*ಸಿದ್ದಾಪುರ, ಜು. 13: ಮರಗೋಡು ಗ್ರಾಮ ಪಂಚಾಯಿತಿ ಸಾಮಾನ್ಯ ಸಭೆ ಪಂಚಾಯಿತಿ ಸಭಾಂಗಣದಲ್ಲಿ ನಡೆಯಿತು.

ಸಭೆಯಲ್ಲಿ ಸದಸ್ಯ ಮುಂಡೋಡಿ ನಂದಾ ಮಾತನಾಡಿ, ಮರಗೋಡು ಗ್ರಾಮ ಪಂಚಾಯಿತಿ ಗ್ರಾಮ ಲೆಕ್ಕಿಗೆ ಮಾಲತಿ ಚುನಾಯಿತ ಜನಪ್ರತಿನಿಧಿಗಳಿಗೆ ಯಾವದೇ ಮಾಹಿತಿ ನೀಡುತ್ತಿಲ್ಲ. ಮಾತಿಗೂ ಗೌರವ ನೀಡುತ್ತಿಲ್ಲ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು.

ಇವರಿಂದ ಗ್ರಾಮದಲ್ಲಿ ಯಾವದೆ ಜನಪರ ಕೆಲಸಗಳು ಆಗುತ್ತಿಲ್ಲ. ಇವರನ್ನು ವರ್ಗಾವಣೆ ಮಾಡಿ ಪುರುಷ ಸಿಬ್ಬಂದಿಯನ್ನು ನೇಮಕ ಮಾಡುವಂತೆ ಜಿಲ್ಲಾಡಳಿತವನ್ನು ಒತ್ತಾಯಿಸುವದ ರೊಂದಿಗೆ ಖಂಡನಾ ನಿರ್ಣಯ ಕೈಗೊಳ್ಳುವಂತೆ ಸಭೆಗೆ ತಿಳಿಸಿದರು.

ಅಧ್ಯಕ್ಷ ಬಿದ್ರುಪಣೆ ಮೋಹನ್ ಮಾತನಾಡಿ, ಇವರ ಬಗ್ಗೆ ಸಾರ್ವಜನಿಕರಿಂದಲೂ ಬಹಳಷ್ಟು ದೂರುಗಳು ಬಂದಿದೆ. ಕಳೆದವಾರ ಪಂಚಾಯಿತಿ ವ್ಯಾಪ್ತಿಯಲ್ಲಿ ಸುರಿದ ಮಳೆಗೆ ಹೂಗುಚ್ಚ ಪೈಸಾರಿಯಲ್ಲಿ ಭೂ ಕುಸಿದು ಹಾನಿಗೊಳಗಾದ ಸ್ಥಳಕ್ಕೆ ಪಂಚಾಯಿತಿಯ ಆಡಳಿತ ಮಂಡಳಿಯ ಗಮನಕ್ಕೂ ತಾರದೆ ಭೇಟಿ ನೀಡಿರುವದು ಖಂಡನೀಯ. ಅಭಿವೃದ್ಧಿ ವಿಷಯದಲ್ಲಿ ಮರಗೋಡು ಪಂಚಾಯಿತಿಯನ್ನು ಅಧಿಕಾರಿಗಳು ಕಡೆಗಣಿಸುತ್ತಿರುವ ಬಗ್ಗೆ ಖಂಡನೆ ವ್ಯಕ್ತಪಡಿಸಿದರು.

ಕಂದಾಯ, ಅರಣ್ಯ, ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಮರಗೋಡು ಗ್ರಾಮ ಪಂಚಾಯಿತಿ ಆಡಳಿತ ಮಂಡಳಿಯನ್ನು ಕಡೆಗಣಿಸುತ್ತಿರುವ ಬಗ್ಗೆ ಖಂಡನಾ ನಿರ್ಣಯಕ್ಕೆ ಒಪ್ಪಿಗೆ ನೀಡಲಾಯಿತು.

ಜಿಲ್ಲಾಡಳಿತ ಮರಗೋಡು ಗ್ರಾಮ ಪಂಚಾಯಿತಿಗೆ ಏನೂ ಅರಿಯದ ಮಹಿಳಾ ಸಿಬ್ಬಂದಿಗಳನ್ನು ನೇಮಕ ಮಾಡುತ್ತಿದೆ. ಇದರಿಂದ ಆಡಳಿತ ಮಂಡಳಿ ಸೇರಿದಂತೆ ಸಾರ್ವಜನಿಕ ರಿಗೂ ತೊಂದರೆಯಾಗುತ್ತಿದೆ. ಜನಸಾಮಾನ್ಯರ ಪ್ರಶ್ನೆಗೆ ಉತ್ತರ ನೀಡಲು ಸಾಧ್ಯವಾಗುತ್ತಿಲ್ಲ.

ಕೂಡಲೇ ಇವರನ್ನು ವರ್ಗಾವಣೆ ಮಾಡಿ ನುರಿತ ಪುರುಷ ಸಿಬ್ಬಂದಿಯನ್ನು ನೇಮಕ ಮಾಡುವಂತೆ ಸರ್ವ ಸದಸ್ಯರು ಹಾಗೂ ಜಿಲ್ಲಾ ಪಂಚಾಯಿತಿ ಸದಸ್ಯರು ಆಗ್ರಹಿಸಿದರು. ಶುಚಿತ್ವಕ್ಕೆ ಮಹತ್ವ ನೀಡುವದರೊಂದಿಗೆ ಆಡಳಿತ ಮಂಡಳಿ ಸೇರಿದಂತೆ ಜಿಲ್ಲಾ ಪಂಚಾಯಿತಿ ಸದಸ್ಯೆ ಕಲಾವತಿ ಯೊಂದಿಗೆ ಪಟ್ಟಣದ ಅಂಗಡಿ ಮುಂಗಟ್ಟುಗಳ ಪರಿಶೀಲನೆ ಮಾಡಲಾಗಿದೆ. ಅಶುಚಿತ್ವ ಹೊಂದಿರುವವರಿಗೆ ಮೂರು ದಿನಗಳ ಗಡುವು ನೀಡಿದ್ದು, ಶುಚಿತ್ವವನ್ನು ಕಾಪಾಡಿಕೊಂಡು ವ್ಯಾಪಾರ ವಹಿವಾಟು ನಡೆಸುವಂತೆ ಕ್ರಮ ಕೈಗೊಂಡಿರುವದಾಗಿ ಸಭೆಯಲ್ಲಿ ಅಧ್ಯಕ್ಷರು ತಿಳಿಸಿದರು.

ಮರಗೋಡು ಗ್ರಾಮ ಪಂಚಾಯಿತಿ ಕಾಂಗೇರಿ, ಬಾಳೆಕಜೆ ರಸ್ತೆ, ಅಕ್ರಮ ಮರ ಸಾಗಾಟದಿಂದ ಸಂಪೂರ್ಣವಾಗಿ ಗುಂಡಿಗಳಾಗಿದ್ದು, ಭಾರೀ ನಷ್ಟವಾಗಿರುವದರ ಬಗ್ಗೆ 2014ರಲ್ಲಿ ಅರಣ್ಯ ಇಲಾಖೆ, ಕಂದಾಯ ಇಲಾಖೆ, ತಾಲೂಕು ತಹಶೀಲ್ದಾರ್, ಪೊಲೀಸ್ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳಿಗೆ ಪತ್ರ ಕಳುಹಿಸಿದ್ದು, ಪತ್ರಗಳು ಸ್ವೀಕೃತಗೊಂಡಿರುವದರ ಬಗ್ಗೆ ದಾಖಲೆಗಳನ್ನು ಸಭೆಯಲ್ಲಿ ತೊರಿಸುತ್ತಾ, ಇದರ ಬಗ್ಗೆ ಸಂಬಂಧಪಟ್ಟ ಇಲಾಖೆ ಇಲ್ಲಿಯವರಗೆ ಯಾವದೇ ಕ್ರಮ ಕೈಗೊಳ್ಳಲಿಲ್ಲ.

ಇದರಿಂದ ಭಾಗದ ನಿವಾಸಿಗಳಿಗೆ ನಡೆದಾಡಲು ತೊಂದರೆಯಾಗಿದೆ. ಆದಷ್ಟು ಬೇಗ ಇಲಾಖೆ ವಿಷಯದ ಬಗ್ಗೆ ಕ್ರಮ ಕೈಗೊಳ್ಳಬೇಕು ಇಲ್ಲದಿದ್ದಲ್ಲಿ ಗ್ರಾಮಸ್ಥರು ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನೆ ಮಾಡಲಾಗುವದೆಂದು ಸದಸ್ಯ ಬಾಳೆಕಜೆ ಸತೀಶ್ ಸಭೆಗೆ ತಿಳಿಸಿದರು.

ಸಭೆಯಲ್ಲಿ ಅಭಿವೃದ್ಧಿ ಅಧಿಕಾರಿ ಆಶಾ, ಉಪಾಧ್ಯಕ್ಷೆ ಗಂಗೆ, ಸದಸ್ಯರಾದ ಕಳ್ಳೀರ ಹರೀಶ್, ಯೋಗೇಂದ್ರ, ರೇಶ್ಮಾ, ಸುಧಾ, ಗೌರಮ್ಮ ಹಾಜರಿದ್ದರು.