ಸುಂಟಿಕೊಪ್ಪ, ಸೆ. 26: ಜಾತಿ, ಧರ್ಮ, ಭಾಷೆ ಹಾಗೂ ಪ್ರಾಂತ್ಯದ ಹೆಸರಿನಲ್ಲಿ ಮಾನವನ್ನು, ಮನಸ್ಸನ್ನು ಪ್ರಕ್ಷುಬ್ಧಗೊಳಿಸುವದರಿಂದ ಅನಾಹುತ ಹೆಚ್ಚಾಗಲಿದೆ. ಮನಸ್ಸನ್ನು ಶುದ್ಧಿಗೊಳಿಸು ವದರಿಂದ ಮನುಕುಲದಲ್ಲಿ ಶಾಂತಿ ನೆಲೆಸಲಿದೆ ಎಂದು ಆದಿಚುಂಚನಗಿರಿ ಮಠದ ಶ್ರೀಶ್ರೀ ನಿರ್ಮಲಾನಂದ ಸ್ವಾಮೀಜಿ ಹೇಳಿದರು.
ಇಲ್ಲಿನ ಮಲಯಾಳಿ ಸಂಘದ 10 ನೇ ವಾರ್ಷಿಕೋತ್ಸವ ಅಂಗವಾಗಿ ಏರ್ಪಡಿಸಲಾಗಿದ್ದ ಓಣಂ ಆಚರಣಾ ಸಮಾರಂಭವನ್ನು ಉದ್ಘಾಟಿಸಿ ಆಶೀರ್ವಚನ ನೀಡಿದ ಅವರು ಯಾವ ವ್ಯಕ್ತಿಯ ಹೃದಯದಲ್ಲಿ ಆಧ್ಯಾತ್ಮಿಕ ಶಕ್ತಿ ಇದೆಯೋ ಧಾರ್ಮಿಕ ಶೃದ್ಧೆ ಹೊಂದಿರುವನೋ ಅಂತಹ ವ್ಯಕ್ತಿಯ ಮನೆಯಲ್ಲಿ ನೆಮ್ಮದಿ ಸಾಮರಸ್ಯ ನೆಲೆ ನಿಲ್ಲಲಿದೆ ಎಂದರು.
ಒಂದೊಂದು ಧರ್ಮದವರು ಅವರದೇ ಭಾವದಲ್ಲಿ ದೇವರನ್ನು ಪೊಜೆ ಮಾಡುವ ಮೂಲಕ ದಿವ್ಯಮಯ ಶಕ್ತಿಗೆ ಮೊರೆ ಹೋಗುತ್ತಾರೆ. ಎಲ್ಲಾ ಧರ್ಮದ ಸಾರ ಶಾಂತಿಯೇ ಆಗಿದೆ ಎಂದು ಅವರು ಹೇಳಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್, ವಿವಿಧತೆಗಳಲ್ಲಿ ಏಕತೆಯನ್ನು ಕಂಡುಕೊಂಡು ಜಾತ್ಯತೀತ ರಾಷ್ಟ್ರವಾದ ಭಾರತದಲ್ಲಿ ಎಲ್ಲಾರೂ ಸುಖೀ ಸಮೃದ್ಧಿಯ ಜೀವನ ನಡೆಸಲು ಎಲ್ಲಾ ಧರ್ಮ ಜಾತಿ ಬಾಂಧವರು ಕೈಜೋಡಿಸಬೇಕೆಂದು ಕರೆ ನೀಡಿದರು.
ಸಂತ ಅಂತೋಣಿ ದೇವಾಲಯದ ಧರ್ಮಗುರುಗಳಾದ ರೇ.ಫಾಧರ್ ಎಡ್ವರ್ಡ್ ವಿಲಿಯಂ ಸಲ್ಡಾನ ಅವರು ಮಾತನಾಡಿ, ಕೇರಳ ಮೂಲದ ಮಲಯಾಳಿ ಜನಾಂಗದವರು ಓಣಂ ಹಬ್ಬವನ್ನು ಪ್ರತಿ ವರ್ಷ ವಿಜೃಂಭಣೆಯಿಂದ ಆಚರಿಸುತ್ತಾ ತಮ್ಮ ಸಂಸ್ಕøತಿ ಆಚಾರ- ವಿಚಾರಗಳನ್ನು ಬಿಂಬಿಸುತ್ತಿರುವದು ಶ್ಲಾಘನೀಯವಾಗಿದೆ ಎಂದರು.
ಇನ್ನೋರ್ವ ಧರ್ಮಗುರು ಮಂಗಳೂರು ಮಾಂಟುಗೋಳಿನ ಅಬೂಬಕರ್ ಸಿದ್ಧಿಕ್ ಮುಸ್ಲಿಯಾರ್ ಮಾತನಾಡಿ, ಕಾಲಘಟ್ಟದಲ್ಲಿ ಮಾನವ ಹುಲಿ, ಸಿಂಹ, ಆನೆಗೆ ಭಯಪಡುತ್ತಿಲ್ಲ ಮನುಷ್ಯ ಮನುಷ್ಯನಿಗೆ ಹೆದರುವ ಸ್ಥಿತಿ ಬಂದಿದೆ ಎಂದು ವಿಷಾದಿಸಿದರು. ಗುಡ್ಡೆಹೊಸೂರು ಜಿ.ಪಂ. ಸದಸ್ಯ ಪಿ.ಎಂ. ಲತೀಫ್ ಅವರು ಮಲಯಾಳಿ ಸಮಾಜದ ಮರಣ ನಿಧಿಗೆ 20,000 ರೂ. ದೇಣಿಗೆ ನೀಡುವದಾಗಿ ಘೋಷಿಸಿದರು.
ಅತಿಥಿಗಳಾಗಿ ಹಾಸನ ಗ್ರಾಹಕರ ವೇದಿಕೆ ಅಧ್ಯಕ್ಷ ಎ.ಲೋಕೇಶ್ ಕುಮಾರ್ ಜಿ.ಪಂ. ವಿ.ಎಂ. ವಿಜಯ ಸುಂಟಿಕೊಪ್ಪ ಗ್ರಾಮ ಪಂಚಾಯಿತಿ ಅಧ್ಯಕ್ಷ ಗ್ರಾ.ಪಂ. ಅಧ್ಯಕ್ಷೆ ರೋಸ್‍ಮೇರಿ ರಾಡ್ರಿಗಸ್, ಸಿದ್ದಾಪುರ ಕೈರಳಿ ಸಮಾಜದ ಅಧ್ಯಕ್ಷ ಶ್ರೀನಿವಾಸನ್, ಚೆಟ್ಟಳ್ಳಿ ಮಲಯಾಳಿ ಸಂಘದ ಅಧ್ಯಕ್ಷ ಪಿ.ಕೆ. ಶಶಿಕುಮಾರ್, ಮೂರ್ನಾಡು ಹಿಂದೂ ಮಲಯಾಳಿ ಸಮಾಜದ ಅಧ್ಯಕ್ಷ ಕೆ. ಬಾಬು, ಸುಂಟಿಕೊಪ್ಪ ಶ್ರೀಪುರಂ ಅಯ್ಯಪ್ಪ ದೇವಸ್ಥಾನ ಗೌರವಾಧ್ಯಕ್ಷ ಎಚ್. ಗಂಗಾಧರ್ ಮಾತನಾಡಿದರು.
ವೇದಿಕೆಯಲ್ಲಿ ಆದಿಚುಂಚನಗಿರಿ ಮಹಾಸಂಸ್ಥಾನ ಮಠ ಮೈಸೂರು ಶಾಖೆಯ ಶ್ರೀಶ್ರೀ ಸೋಮನಾಥ ಸ್ವಾಮೀಜಿ ಸೇರಿದಂತೆ ಆದಿಚುಂಚನಗಿರಿ ಮಠದ ಕಿರಿಯ ಸ್ವಾಮೀಜಿಗಳು ಜಿ.ಪಂ. ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಬಿ.ಭಾರತೀಶ್ ಬೆಂದ್ಲಂಗಲ ಸುಂಟಿಕೊಪ್ಪ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಎಂ.ಎ.ಉಸ್ಮಾನ್, ಗ್ರಾ.ಪಂ.ಸದಸ್ಯ ಹೇಮಂತ್ ಕುಮಾರ್, ಸೊಮವಾರಪೇಟೆ ಹಿಂದೂ ಮಲಯಾಳಿ ಸಮಾಜದ ಅಧ್ಯಕ್ಷ ಪಿ.ಡಿಪ್ರಕಾಶ್, ಕುಶಾಲನಗರ ಕೇರಳ ಸಮಾಜದ ಅಧ್ಯಕ್ಷ ಶಿವನ್ ನಾಕೂರು ಮಲಯಾಳಿ ಸಮಾಜದ ಅಧ್ಯಕ್ಷ ವಿ.ಕೆ.ಗಂಗಾಧರ ಉಪಸ್ಥಿತರಿದ್ದರು.
ಅಧ್ಯಕ್ಷತೆಯನ್ನು ವಹಿಸಿದ್ದ ಸುಂಟಿಕೊಪ್ಪ ಮಲಯಾಳಿ ಸಮಾಜದ ಅಧ್ಯಕ್ಷ ಪಿ.ಸಿ.ಮೋಹನ್ ಮಾತನಾಡಿದರು.
ಸಮಾರಂಭದಲ್ಲಿ ಮಲಯಾಳಿ ಹಿರಿಯ ಬಾಂದವರಾದ ಜಾನಕಿ, ಜಾನಕಿ ಮಾಧವನ್, ತಂಗಮಣಿ ಅವರುಗಳನ್ನು ಸನ್ಮಾನಿಸಲಾಯಿತು.
ಸಿ.ಬಿ. ಪ್ರಕಾಶ್ ಪ್ರಾರ್ಥಿಸಿ, ರಮ್ಯಾ ಮೋಹನ್ ಸ್ವಾಗತಿಸಿ, ನಿರ್ವಹಿಸಿದರು. ಶಿವಮಣಿ ವಂದಿಸಿದರು.