ಮಡಿಕೇರಿ, ಡಿ. 5: ರೈತರು ಮಣ್ಣಿನ ಫಲವತ್ತತೆ ಬಗ್ಗೆ ವಿಶೇಷ ಗಮನಹರಿಸುವಂತಾಗಲು ಕಡ್ಡಾಯವಾಗಿ ಮಣ್ಣು ಪರೀಕ್ಷೆ ಮಾಡಿಸುವದು ಅಗತ್ಯ ಎಂದು ಜಿ.ಪಂ. ಅಧ್ಯಕ್ಷ ಬಿ.ಎ.ಹರೀಶ್ ತಿಳಿಸಿದ್ದಾರೆ.
ಜಿಲ್ಲಾ ಪಂಚಾಯತ್, ಕೃಷಿ ಇಲಾಖೆ ವತಿಯಿಂದ ನಗರದ ಸಹಕಾರಿ ಯೂನಿಯನ್ ಸಭಾಂಗಣದಲ್ಲಿ ನಡೆದ ವಿಶ್ವ ಮಣ್ಣು ಆರೋಗ್ಯ ದಿನಾಚರಣೆ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ದೇಶದಲ್ಲಿ ಒಂದೆಡೆ ಕೃಷಿಯಲ್ಲಿ ಪ್ರಗತಿ ಸಾಧಿಸಲಾಗುತ್ತಿದೆ. ಮತ್ತೊಂದೆಡೆ ಮಣ್ಣಿನ ಫಲವತ್ತತೆ ಕುಸಿಯುತ್ತಿದೆ. ಹಾಗಾಗಿ ಕೃಷಿಯಲ್ಲಿ ಪ್ರಗತಿ ಸಾಧಿಸುವದರ ಜೊತೆಗೆ, ಮಣ್ಣಿನ ಫಲವತ್ತತೆ ಬಗ್ಗೆಯೂ ಹೆಚ್ಚು ಮುತುವರ್ಜಿ ವಹಿಸುವದು ಅವಶ್ಯಕವಾಗಿದೆ ಎಂದು ನುಡಿದರು.
ಇತ್ತೀಚೆಗೆ ಜಿಲ್ಲೆಯಲ್ಲಿ ಬರ ಹೆಚ್ಚಾಗಿ ಕಂಡುಬರುವದರಿಂದ ಕೃಷಿ ಕ್ಷೇತ್ರದಲ್ಲಿ ಹೆಚ್ಚಿನ ನಷ್ಟ ಸಂಭವಿಸುತ್ತಿದೆ. ಈ ನಿಟ್ಟಿನಲ್ಲಿ ಕೃಷಿಕರು ಹಾಗೂ ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಸಂಪರ್ಕಿಸಿ ಅಗತ್ಯ ಮಾಹಿತಿಗಳನ್ನು ಪಡೆಯುವಂತಾಗ ಬೇಕು. ಪ್ರತಿಯೊಬ್ಬ ರೈತನೂ ಆರೋಗ್ಯಯುತ ಮಣ್ಣಿನ ಸಂರಕ್ಷಣೆಯ ಬಗ್ಗೆ ತಿಳಿದುಕೊಂಡು ಪ್ರಗತಿಯತ್ತ ಸಾಗಬೇಕು ಎಂದು ಸಲಹೆ ಮಾಡಿದರು.
ಕೃಷಿ ಇಲಾಖೆ ಜಂಟಿ ನಿರ್ದೇಶಕ ಡಾ. ಕೆ. ರಾಮಪ್ಪ ಮಾತನಾಡಿ, ಭೂಮಿಯಲ್ಲಿನ ಸ್ವಾಭಾವಿಕ ಸಂಪನ್ಮೂಲ ಬಳಸಿಕೊಂಡು ಆಹಾರದ ಬೆಳೆಯ ಗುಣಮಟ್ಟವನ್ನು ಕಾಪಾಡಿ ಕೊಳ್ಳುವಲ್ಲಿ ರೈತರು ಹೆಚ್ಚಿನ ಜವಾಬ್ದಾರಿ ಹೊಂದಿದ್ದಾರೆ. ಮಣ್ಣಿನ ಸತ್ವವನ್ನು ಉಳಿಸುವ ನಿಟ್ಟಿನಲ್ಲಿ ಅಗತ್ಯ ಮಾರ್ಗೋಪಾಯಗಳನ್ನು ಅನುಸರಿಸಬೇಕಿದೆ ಎಂದು ತಿಳಿಸಿದರು.
ಮಣ್ಣು ಪರೀಕ್ಷಾ ಪ್ರಯೋಗಾಲಯ ಕೇಂದ್ರಗಳು ಜಿಲ್ಲೆಯಲ್ಲಿ ಕೂಡಿಗೆ ಕೃಷಿ ಇಲಾಖೆ ಕೇಂದ್ರ, ಚೆಟ್ಟಳ್ಳಿ ಕಾಫಿ ಮಂಡಳಿ, ಹಾಗೂ ಗೋಣಿಕೊಪ್ಪ ಕೃಷಿ ವಿಜ್ಞಾನ ಕೇಂದ್ರದಲ್ಲಿ ಇದೆ ಎಂದು ತಿಳಿಸಿದರು.
ತಾ.ಪಂ. ಅಧ್ಯಕ್ಷೆ ತೆಕ್ಕಡೆ ಶೋಭಾ ಮೋಹನ್ ಮಾತನಾಡಿ, ರೈತ ಕೃಷಿಯಲ್ಲಿ ಮಣ್ಣಿನ ಆರೋಗ್ಯ ಕಾಪಾಡಿಕೊಂಡಲ್ಲಿ ಹೆಚ್ಚಿನ ಬೆಳೆಯನ್ನು ಪಡೆಯಲು ಸಾಧ್ಯವಾಗಲಿದೆ. ಕಾಲ ಕಾಲಕ್ಕೆ ಮಣ್ಣಿನ ಪರೀಕ್ಷೆಗಳನ್ನು ಮಾಡಿಕೊಳ್ಳುವಂತೆ ಆಗಬೇಕು. ಈ ನಿಟ್ಟಿನಲ್ಲಿ ಇಲಾಖೆ ಅಧಿಕಾರಿಗಳು ರೈತರಿಗೆ ಅಗತ್ಯ ಸಲಹೆಯನ್ನು ಕೊಡುವಂತಾಗಬೇಕು ಎಂದರು.
ಪ್ರಗತಿಪರ ರೈತ ತೇಜಸ್ ನಾಣಯ್ಯ ಮಾತನಾಡಿ, ಭೂ ಫಲವತ್ತತೆ ಹೆಚ್ಚಿಸಿ ಅಧಿಕ ಇಳುವರಿಯನ್ನು ಪಡೆಯುವಲ್ಲಿ ಮಣ್ಣು ಪರೀಕ್ಷೆಯನ್ನು ಎಲ್ಲಾ ರೈತರೂ ತಮ್ಮ ಜಮೀನುಗಳಲ್ಲಿ ಮಾಡಿಕೊಳ್ಳುವಂತಾಗ ಬೇಕು. ಮಣ್ಣಿನ ಪರೀಕ್ಷೆಯಿಂದ ಪೋಷಕಾಂಶದ ಗುಣಮಟ್ಟ ಕಾಪಾಡುವಲ್ಲಿ ಹೆಚ್ಚಾಗಿ ಹಸಿರೆಲೆ ಗೊಬ್ಬರ ಹಾಗೂ ಕೊಟ್ಟಿಗೆ ಗೊಬ್ಬರವನ್ನು ಬಳಸಿ ಮಣ್ಣಿನ ಫಲವತ್ತತೆ ಕಾಪಾಡಬೇಕಿದೆ ಎಂದು ಸಲಹೆ ಮಾಡಿದರು.
ಕೃಷಿ ಕ್ಷೇತ್ರದಲ್ಲಿ ಹೆಚ್ಚಿನ ಆದಾಯ ಪಡೆಯುವ ಸಲುವಾಗಿ ಸಂಬಂಧಿಸಿದ ಕೃಷಿ ಇಲಾಖೆಯ ಅಧಿಕಾರಿಗಳ ಅಥವಾ ವಿಜ್ಞಾನಿಗಳ ಸಹಕಾರ ಪಡೆಯುವಂತೆ ಸಲಹೆ ಮಾಡಿದರು.
ತಾ.ಪಂ. ಉಪಾಧ್ಯಕ್ಷೆ ಬೊಳಿಯಾಡಿರ ಸಂತು ಸುಬ್ರಮಣಿ ಮಾತನಾಡಿ, ಸಸ್ಯಗಳ ಬೆಳವಣಿಗೆಗೆ ಅಗತ್ಯವಾದ ಪೋಷಕಾಂಶಗಳಲ್ಲಿ ಸಾರಜನಕವು ಪ್ರಮುಖ ಪಾತ್ರ ವಹಿಸಿರುವದರಿಂದ ಮಣ್ಣಿನ ಪರೀಕ್ಷೆ ಅವಶ್ಯಕವಾಗಿದೆ ಎಂದರು. ರೈತರು ಸಾವಯವ ಗೊಬ್ಬರ ಬಳಸುವಂತೆ ಆಗಬೇಕು. ಇದರಿಂದ ಮಣ್ಣಿನ ಆರೋಗ್ಯ ರಕ್ಷಣೆಯಲ್ಲಿ ಸಮತೋಲನ ಕಾಪಾಡಿಕೊಳ್ಳಬಹುದು ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಮಣ್ಣು ವಿಜ್ಞಾನ ತಜ್ಞ ಸಿ.ಕೆ. ವಸಂತ್ ಕುಮಾರ್ ಅವರು ಕೃಷಿಕರಲ್ಲಿ ಮಣ್ಣಿನ ಸಂರಕ್ಷಣೆಯ ವಿಧಾನಗಳನ್ನು ತಿಳಿಸಿದರು. ಇದೇ ಸಂದರ್ಭದಲ್ಲಿ ಮಣ್ಣು ಆರೋಗ್ಯ ಚೀಟಿಯನ್ನು ವಿತರಿಸಲಾಯಿತು.
ಕವಿತಾ ಭೀಮಯ್ಯ ಪ್ರಾರ್ಥಿಸಿದರು. ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ರೈತಗೀತೆ ಹಾಡಿದರು. ಕೃಷಿ ಇಲಾಖೆಯ ತಾಂತ್ರಿಕ ಅಧಿಕಾರಿ ಗಿರೀಶ್ ಸ್ವಾಗತಿಸಿ, ನಿರೂಪಿಸಿದರು, ವಸಂತ್ ಕುಮಾರ್ ವಂದಿಸಿದರು.