ಮಡಿಕೇರಿ, ಜು. 15: ಮಂಗಳೂರು ಐ.ಜಿ. ಕಚೇರಿಯಲ್ಲಿ ಡಿವೈಎಸ್ಪಿಯಾಗಿದ್ದ ಕೊಡಗು ಮೂಲದ ಮಾದಪಂಡ ಕೆ. ಗಣಪತಿ ಅವರು ಮಡಿಕೇರಿಯಲ್ಲಿ ಆತ್ಮಹತ್ಯೆ ಮಾಡಿಕೊಂಡ ಪ್ರಕರಣ ಘಟಣೆ ನಡೆದ ಒಂಭತ್ತನೆಯ ದಿನವೂ ಕಾವೇರಿದ ವಾತಾವರಣ ಸೃಷ್ಟಿಸಿದೆ. ಆರಂಭದ ದಿನದಿಂದು ಸಾರ್ವತ್ರಿಕವಾಗಿ ಜನರ ಆಕ್ರೋಶ ವ್ಯಕ್ತಗೊಳ್ಳುತ್ತಿದ್ದು, ಇದು ದಿನೇ ದಿನೇ ಸ್ಫೋಟಗೊಳ್ಳುತ್ತಿದೆ. ಬಿ.ಜೆ.ಪಿ. - ಜೆ.ಡಿ.ಎಸ್. ಸದನದಲ್ಲಿ ಆಹೋರಾತ್ರಿ ಧರಣಿ ಮುಂದುವರಿಸಿದ್ದಾರೆ. ನಿನ್ನೆ ಕೊಡಗು ಜಿಲ್ಲೆಯಾದ್ಯಂತ ಯಶಸ್ವಿ ಬಂದ್‍ನೊಂದಿಗೆ ಪ್ರತಿಭಟನೆ ವ್ಯಕ್ತಗೊಂಡಿತ್ತು. ಗಣಪತಿ ಅವರು ತಮ್ಮ ಸಾವಿಗೆ ಮುನ್ನ ಆರೋಪಿಸಿರುವಂತೆ ಆರೋಪಿತರಾದ ಸಚಿವ ಜಾರ್ಜ್ ರಾಜೀನಾಮೆ, ಪೊಲೀಸ್ ಅಧಿಕಾರಿಗಳಾದ ಪ್ರಣಬ್ ಮೊಹಂತಿ, ಎ.ಎಂ. ಪ್ರಸಾದ್ ಅವರುಗಳ ಮೇಲೆ ಕ್ರಮದೊಂದಿಗೆ ಸಿಬಿಐ ತನಿಖೆಗೆ ಒತ್ತಾಯಿಸಿ ರಾಜ್ಯಾದ್ಯಂತ ಪ್ರತಿಭಟನೆ ನಡೆಯುತ್ತಿದೆ.
ಇದರ ಮುಂದುವರಿದ ಭಾಗವಾಗಿ ಇಂದು ಜಿಲ್ಲೆಯಲ್ಲಿ ಬೃಹತ್ ವಾಹನ ಜಾಥಾದ ಮೂಲಕ ಸಾರ್ವಜನಿಕರ ಆಕ್ರೋಶ ಮತ್ತೊಮ್ಮೆ ಸ್ಫೋಟಗೊಂಡಿತು. ಕಪ್ಪು ಬಾವುಟ ಪ್ರದರ್ಶನ, ಧಿಕ್ಕಾರದ ಘೋಷಣೆ ಯೊಂದಿಗೆ ಜಿಲ್ಲಾಧಿಕಾರಿ ಕಚೇರಿ ತನಕ ಭಾರೀ ಸಂಖ್ಯೆಯಲ್ಲಿ ಜನತೆಯ ಪಾಲ್ಗೊಳ್ಳುವಿಕೆಯೊಂದಿಗೆ ನಡೆದ ವಾಹನ ಜಾಥಾ
ಸರಕಾರದ ವಿರುದ್ಧ ಸಂಚಲನ ಮೂಡಿಸಿದೆ. ಪೊನ್ನಂಪೇಟೆ ಕೊಡವ ಸಮಾಜ ವಾಹನ ಜಾಥಾದೊಂದಿಗೆ ಪ್ರತಿಭಟನೆ ನಡೆಸುವ ಕರೆ ನೀಡಿದ್ದ ಕೊಡಗು ಜಿಲ್ಲೆಯಲ್ಲಿ ಇದೇ ಪ್ರಪ್ರಥಮ ಬಾರಿಗೆ ಎಂಬಂತೆ ಭಾರೀ ವಾಹನ ಜಾಥಾವೊಂದು ನಡೆದಿದೆ. ಪೊನ್ನಂಪೇಟೆ ಕೊಡವ ಸಮಾಜದ ಕರೆಗೆ ಉತ್ತಮ ಪ್ರತಿಸ್ಪಂದನ ಕಂಡುಬಂದಿತು. ಈ ಕರೆಯಂತೆ ಇದಕ್ಕೆ ಬೆಂಬಲವಾಗಿ ಸೋಮವಾರಪೇಟೆ ಯಿಂದಲೂ ಜಿಲ್ಲಾ ಕೇಂದ್ರಕ್ಕೆ ಮತ್ತೊಂದು ವಾಹನ ಜಾಥಾ ಹಮ್ಮಿಕೊಳ್ಳಲಾಗಿತ್ತು. ಎರಡು ದಿಕ್ಕಿನಿಂದ ಆಗಮಿಸಿದ ಸುಮಾರು ಸಾವಿರದಷ್ಟು ಸಂಖ್ಯೆಯಲ್ಲಿದ್ದ ವಾಹನಗಳು ಅಪರಾಹ್ನ 1.40ರ ಸುಮಾರಿಗೆ ವೀರಾಜಪೇಟೆ ರಸ್ತೆಯಿಂದ ಹಾಗೂ ಮೈಸೂರು ರಸ್ತೆಯಿಂದ ಜನರಲ್ ತಿಮ್ಮಯ್ಯ ವೃತ್ತದ ಮೂಲಕ ನಗರದೊಳಗೆ ಆಗಮಿಸಲಾರಂಭಿಸಿತು. ಭಾರೀ ಸಂಖ್ಯೆಯ ವಾಹನಗಳು ನಗರಕ್ಕೆ ಆಗಮಿಸಿದ ಕಾರಣ ನಗರದಲ್ಲಿ ಬಹುತೇಕ ಸಂಚಾರ ವ್ಯವಸ್ಥೆ ಅಲ್ಲೋಲ - ಕಲ್ಲೋಲವಾದಂತಾಗಿತ್ತು. ಕಪ್ಪು ಬಾವುಟ, ಧಿಕ್ಕಾರದ ಘೋಷಣೆ ಯೊಂದಿಗೆ ಆಗಮಿಸುತ್ತಿದ್ದ ಜನರನ್ನು ಸಾರ್ವಜನಿಕರು ರಸ್ತೆಯ ಇಕ್ಕೆಲಗಳಲ್ಲಿ ಕುತೂಹಲದಿಂದ ವೀಕ್ಷಿಸುತ್ತಿದ್ದರು. ಆಕ್ರೋಶ - ಅಸಮಾಧಾನದ ಹೊಗೆಯೊಂದಿಗೆ ಆಗಮಿಸಿದ ವಾಹನ - ಜನರ ದಂಡು ಜಿ.ಟಿ. ವೃತ್ತದಿಂದ ಖಾಸಗಿ ಬಸ್ ನಿಲ್ದಾಣ, ಚೌಕಿ, ಕಾಲೇಜು ರಸ್ತೆ, ರೇಸ್ ಕೋರ್ಸ್ ರಸ್ತೆ, ರಾಜಾಸೀಟು ಮಾರ್ಗವಾಗಿ ಗಾಂಧಿ ಮೈದಾನದಲ್ಲಿ ಜಮಾವಣೆಗೊಂಡಿತು. ಮಹಿಳೆಯರೂ ಸೇರಿದಂತೆ ಸಾಕಷ್ಟು ಸಂಖ್ಯೆಯಲ್ಲಿ ಪಾಲ್ಗೊಂಡಿದ್ದ ಜನರು ಗಾಂಧಿ ಮೈದಾನದಿಂದ ಕಾಲ್ನಡಿಗೆಯಲ್ಲಿ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಕಚೇರಿಗೆ ಮುತ್ತಿಗೆ ಹಾಕಿದರು. ಸಚಿವ ಜಾರ್ಜ್ ಸೇರಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ, ಅಧಿಕಾರಿಗಳ ವಿರುದ್ಧ ಕ್ರಮ, ತನಿಖೆಯನ್ನು ಸಿ.ಬಿ.ಐ.ಗೆ ಒಪ್ಪಿಸುವಂತೆ ಆಗ್ರಹಿಸಿ ಆರೋಪಿಸಿದರು. ಸರಕಾರ, ಮುಖ್ಯಮಂತ್ರಿಗಳ ವಿರುದ್ಧ ಧಿಕ್ಕಾರದ ಘೋಷಣೆ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಮೊಳಗಿತು. ಬಳಿಕ ಈ ಬೇಡಿಕೆಗಳ ಬಗ್ಗೆ ಜಿಲ್ಲಾಧಿಕಾರಿ ರಿಚರ್ಡ್ ವಿನ್ಸೆಂಟ್ ಡಿಸೋಜ ಅವರ ಮೂಲಕ ಮನವಿ ಸಲ್ಲಿಸಲಾಯಿತು. ಬೇಡಿಕೆಗಳ ಬಗ್ಗೆ ಕ್ರಮ ಕೈಗೊಳ್ಳದಿದ್ದಲ್ಲಿ ಬೆಂಗಳೂರಿಗೆ ವಾಹನ ಜಾಥಾ ಹಮ್ಮಿಕೊಳ್ಳುವ ಕುರಿತು ಚಿಂತನೆ ನಡೆದಿದೆ.
ಆರಂಭದಿಂದಲೂ ಬೆಂಬಲ
ಪೊನ್ನಂಪೇಟೆ ಕೊಡವ ಸಮಾಜದ ನಿರ್ಧಾರದಂತೆ ಇಂದು ಪೊನ್ನಂಪೇಟೆ ಕೊಡವ ಸಮಾಜದಿಂದ ಬೆಳಿಗ್ಗೆ 10 ಗಂಟೆಗೆ ಜಾಥಾ ಆರಂಭಗೊಂಡಿತು. ಸಮಾಜದ ಸ್ಥಾಪಕ ಅಧ್ಯಕ್ಷ ಮದ್ರೀರ ಗಿಣಿ ಸೋಮಯ್ಯ ಅವರು ಈಡುಗಾಯಿ ಒಡೆಯುವ ಮೂಲಕ ಜಾಥಾಕ್ಕೆ ಚಾಲನೆ ನೀಡಿದರು. ಪೊನ್ನಂಪೇಟೆ ಕೊಡವ ಸಮಾಜದೊಂದಿಗೆ ಕುಟ್ಟ, ಶ್ರೀಮಂಗಲ, ಟಿ.ಶೆಟ್ಟಿಗೇರಿ, ಮರೆನಾಡು, ಹುದಿಕೇರಿ, ಬಾಳಲೆ, ಗೋಣಿಕೊಪ್ಪ, ಅಮ್ಮತ್ತಿ ಕೊಡವ ಸಮಾಜಗಳ ಪದಾಧಿಕಾರಿಗಳು ವಾಹನದೊಂದಿಗೆ ಸಾಥ್ ನೀಡಿದರು.
ಗೋಣಿಕೊಪ್ಪಲುವಿನಲ್ಲಿ ಇಗ್ಗುತಪ್ಪ ಕೊಡವ ಸಂಘ, ಪೊನ್ನಂಪೇಟೆ ಗೋಲ್ಡನ್ ಜೇಸೀಸ್, ರೈತ ಸಂಘವೂ ಸೇರ್ಪಡೆಗೊಂಡಿತು. ಆರಂಭದಲ್ಲಿ ಸುಮಾರು 100ರಷ್ಟು ವಾಹನವಿದ್ದು, ಜಾಥಾ ಹೊರಟಂತೆ ನಡು ನಡುವೆ ವಾಹನಗಳ ಸಂಖ್ಯೆ ಏರಿಕೆಗೊಳ್ಳುತ್ತಲೇ ಮುಂದುವರಿಯಿತು. ಮೂರ್ನಾಡು ವಿನಲ್ಲಿ ಮೂರ್ನಾಡು ಕೊಡವ ಸಮಾಜದವರು ಕಾಫಿ, ತಿಂಡಿ ವ್ಯವಸ್ಥೆಯೊಂದಿಗೆ ಸ್ವಾಗತ ಕೋರಿದರು. ಮೂರ್ನಾಡು ಕೊಡವ ಸಮಾಜದೊಂದಿಗೆ ಇಲ್ಲಿ ನಾಪೋಕ್ಲು ಕೊಡವ ಸಮಾಜದವರೂ ಸೇರ್ಪಡೆ ಗೊಂಡರು. ಮಡಿಕೇರಿಯತ್ತ ಮುಂದುವರಿದ ಜಾಥಾವನ್ನು ಮೇಕೇರಿಯಲ್ಲಿ ಹಿಂದೂ ಪರ ಸಂಘಟನೆಗಳು ಸ್ವಾಗತಿಸಿ ಜಾಥಾ ದೊಂದಿಗೆ ಸೇರ್ಪಡೆ ಗೊಂಡವು. ನಗರದ ಜಿ.ಟಿ. ವೃತ್ತದಲ್ಲಿ ಮಡಿಕೇರಿ ಕೊಡವ ಸಮಾಜದ ಪದಾಧಿಕಾರಿಗಳು ಹಾಗೂ ಹಿಂದೂ ಸಂಘಟನೆಗಳು ಬರ ಮಾಡಿಕೊಂಡರು.
ಇದೇ ವೇಳೆಗೆ ಸೋಮವಾರ ಪೇಟೆಯಿಂದ ಸೋಮವಾರಪೇಟೆ, ಮಾದಾಪುರ, ಗರ್ವಾಲೆ, ಮಕ್ಕಂದೂರು ಕೊಡವ ಸಮಾಜ ಗಳಿಂದ ಆಗಮಿಸಿದ ವಾಹನ ಜಾಥಾವೂ ಜಿ.ಟಿ. ವೃತ್ತದಲ್ಲಿ ವಿಲೀನಗೊಂಡಿತು. ಯುಕೋ ಸಂಘಟನೆ ಹಾಗೂ ಸಿಎನ್‍ಸಿ ಸಂಘಟನೆಯೂ ಸಕ್ರಿಯವಾಗಿ ಪಾಲ್ಗೊಂಡಿತ್ತು.
ಬಳಿಕ ವಿವಿಧ ಘೋಷಣೆ ಗಳೊಂದಿಗೆ ಮಡಿಕೇರಿ ನಗರದ ಮುಖ್ಯ ರಸ್ತೆಯಲ್ಲಿ ಹಲವಾರು ಮಂದಿ ಮುಂಚೂಣಿಯಲ್ಲಿ ಕಾಲ್ನಡಿಗೆಯಲ್ಲಿ ತೆರಳಿದರೆ ವಾಹನ ಜಾಥಾ ಇವರನ್ನು ಹಿಂಬಾಲಿಸಿತು. ಬಳಿಕ ಗಾಂಧಿ ಮೈದಾನ ಹಾಗೂ ಅಲ್ಲಿನ ರಸ್ತೆಯಲ್ಲಿ ವಾಹನ ನಿಲುಗಡೆಗೊಳಿಸಲಾಯಿತು. ನೂರಾರು ವಾಹನಗಳು ಸಾಲುಗಟ್ಟಿ ನಿಂತಿದ್ದವು. ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ ಸಂದರ್ಭವೂ ಹೆಚ್ಚಿನ ಸಂಖ್ಯೆಯಲ್ಲಿ ಜನರು ಜಮಾವಣೆಗೊಂಡಿದ್ದರು. ಪೊನ್ನಂಪೇಟೆ ಕೊಡವ ಸಮಾಜದ ಅಧ್ಯಕ್ಷ ಸುಳ್ಳಿಮಾಡ ಗೋಪಾಲ್ ತಿಮ್ಮಯ್ಯ ಮನವಿ ಸಲ್ಲಿಸಿದರು.
ಇಂತಹ ದುರ್ಘಟನೆ ಮತ್ತೆ ನಡೆಯಬಾರದು : ಗೋಪಾಲ್ ತಿಮ್ಮಯ್ಯ
ಮಂಗಳೂರಿನಲ್ಲಿ ಡಿವೈಎಸ್ಪಿ ಯಾಗಿದ್ದ ಕೊಡಗಿನ ಮಾದಪಂಡ ಕೆ. ಗಣಪತಿ ಅವರು ಕಳೆದ 22 ವರ್ಷಗಳಿಂದ ಪೊಲೀಸ್ ಇಲಾಖೆ ಯಲ್ಲಿ ಕರ್ತವ್ಯ ನಿರ್ವ ಹಿಸುತ್ತಿದ್ದು, ದಕ್ಷ ಹಾಗೂ ಪ್ರಾಮಾಣಿಕ ಅಧಿಕಾರಿಯಾಗಿದ್ದಾರೆ. ಕರ್ತವ್ಯದಲ್ಲಿ ದ್ದಾಗ ಓರ್ವ ಮಂತ್ರಿ ಯನ್ನು ತೃಪ್ತಿಪಡಿಸಲಿಲ್ಲ ಎಂಬ ಕಾರಣಕ್ಕಾಗಿ ಒಂದು ಬಾರಿ ಅಮಾನತು ಗೊಂಡಿದ್ದರು. ನಂತವೂ ಸಚಿವರು ಹಾಗೂ ಹಿರಿಯ ಅಧಿಕಾರಿಗಳ ನಿರಂತರ ಕಿರುಕುಳ ದಿಂದಾಗಿ ಗಣಪತಿ ಅವರು ಆತ್ಮಹತ್ಯೆ ಮಾಡಿಕೊಂಡಿದ್ದು, ಇಂತಹ ದುರ್ಘಟನೆ ಮತ್ತೆ ಎಂದಿಗೂ ಮರುಕಳಿಸಬಾರದು ಎಂದು ಪೊನ್ನಂಪೇಟೆ ಕೊಡವ ಸಮಾಜದ ಅಧ್ಯಕ್ಷ ಸುಳ್ಳಿಮಾಡ ಗೋಪಾಲ್ ತಿಮ್ಮಯ್ಯ ಹೇಳಿದರು.
ಜಿಲ್ಲಾಧಿಕಾರಿಗಳ ಕಚೇರಿಗೆ ವಾಹನ ಜಾಥಾದೊಂದಿಗೆ ಮುತ್ತಿಗೆ ಹಾಕಿದ ಸಂದರ್ಭ ಅವರು ಮಾತನಾಡಿದರು. ಕೊಡಗಿನ ಮಣ್ಣಿನಲ್ಲಿ ಓದಿ ಕಲಿತು ಮರ ವ್ಯಾಪಾರದೊಂದಿಗೆ ಹಣ ಮಾಡಿದ ಜಾರ್ಜ್ ಅವರು ಇದೀಗ ಕೊಡಗಿಗೆ ಅನ್ಯಾಯ ಮಾಡುತ್ತಿದ್ದು, ಕಾವೇರಿ ಮಾತೆ ಅವರನ್ನು ಎಂದಿಗೂ ಕ್ಷಮಿಸುವದಿಲ್ಲ ಎಂದು ನೋವಿನಿಂದ ನುಡಿದರು. ಮುಂದಿನ 2-3 ದಿನದಲ್ಲಿ ಸಚಿವರನ್ನು ವಜಾಗೊಳಿಸದಿದ್ದಲ್ಲಿ ನ್ಯಾಯಾಲಯ ದಲ್ಲಿ ಪಿಐಎಲ್ ಸಲ್ಲಿಸಲಾಗುವದು. ಕೊಡಗಿನ ಜನತೆ ಶಾಂತಿಪ್ರಿಯರು ಕಿರುಕುಳ ಮುಂದುವರೆದಲ್ಲಿ ಸಹಿಸಲು ಸಾಧ್ಯವಿಲ್ಲ ಎಂದು ಮಾರ್ಮಿಕವಾಗಿ ನುಡಿದರು.