*ಸಿದ್ದಾಪುರ, ಜು. 13: ಸ್ವಚ್ಛ ಭಾರತ್ ಅಭಿಯಾನದಡಿಯಲ್ಲಿ ಮರಗೋಡು ಗ್ರಾಮ ಪಂಚಾಯಿತಿ ಪಟ್ಟಣ ವ್ಯಾಪ್ತಿಯ ವ್ಯಾಪಾರ ಮಳಿಗೆ, ಹೊಟೇಲ್, ಗ್ಯಾರೇಜ್, ಮದ್ಯದಂಗಡಿ ಹಾಗೂ ಅಂಗನವಾಡಿ, ಆರೋಗ್ಯ ಕೇಂದ್ರ ಸೇರಿದಂತೆ ಸರಕಾರಿ ಪ್ರಾಥಮಿಕ ಶಾಲೆಗಳಿಗೆ ಪಂಚಾಯಿತಿ ಆಡಳಿತ ಅಧ್ಯಕ್ಷ ಬಿದ್ರುಪಣೆ ಮೋಹನ್, ಸದಸ್ಯರು, ಜಿಲ್ಲಾ ಪಂಚಾಯಿತಿ ಸದಸ್ಯೆ ಕಲಾವತಿ, ಅಭಿವೃದ್ಧಿ ಅಧಿಕಾರಿ ಆಶಾ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಮದ್ಯದಂಗಡಿಯ ಪರಿಶೀಲನೆ ವೇಳೆ ಶೌಚಾಲಯದ ಅಶುಚಿತ್ವ ಹಾಗೂ ಸುತ್ತಮುತ್ತ ಹರಡಿರುವ ಮದ್ಯದ ಖಾಲಿ ಬಾಟಲಿಗಳನ್ನು ಕಂಡ ತಂಡ, ಅಂಗಡಿಯ ಮಾಲೀಕರಿಗೆ ಎಚ್ಚರಿಕೆ ನೀಡಿ ಮುಂದಿನ ಮೂರು ದಿನಗಳ ನಂತರ ಪುನಃ ಪರಿಶೀಲನೆ ಮಾಡಲಾಗುವದು. ಅಶುಚಿತ್ವ ಕಂಡಲ್ಲಿ ಪಂಚಾಯಿತಿ ಕಾನೂನು ಕ್ರಮ ಕೈಗೊಳ್ಳಲಾಗುವದೆಂದು ಎಚ್ಚರಿಕೆ ನೀಡಿದರು. ಅಂಗನವಾಡಿ ಪರಿಶೀಲನೆ ವೇಳೆ ಅಂಗನವಾಡಿ ಕಾರ್ಯಕರ್ತೆ ರಜೆಯಲ್ಲಿ ತೆರಳಿರುವದಾಗಿ ಸಹಾಯಕಿ ತಂಡಕ್ಕೆ ತಿಳಿಸಿದರು. ರಜೆಯ ಅರ್ಜಿಯ ಬಗ್ಗೆ ಸಹಾಯಕಿ ಬಳಿ ವಿಚಾರಿಸಿದಾಗ ಯಾವದೆ ಮಾಹಿತಿ ಇಲ್ಲವೆಂದು ಸ್ಪಷ್ಟನೆ ನೀಡಿದರು. ಗ್ರಾಮ ಪಂಚಾಯಿತಿ ಅಧ್ಯಕ್ಷ ಕೂಡಲೇ ಹಿರಿಯ ಅಧಿಕಾರಿ ಗಳನ್ನು ಸಂಪರ್ಕಿಸಿ ಯಾವದೇ ಮಾಹಿತಿ ನೀಡದೆ ಕರ್ತವ್ಯಕ್ಕೆ ಗೈರು ಹಾಜರಾಗಿರುವ ಕಾರ್ಯಕರ್ತೆ ಬಗ್ಗೆ ಕ್ರಮ ಕೈಗೊಳ್ಳುವಂತೆ ತಿಳಿಸಿದರು.

ಸರಕಾರಿ ಪ್ರಾರ್ಥಮಿಕ ಶಾಲೆಗೆ ಭೇಟಿ ಬೀಡಿ ಅಕ್ಷರ ದಾಸೋಹ ಕೊಠಡಿಯನ್ನು ಪರಿಶೀಲನೆ ನಡೆಸಿದ ತಂಡ ಕೊಠಡಿಯೊಳಗೆ ಪಾದರಕ್ಷೆ ಧರಿಸದೆ ಕೆಲಸ ಮಾಡುವಂತೆ ಸಹಾಯಕಿಯರಿಗೆ ಕಿವಿಮಾತು ಹೇಳಿದರು. ಶಾಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಇರುವದಾಗಿ ಮುಖ್ಯ ಶಿಕ್ಷಕಿ ತಂಡದ ಬಳಿ ದೂರಿಕೊಂಡಾಗ ನೀರಿನ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದರು. ಸದಸ್ಯರಾದ ಮುಂಡೋಡಿ ನಂದಾ, ಕಳ್ಳಿರಾ ಸುರೇಶ್, ಬಾಳೆಕÀಜೆ ಸತೀಶ್, ಕಟ್ಟೆಮನೆ ಧನಂಜಯ, ಸುಧಾ, ಗೌರಮ್ಮ, ರೇಶ್ಮಾ, ಯೋಗೇಂದ್ರ, ಹಾಜರಿದ್ದರು.