಗೆ ಹೆಚ್ಚುವರಿ ಸೇನಾಪಡೆಗಳನ್ನು ನಿಯೋಜಿಸಲಾಗುತ್ತಿದೆ. ಪ್ರಮುಖವಾಗಿ ಪಂಜಾಬ್ ಭಾಗದ ಗಡಿಗಳಲ್ಲಿ ಹೆಚ್ಚುವರಿ ಸೇನಾಪಡೆಗಳನ್ನು ನಿಯೋಜಿಸಲಾಗುತ್ತಿದ್ದು, ನದಿ ಪಾತ್ರದ ಗ್ರಾಮಗಳಲ್ಲಿ ಕಟ್ಟೆಚ್ಚರವಹಿಸುವಂತೆ ಸೂಚನೆ ನೀಡಲಾಗಿದೆ.

ಧ್ವಜ ಗೌರವ ರದ್ದು

ಗಡಿಯಲ್ಲಿ ಪರಿಸ್ಥಿತಿ ಉದ್ವಿಘ್ನಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಭಾರತ ಹಾಗೂ ಪಾಕಿಸ್ತಾನದ ಗಡಿ ವಾಘಾದಲ್ಲಿ ಎಂದಿನಂತೆ ನಡೆಯಬೇಕಿದ್ದ ಉಭಯ ದೇಶಗಳ ಸೈನಿಕರ ಧ್ವಜಗೌರವ ಕಾರ್ಯಕ್ರಮವನ್ನು ಬಿಎಸ್‍ಎಫ್ ಗುರುವಾರ ರದ್ದುಗೊಳಿಸಿದೆ.

ಪಂಜಾಬ್ ಸೇರಿದಂತೆ ಇನ್ನಿತರೆ ಪ್ರದೇಶಗಳ ಗಡಿಯಲ್ಲಿ ನೆಲೆಸಿರುವ ಜನರನ್ನು ಸ್ಥಳಾಂತರಗೊಳಿಸುವಂತೆ ಕೇಂದ್ರ ಗೃಹ ಸಚಿವ ರಾಜನಾಥ ಸಿಂಗ್ ಅವರು ಈಗಾಗಲೇ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಎಚ್ಚರಿಕೆಯನ್ನು ನೀಡಿದ್ದು, ಗಡಿ ಭಾಗದಲ್ಲಿ ಹೈಅಲರ್ಟ್ ಘೋಷಿಸಲಾಗಿದೆ ಎಂದು ತಿಳಿದುಬಂದಿದೆ. ಗಡಿಯಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿರುವಂತೆಯೇ ಭಾರತ-ಪಾಕಿಸ್ತಾನ ಗಡಿಗೆ ಹೆಚ್ಚುವರಿ ಸೇನಾಪಡೆಗಳನ್ನು ನಿಯೋಜಿಸಲಾಗುತ್ತಿದ್ದು, ಪ್ರಮುಖವಾಗಿ ಪಂಜಾಬ್ ಭಾಗದ ಗಡಿಗಳಲ್ಲಿ ಹೆಚ್ಚುವರಿ ಸೇನಾಪಡೆಗಳನ್ನು ನಿಯೋಜಿಸಲಾಗುತ್ತಿದೆ ಎಂದು

(ಮೊದಲ ಪುಟದಿಂದ) ಮೂಲಗಳಿಂದ ತಿಳಿದುಬಂದಿದೆ. ಪಾಕಿಸ್ತಾನದ ಇಸ್ಲಾಮಾಬಾದ್‍ನಲ್ಲೂ ತುರ್ತು ಸಂಪುಟವನ್ನು ಕರೆಯಲಾಗಿದ್ದು, ಭಾರತೀಯ ಸೇನೆಯ ಧಾಳಿ ಕುರಿತಂತೆ ಮಹತ್ವದ ಚರ್ಚೆ ನಡೆಸಲಿದ್ದಾರೆಂದು ಹೇಳಲಾಗುತ್ತಿದೆ.

ಭಾರತದ ವಿದೇಶಾಂಗ ಕಾರ್ಯದರ್ಶಿ ಎಸ್.ಜೈಶಂಕರ್ ಅವರು ಭಾರತೀಯ ಸೇನೆ ಬುಧವಾರ ತಡರಾತ್ರಿ ಪಾಕಿಸ್ತಾನ ಉಗ್ರರ ಶಿಬಿರಗಳ ಮೇಲೆ ನಡೆಸಿದ ಸೀಮಿತ ಧಾಳಿಯ ಬಗ್ಗೆ 22 ದೇಶಗಳ ರಾಯಭಾರಿಗಳಿಗೆ ಗುರುವಾರ ಮಾಹಿತಿ ನೀಡಿದ್ದಾರೆ. ಎಎನ್‍ಐ ವರದಿಯ ಪ್ರಕಾರ, ಪಿ 5 ರಾಷ್ಟ್ರಗಳು ಸೇರಿದಂತೆ 22 ದೇಶಗಳ ರಾಯಭಾರಿಗಳಿಗೆ ಭಾರತೀಯ ಸೇನಾ ಕಾರ್ಯಾಚರಣೆ ಬಗ್ಗೆ ಹಾಗೂ ಗಡಿ ನಿಯಂತ್ರಣ ರೇಖೆಯ ಪರಿಸ್ಥಿತಿ ಬಗ್ಗೆ ವಿದೇಶಾಂಗ ಕಾರ್ಯದರ್ಶಿಗಳು ಮಾಹಿತಿ ನೀಡಿದ್ದಾರೆ.

ರಾಷ್ಟ್ರಪತಿ ಪ್ರಣಬ್ ಮುಖರ್ಜಿ, ಉಪ ರಾಷ್ಟ್ರಪತಿ ಹಮಿದ್ ಅನ್ಸಾರಿ, ಮಾಜಿ ಪ್ರಧಾನಿ ಮನಮೋಹನ್ ಸಿಂಗ್, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಸೇರಿದಂತೆ ಗಡಿ ರಾಜ್ಯಗಳ ಮುಖ್ಯಮಂತ್ರಿಗಳಿಗೂ ಪಾಕ್ ವಿರುದ್ಧ ಸೇನಾ ಧಾಳಿ ಬಗ್ಗೆ ಕೇಂದ್ರ ಸರ್ಕಾರ ಮಾಹಿತಿ ನೀಡಿದೆ.

ಸೋನಿಯಾ ಭೇಟಿ

ಉಗ್ರರ ನೆಲೆಗಳ ಮೇಲೆ ಭಾರತೀಯ ಸೇನೆ ನಡೆಸುತ್ತಿರುವ ಧಾಳಿ ಹಿನ್ನೆಲೆಯಲ್ಲಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ಕಾಂಗ್ರೆಸ್ ಉಪಾಧ್ಯಕ್ಷೆ ಸೋನಿಯಾ ಗಾಂಧಿಯವರನ್ನು ಭೇಟಿಯಾಗಿದ್ದಾರೆಂದು ಹೇಳಲಾಗುತ್ತಿದೆ. ಸೇನೆ ನಡೆಸುತ್ತಿರುವ ಧಾಳಿ ಕುರಿತು ಸುಷ್ಮಾ ಸ್ವರಾಜ್ ಅವರು ಸೋನಿಯಾ ಗಾಂಧಿಯವರಿಗೆ ವಿವರ ನೀಡಿದ್ದು, ಧಾಳಿ ಕುರಿತಂತೆ ಮಾತುಕತೆ ನಡೆಸಿದ್ದಾರೆಂದು ತಿಳಿದುಬಂದಿದೆ. ಭಾರತ ಮತ್ತು ಪಾಕಿಸ್ತಾನ ಉಭಯ ದೇಶಗಳ ಗಡಿಯಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿರುವ ಬೆನ್ನಲ್ಲೇ ಭಾರತದಲ್ಲಿರುವ ಪಾಕಿಸ್ತಾನ ಹೈಕಮಿಷನರ್ ಅಬ್ದುಲ್ ಬಸಿತ್ ಅವರಿಗೆ ಬೆದರಿಕೆ ಕರೆ ಬರುತ್ತಿರುವದಾಗಿ ಗುರುವಾರ ತಿಳಿದುಬಂದಿದೆ.