ಚೆಟ್ಟಳ್ಳಿ, ಆ. 3: ಚೆಟ್ಟಳ್ಳಿ ಪಂಚಾಯಿತಿಗೆ ಒಳಪಡುವ ಕೂಡ್ಲೂರು ಚೆಟ್ಟಳ್ಳಿಯಲ್ಲಿ ವಾಸವಿರುವ ಸುನಿತಾ ಎಂಬವರ ಮನೆ ಮೇಲೆ ಕಾಡಾನೆ ಧಾಳಿ ನಡೆಸಿದ ಘಟನೆ ನಡೆದಿದೆ.
ಚೆಟ್ಟಳ್ಳಿಯ ಆರೋಗ್ಯ ಕೇಂದ್ರದಲ್ಲಿ ಆಶಾ ಕಾರ್ಯಕರ್ತೆಯಾಗಿ ಸೇವೆ ಸಲ್ಲಿಸುತಿರುವ ಹಾಗೂ ನಿತ್ಯವೂ ಕೂಲಿ ಕೆಲಸ ಮಾಡಿ ಜೀವನ ಸಾಗಿಸುತ್ತಿರುವ ಸುಮಿತ್ರಾ ಎಂಬವರ ಮನೆ ಮೇಲೆ ಕಾಡಾನೆ ಧಾಳಿ ನಡೆಸಿ ಮನೆಯ ಹಿಂಬದಿಯ ಶೆಡ್ನ ಮೇಲ್ಚಾವಣಿ ಶೀಟ್ ಹಾಗೂ ಅದರ ಕಂಬವನ್ನೆಲ್ಲ ಕೆಡವಿ ಹಾಕಿದೆ. ಸುಮಾರು 50ಸಾವಿರ ನಷ್ಟ ಸಂಭವಿಸಿದೆ.
ಅರಣ್ಯಾಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಮಹಜರು ನಡೆಸಿ ಮಾಹಿತಿಯನ್ನು ಪಡೆದಿದ್ದು ಮುಂದಿನ ಕ್ರಮ ಕೈಗೊಂಡಿದ್ದಾರೆ. ಪಂಚಾಯಿತಿ ಅಧ್ಯಕ್ಷರು, ಸದಸ್ಯರು ಹಾಗೂ ಇತರೆ ಜನಪ್ರತಿನಿಧಿಗಳು ಭೇಟಿ ನೀಡಿದ್ದಾರೆ.