ಮಡಿಕೇರಿ, ಅ. 4: ಕುಟುಂಬದ ಸದಸ್ಯರ ಹೆಸರು ಮತದಾರರ ಪಟ್ಟಿಯಲ್ಲಿ ಸೇರ್ಪಡೆಯಾಗುವ ಸಂಬಂಧ ಅಗತ್ಯ ಕ್ರಮವಹಿಸುವಂತೆ ಜಿಲ್ಲಾಧಿಕಾರಿ ರಿಚರ್ಡ್ ವಿನ್ಸೆಂಟ್ ಡಿಸೋಜ ತಿಳಿಸಿದ್ದಾರೆ.
ನಗರದ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಮತದಾರರ ಪಟ್ಟಿಯ ವಿಶೇಷ ಸಂಕ್ಷಿಪ್ತ ಪರಿಷ್ಕರಣ ಸಂಬಂಧ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಭಾರತ ಚುನಾವಣೆ ಆಯೋಗದ ನಿರ್ದೆಶನದಂತೆ ಸದಸ್ಯರ ಹೆಸರು ಮತದಾರರ ಪಟ್ಟಿಯಲ್ಲಿ ಸೇರ್ಪಡೆಯಾಗದೆ ಇದ್ದಲ್ಲಿ ಅಥವಾ ಮತದಾರರ ಪಟ್ಟಿಯಿಂದ ಹೆಸರು ತೆಗೆಯಬೇಕಾದಲ್ಲಿ ತಾ. 31 ರವರೆಗೆ ನಿಗದಿತ ನಮೂನೆಗಳಲ್ಲಿ ಮತ್ತು ಪೂರಕ ದಾಖಲೆಗಳೊಂದಿಗೆ ಮತಗಟ್ಟೆಯ ಬೂತ್ ಮಟ್ಟದ ಅಧಿಕಾರಿಗೆ ಅಥವಾ ತಾಲೂಕು ಕಚೇರಿಗೆ ಸಾರ್ವಜನಿಕರು ಸಲ್ಲಿಸಬಹುದಾಗಿರುತ್ತದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಈಗಾಗಲೇ ಮತದಾರರ ಪಟ್ಟಿಗೆ ಸೇರ್ಪಡೆಯಾಗಿರುವ ಮತದಾರರು ತಮ್ಮ ಗುರುತಿನ ಚೀಟಿ ಅಥವಾ ಮತದಾರರ ಪಟ್ಟಿಯಲ್ಲಿನ ನಮೂನೆಗಳಲ್ಲಿ ವ್ಯತಿರಿಕ್ತವಾಗಿದ್ದಲ್ಲಿ ಅಥವಾ ತಪ್ಪುಗಳಿದ್ದಲ್ಲಿ ಸರಿಪಡಿಸಲು ಮತ್ತು ಸೇರ್ಪಡೆಯಾಗಿರುವ ಮತದಾರರಲ್ಲಿ ಮರಣ, ಸ್ಥಳಾಂತರ, ಒಬ್ಬ ಮತದಾರ ಎರಡು ಬಾರಿ ನೋಂದಣಿಯಾಗಿದ್ದರೆ ಮತ್ತು ಇತರೆ ಕಾರಣಗಳಿಂದ ಮತದಾರರ ಪಟ್ಟಿಯಿಂದ ಹೆಸರು ಇಲ್ಲದಿದ್ದಲ್ಲಿ ಈ ಬಗ್ಗೆ ಸೇರ್ಪಡೆ ಮಾಡುವಲ್ಲಿ ಸಂಬಂಧಪಟ್ಟ ಅಧಿಕಾರಿಗಳನ್ನು ಸಂಪರ್ಕಿಸಬಹುದು ಎಂದು ಹೇಳಿದರು.
ತಾ. 7 ಮತ್ತು 14 ರಂದು ಕರಡು ಮತದಾರ ಪಟ್ಟಿಯನ್ನು ಗ್ರಾಮಸಭೆ, ನಗರ ಸ್ಥಳೀಯ ಸಂಸ್ಥೆ ಮಟ್ಟದಲ್ಲಿ ಮತದಾರರ ಹೆಸರು ಮತ್ತು ಮತಗಟ್ಟೆಗಳ ವಿವರವನ್ನು ಓದುವದು ಮತ್ತು ಇದರಲ್ಲಿ ತಪ್ಪಗಳು ಇದ್ದಲ್ಲಿ ತಿದ್ದುಪಡಿಗೆ ನಿಗಧಿತ ನಮೂನೆಯಲ್ಲಿ ಸಲ್ಲಿಸುವಂತೆ ಜಿಲ್ಲಾಧಿಕಾರಿ ಡಾ. ರಿಚರ್ಡ್ ವಿನ್ಸೆಂಟ್ ಡಿಸೋಜ ಅವರು ಸೂಚನೆ ನೀಡಿದರು.
ರಾಜಕೀಯ ಪಕ್ಷಗಳು ಪ್ರತಿ ಮತಗಟ್ಟೆಗೆ ಒಬ್ಬರಂತೆ ಬೂತ್ ಮಟ್ಟದ ಎಜೆಂಟರುಗಳನ್ನು ನೇಮಕ ಮಾಡಿ ವಿವರಗಳನ್ನು ನೀಡಬೇಕು. ತಾ. 16 ಮತ್ತು 23 ರಂದು ಬೂತ್ ಮಟ್ಟದ ಎಜೆಂಟರುಗಳು ವಿಶೇಷ ಪ್ರಚಾರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವಂತೆ ಆಗಬೇಕು ಮತ್ತು ಮತದಾರರ ಪಟ್ಟಿ ಪರಿಷ್ಕರಣೆ ಸಂಬಂಧ ಅಧಿಕಾರಿಗಳು ಸ್ಥಳೀಯರಿಗೆ ಅಗತ್ಯ ಮಾಹಿತಿ ನೀಡುವಂತೆ ಆಗಬೇಕು ಎಂದರು.
ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಚುನಾವಣೆ ಸಂಬಂಧ ಅಂತಿಮ ಮತದಾರರ ಪಟ್ಟಿಯನ್ನು ಶೀಘ್ರವಾಗಿ ತಯಾರಿಸುವದು, ಮತಗಟ್ಟೆಗಳನ್ನು ಗುರುತಿಸುವದು, ಮತಗಟ್ಟೆಗಳಿಗೆ ಅಧಿಕಾರಿಗಳ ನೇಮಕ, ಮತಗಟ್ಟೆಗಳನ್ನು ಶುಚಿಗೊಳಿಸುವದು ಹಾಗೂ ಈ ಸಂಬಂಧ ಅಧಿಕಾರಿಗಳು ಕಾರ್ಯ ಪ್ರವೃತ್ತರಾಗುವಂತೆ ಜಿಲ್ಲಾಧಿಕಾರಿ ತಿಳಿಸಿದರು. ಸಭೆಯಲ್ಲಿ ವಿವಿಧ ಇಲಾಖೆ ಅಧಿಕಾರಿಗಳು ಹಾಜರಿದ್ದರು.