ಕುಶಾಲನಗರ, ಡಿ. 5: ಕುಶಾಲನಗರ ಅರಣ್ಯ ಇಲಾಖೆಯ ನಾಟಾ ಸಂಗ್ರಹಗಾರದಲ್ಲಿರುವ ಮರಗಳ ಮಾರಾಟಕ್ಕಾಗಿ ನಡೆದ ಮರಗಳ ಇ-ಹರಾಜು ಪ್ರಕ್ರಿಯೆಯನ್ನು ಸ್ಥಳೀಯ ಮರ ವ್ಯಾಪಾರಿಗಳು ಮತ್ತು ಪೀಠೋಪಕರಣ ತಯಾರಕರು ಬಹಿಷ್ಕರಿಸಿದ ಘಟನೆ ನಡೆದಿದೆ. ಎಲೆಕ್ಟ್ರಾನಿಕ್ ಮರ ಹರಾಜು ಪದ್ಧತಿ ಹಳೆಯ ಸಾಂಪ್ರದಾಯಿಕ ಮಾದರಿಯ ಮರ ಹರಾಜು ಪ್ರಕ್ರಿಯೆಗೆ ತದ್ವಿರುದ್ಧವಾಗಿದ್ದು, ಸ್ಥಳೀಯ ಮತ್ತು ಸಣ್ಣ ಮರ ವ್ಯಾಪಾರಿಗಳಿಗೆ ಇದರಿಂದ ಮಾರಕವಾಗಿದೆ. ವ್ಯಾಪಾರಿಗಳನ್ನು ಸಂಪೂರ್ಣ ಕತ್ತಲೆಯಲ್ಲಿಟ್ಟು ಈ ಪ್ರಕ್ರಿಯೆ ನಡೆಸಲಾಗುತ್ತಿದೆ. ಮರಗಳು ಬೃಹತ್ ಪ್ರಮಾಣದ ವ್ಯಾಪಾರಿಗಳ ಪಾಲಾಗುತ್ತದೆ ಎನ್ನುವದು ಸ್ಥಳೀಯ ಮರ ವ್ಯಾಪಾರಿಗಳ ದೂರಾಗಿದೆ.

ತನ್ನ ಕ್ರಮವನ್ನು ಅರಣ್ಯ ಇಲಾಖೆ ಸಮರ್ಥಿಸಿಕೊಂಡಿದ್ದು, ಸದ್ಯಕ್ಕೆ ಪ್ರಯೋಗಾತ್ಮಕವಾಗಿ ಇ-ಹರಾಜು ಪ್ರಕ್ರಿಯೆ ನಡೆಸಲಾಗುತ್ತಿದೆ. ಇದರ ಒಳಿತು ಕೆಡುಕು ಗಮನಿಸಿಕೊಂಡು ಬೇಕಾದ ಬದಲಾವಣೆಗಳನ್ನು ಮಾಡಿಕೊಳ್ಳಲಾಗುವದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮರ ವ್ಯಾಪಾರಿಗಳಿಗೆ, ಗ್ರಾಹಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಹರಾಜು ವ್ಯವಸ್ಥೆ ರೂಪಿಸಲಾಗುವದು ಎಂದು ಅರಣ್ಯ ಇಲಾಖೆಯ ಮಾಹಿತಿ ತಂತ್ರಜ್ಞಾನ ವಿಭಾಗದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಬ್ರಿಜೇಶ್ ಮಾಹಿತಿ ನೀಡಿದ್ದಾರೆ.