ಮಡಿಕೇರಿ, ಸೆ. 8: ಹದಿನೈದು ವರ್ಷಗಳ ನಂತರ ಇದೇ ಮೊದಲ ಬಾರಿಗೆ ರೋಟರಿ ಕ್ಲಬ್ನ ಅಂಗ ಸಂಸ್ಥೆ ಮಹಿಳಾ ಸದಸ್ಯರ ಇನ್ನರ್ ವೀಲ್ ಕ್ಲಬ್ ವತಿಯಿಂದ ಅ. 2 ರಂದು ಮಡಿಕೇರಿಯಲ್ಲಿ ಇನ್ನರ್ ವೀಲ್ ರ್ಯಾಲಿ ನಡೆಯಲಿದೆ.ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕ್ಲಬ್ನ 318 ಘಟಕದ ಅಧ್ಯಕ್ಷೆ ಚಿತ್ರಾ ವಿ. ರಾವ್, ಕ್ಲಬ್ ನಡೆಸುತ್ತಿರುವ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಿದರು. ಮಹಿಳಾ ಸದಸ್ಯರನ್ನೆ ಹೊಂದಿರುವ ಕ್ಲಬ್, 1924 ರಲ್ಲಿ ಸ್ಥಾಪನೆಗೊಂಡಿದ್ದು, ಸ್ನೇಹಪರತೆ ಮತ್ತು ಸಮಾಜ ಸೇವೆಗಳಿಂದ ಸುಮಾರು 103 ದೇಶಗಳಲ್ಲಿ ಗಮನ ಸೆಳೆದಿದೆ ಎಂದರು. 1.03 ಲಕ್ಷ ಸದಸ್ಯರಿರುವ 3895 ಕ್ಲಬ್ಗಳು ವಿಶ್ವವ್ಯಾಪಿ ಸೇವೆ ಸಲ್ಲಿಸುತ್ತಿವೆ. ಭಾರತದಲ್ಲಿ 8 ಪ್ರದೇಶಕ್ಕೆ ಒಂದು ಜಿಲ್ಲೆಯಂತೆ 27 ಜಿಲ್ಲೆಗಳಲ್ಲಿ ಕ್ಲಬ್ ಕಾರ್ಯ ನಿರ್ವಹಿಸುತ್ತಿದೆ. ಚಿಕ್ಕಮಗಳೂರು, ದಕ್ಷಿಣ ಕನ್ನಡ, ಹಾಸನ, ಕೊಡಗು, ಶಿವಮೊಗ್ಗ, ಮೈಸೂರು, ಚಾಮರಾಜನಗರ ಮತ್ತು ಉಡುಪಿ ಜಿಲ್ಲೆ ಸೇರಿ 318 ಘಟಕದ ಜಿಲ್ಲೆಯನ್ನು ರಚಿಸಲಾಗಿದೆ. ಇದರಲ್ಲಿ 39 ಕ್ಲಬ್ಗಳು ಚಟುವಟಿಕೆಯಿಂದ ಸೇವೆ ಸಲ್ಲಿಸುತ್ತಿದೆ. ಸರ್ಕಾರಿ ಶಾಲೆಗಳಿಗೆ ಮೂಲಭೂತ ಸೌಲಭ್ಯ ಒದಗಿಸುವದು, ಸುಣ್ಣ ಬಳಿಯುವದು, ಶೌಚಾಲಯ ನಿರ್ಮಿಸುವದು, ವಿಜ್ಞಾನಕ್ಕೆ ಸಂಬಂಧಿಸಿದ ಪರಿಕರಗಳನ್ನು ನೀಡುವದು ಕ್ಲಬ್ನ ಚಟುವಟಿಕೆಗಳಲ್ಲಿ ಸೇರಿದೆಯೆಂದು ಚಿತ್ರಾ ವಿ. ರಾವ್ ತಿಳಿಸಿದರು.
ಮಡಿಕೇರಿ ಕ್ಲಬ್ ಅಧ್ಯಕ್ಷೆ ಪÀÇರ್ಣಿಮಾ ಮಾತನಾಡಿ, ಅ. 2 ರಂದು ನಡೆಯುವ ಇನ್ನರ್ ವೀಲ್ ರ್ಯಾಲಿಗಾಗಿ 28 ಸದಸ್ಯರನ್ನು ಒಳಗೊಂಡ ಸಮಿತಿಯನ್ನು ರಚಿಸಲಾಗಿದೆ ಎಂದರು. 318 ಘಟಕ ಜಿಲ್ಲೆಯ ವಿವಿಧ ಭಾಗಗಳ 200 ಕ್ಕೂ ಹೆಚ್ಚು ಸದಸ್ಯರು ಮಡಿಕೇರಿಯಲ್ಲಿ ನಡೆಯುವ ರ್ಯಾಲಿಗೆ ಆಗಮಿಸಿ ವಿಚಾರ ವಿನಿಮಯದಲ್ಲಿ ತೊಡಗಲಿದ್ದಾರೆ ಎಂದರು. ಅಭಿವೃದ್ಧಿ ಕುರಿತು ಚಿಂತನೆ ಹಾಗೂ ಮನೋರಂಜನೆಯೊಂದಿಗೆ ನಡೆಯುವ ಕಾರ್ಯಕ್ರಮ ‘ಸ್ನೇಹ ಮಿಲನ’ ಶೀರ್ಷಿಕೆಯೊಂದಿಗೆ ನಡೆಯಲಿದೆ ಎಂದು ತಿಳಿಸಿದರು.