ಸೋಮವಾರಪೇಟೆ, ಆ. 31: ಕಳೆದ 2008ರಲ್ಲಿ ನಡೆದ ಬೆಂಗಳೂರು ಸರಣಿ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸಿಸಿಬಿ ಪೊಲೀಸರಿಂದ ಬಂಧಿತನಾಗಿರುವ ಕೇರಳದ ಪಿಡಿಪಿ ಪಕ್ಷದ ಮುಖಂಡ ಅಬ್ದುಲ್ ನಾಸೀರ್ ಮದನಿಯ ಸೋಮವಾರಪೇಟೆ ನಂಟಿನ ಕುರಿತು ಪ್ರಮುಖ ಸಾಕ್ಷಿದಾರರಿಗೆ ಕೇರಳದ ವ್ಯಕ್ತಿಯೋರ್ವ ಬೆದರಿಕೆ ಹಾಕಿರುವ ಬಗ್ಗೆ ಸೋಮವಾರಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಬೆಂಗಳೂರು ಸರಣಿ ಬಾಂಬ್ ಸ್ಪೋಟ ಪ್ರಕರಣದ ಪ್ರಮುಖ ಆರೋಪಿ ತಡಿಯಂಡವೀಡು ನಜೀರ್ ಸೋಮವಾರಪೇಟೆಯ ಹೊಸತೋಟ ಸಮೀಪದ ಲಕ್ಕೇರಿ ಪೈಸಾರಿ ಗ್ರಾಮದಲ್ಲಿ ಶುಂಠಿ ಬೆಳೆಗಾರನ ಸೋಗಿನಲ್ಲಿ ನೆಲೆಸಿದ್ದು, ಇಲ್ಲಿಗೆ ಕೇರಳದ ಪಿಡಿಪಿ ನಾಯಕ ಅಬ್ದುಲ್ ನಾಸೀರ್ ಮದನಿ ಭೇಟಿ ನೀಡಿದ್ದ ಬಗ್ಗೆ ಪ್ರಮುಖ ಸಾಕ್ಷಿದಾರರಾಗಿರುವ ಐಗೂರಿನ ಪ್ರಭಾಕರ್ ಅವರಿಗೆ ಕೇರಳದ ವ್ಯಕ್ತಿಯೋರ್ವ ಬೆದರಿಕೆ ಕರೆ ಮಾಡಿದ್ದು, ಈ ಬಗ್ಗೆ ಪ್ರಭಾಕರ್ ಅವರು ಸೋಮವಾರಪೇಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಈಗಾಗಲೇ ರಾಜ್ಯ ಸಿಸಿಬಿ ಪೊಲೀಸರು ಅಬ್ದುಲ್ ನಾಸಿರ್ ಮದನಿಯನ್ನು ಬಂಧಿಸಿ ಜೈಲಿನಲ್ಲಿಟ್ಟು, ಬೆಂಗಳೂರಿನ ಸಿಟಿ ಸಿವಿಲ್ ನ್ಯಾಯಾಲ ಯದಲ್ಲಿ ವಿಚಾರಣೆ ನಡೆಯುತ್ತಿದೆ. ಈ ವಿಚಾರಣೆಗೆ ಈಗಾಗಾಲೇ ನಾಲ್ಕೈದು ಬಾರಿ ಸಾಕ್ಷಿದಾರರು ಹಾಜರಾಗಿದ್ದು, ವಿಚಾರಣೆ ಮುಕ್ತಾಯ ಹಂತಕ್ಕೆ ಬಂದಿದೆ ಎನ್ನಲಾಗಿದೆ. ಈ ಮಧ್ಯೆ ಕೇರಳದ ಸಫುವಾನ್ ಹೆಸರಿನಲ್ಲಿ 9476558595 ಮೊಬೈಲ್ ಮೂಲಕ ಪ್ರಭಾಕರ್ ಅವರಿಗೆ ಕರೆ ಮಾಡಿದ ವ್ಯಕ್ತಿ, “ಅಬ್ದುಲ್ ನಾಸಿರ್ ಮದನಿಯ ವಿರುದ್ಧ ಸಾಕ್ಷಿ ಹೇಳುವದಕ್ಕೂ ಮುನ್ನ ಹತ್ತು ಬಾರಿ ಯೋಚನೆ ಮಾಡಿ, ಅವರ ವಿರುದ್ಧ ಸಾಕ್ಷಿ ಹೇಳಬೇಡಿ.., ಸಾಕ್ಷಿ ಹೇಳುವದಕ್ಕೂ ಮುನ್ನ ಮನೆ ಕಡೆ ಯೋಚಿಸಿ. ಮುಂದಿನ ವಾರ ನಡೆಯುವ ವಿಚಾರಣೆಗೆ ಬರಬೇಡಿ, ಇದಕ್ಕೆ ತಪ್ಪಿದರೆ ಪರಿಣಾಮ ನೆಟ್ಟಗಿರುವದಿಲ್ಲ” ಇತ್ಯಾದಿ ನಯವಾದ ಮಾತು ಗಳೊಂದಿಗೆ ಬೆದರಿಕೆ ಹಾಕಿದ್ದಾನೆ ಎನ್ನಲಾಗಿದೆ.
ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಬೆದರಿಕೆ ಹಾಕಿದ ವ್ಯಕ್ತಿಯ ಪತ್ತೆಗೆ ಪೊಲೀಸ್ ಇಲಾಖೆ ಮುಂದಾಗಿದೆ. ಸಫುವಾನ್ ಕಳೆದ ತಾರೀಕು 18, 21 ಮತ್ತು 28 ರಂದು ಮೊಬೈಲ್ ಕರೆ ಮಾಡಿದ್ದಾನೆ. ಕೇರಳದಿಂದ ಮಾತನಾಡುತ್ತಿರುವದಾಗಿ ತಿಳಿಸಿದ ಈತ ಮಲಯಾಳಂ ಭಾಷೆಯಲ್ಲಿಯೇ ಸಂಭಾಷಣೆ ನಡೆಸಿ ಬೆದರಿಕೆ ಹಾಕಿದ್ದಾನೆ ಎನ್ನಲಾಗಿದೆ. ಸಾಕ್ಷಿದಾರರು ಈಗಾಗಲೇ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೂ ದೂರು ನೀಡಿದ್ದು, ಪ್ರಭಾಕರ್ ಅವರ ನಿವಾಸದ ಬಳಿ ಪೊಲೀಸ್ ಭದ್ರತೆ ಒದಗಿಸಲಾಗಿದೆ.
ಸೋಮವಾರಪೇಟೆ ಪೊಲೀಸ್ ವೃತ್ತ ನಿರೀಕ್ಷಕ ಪರಶಿವಮೂರ್ತಿ ಮತ್ತು ಠಾಣಾಧಿಕಾರಿ ಹಾಗೂ ಸಿಬ್ಬಂದಿಗಳು ಗಸ್ತು ಹೆಚ್ಚಿಸಿದ್ದು, ಪೊಲೀಸ್ ವಾಹನಗಳು ಐಗೂರು ಸುತ್ತಮುತ್ತ ಸಂಚರಿಸುತ್ತಿವೆ. ಉಗ್ರ ಕೃತ್ಯಗಳಲ್ಲಿ ಭಾಗಿಯಾದ ಆರೋಪ ಎದುರಿಸುತ್ತಿರುವ ಮದನಿ ಪರವಾಗಿ ಬೆದರಿಕೆ ಹಾಕಿದ ಕ್ರಮ ಇದೀಗ ಸಾರ್ವಜನಿಕ ವಲಯದಲ್ಲಿ ಆತಂಕಕ್ಕೆ ಕಾರಣವಾಗಿದೆ.
ಹೆಚ್ಚಿನ ಭದ್ರತೆ ಒದಗಿಸಲು ರಂಜನ್ ಆಗ್ರಹ: ಮದನಿ ವಿರುದ್ಧದ ಸಾಕ್ಷಿದಾರರಿಗೆ ಬೆದರಿಕೆ ಹಾಕಿದ ಘಟನೆಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಮಡಿಕೇರಿ ಕ್ಷೇತ್ರದ ಶಾಸಕ ಅಪ್ಪಚ್ಚು ರಂಜನ್, ಘಟನೆಯನ್ನು ತೀವ್ರವಾಗಿ ಖಂಡಿಸಿದ್ದಾರೆ. ಭಯೋತ್ಪಾದಕ ಕೃತ್ಯದಲ್ಲಿ ಭಾಗಿಯಾದವರು ಇಂತಹ ಬೆದರಿಕೆಗಳನ್ನು ಹಾಕುತ್ತಿದ್ದು, ಪೊಲೀಸ್ ಇಲಾಖೆ ಹೆಚ್ಚಿನ ಭದ್ರತೆ ಒದಗಿಸಬೇಕು. ಈ ಬಗ್ಗೆ ಈಗಾಗಲೇ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳೊಂದಿಗೆ ಮಾತುಕತೆ ನಡೆಸಿದ್ದೇನೆ ಎಂದು ತಿಳಿಸಿದ್ದಾರೆ.
ಘಟನೆಯ ಬಗ್ಗೆ ರಾಜ್ಯ ಗೃಹ ಸಚಿವರ ಗಮನ ಸೆಳೆಯಲಾಗಿದೆ. ತನಗೂ ಸಹ ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಬೆದರಿಕೆಯಿತ್ತು. ಕಳೆದೆರಡು ವರ್ಷಗಳ ಹಿಂದೆ ಇನ್ನೋವಾ ಕಾರಿನಲ್ಲಿ ಆಗಮಿಸಿದ ಆಗಂತುಕರು ತನ್ನ ವಾಹನವನ್ನು ಓವರ್ಟೇಕ್ ಮಾಡಿ ಕಾರಿಗೆ ಢಿಕ್ಕಿಪಡಿಸಲು ಯತ್ನಿಸಿದ್ದರು. ಆ ಸಂದರ್ಭವೇ ಪೊಲೀಸರಿಗೆ ದೂರು ನೀಡಿದ್ದೆ. ತನಿಖೆಯ ಪ್ರಗತಿ ಹೇಗಿದೆ ಎಂಬ ಬಗ್ಗೆ ಇಂದಿಗೂ ತಿಳಿದಿಲ್ಲ. ಇದೀಗ ದೇಶ ರಕ್ಷಣೆಯ ವಿಷಯದಲ್ಲಿ ಸಾಕ್ಷಿದಾರರಿಗೆ ಬೆದರಿಕೆ ಕರೆ ಬಂದಿದೆ. ಇದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕೆಂದು ಗೃಹ ಸಚಿವರನ್ನು ಆಗ್ರಹಿಸಲಾಗಿದೆ ಎಂದು ರಂಜನ್ ತಿಳಿಸಿದ್ದಾರೆ.
ಮುಂದಿನ ವಿಚಾರಣೆಗೆ ಸಾಕ್ಷಿದಾರರನ್ನು ಹೆಚ್ಚಿನ ಪೊಲೀಸ್ ಭದ್ರತೆಯೊಂದಿಗೆ ನ್ಯಾಯಾಲಯಕ್ಕೆ ಕರೆದೊಯ್ಯಬೇಕು. ಸಾಕ್ಷಿದಾರರ ಕುಟುಂಬಕ್ಕೂ ಪೊಲೀಸ್ ಭದ್ರತೆ ಒದಗಿಸಬೇಕೆಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರಿಗೆ ಸೂಚಿಸಿರುವದಾಗಿ ರಂಜನ್ ತಿಳಿಸಿದ್ದಾರೆ.