ಮಡಿಕೇರಿ, ಜೂ.10: ಪ್ರಸಕ್ತ ಸಾಲಿನ ಮುಂಗಡ ಪತ್ರದಲ್ಲಿ ಕೊಡಗು ಜಿಲ್ಲೆಗೆ ರೈಲು ಮಾರ್ಗ ಕಲ್ಪಿಸುವ ಕುರಿತು ರೈಲ್ವೇ ಸಚಿವರು ಪ್ರಕಟಿಸಿದ್ದರು. ಅದರ ಅನ್ವಯ ಕುಶಾಲನಗರದವರೆಗೆ ರೈಲು ಮಾರ್ಗ ಸ್ಥಾಪಿಸುವ ಅಧಿಕೃತ ಮಾಹಿತಿಯಿತ್ತು. ಅದರೆ, ಆ ಬಳಿಕದ ವಿದ್ಯಮಾನ ಜಿಲ್ಲೆ ಮತ್ತು ಹೊರ ಜಿಲ್ಲೆಗಳ ಕೊಡಗಿನ ಕೆಲವು ಪರಿಸರವಾದಿಗಳು, ನಿಸರ್ಗ ಪ್ರಿಯರು ಹಾಗೂ ಕೊಡಗಿನ ಅಭಿಮಾನಿಗಳ ನಿದ್ದೆಗೆಡಿಸಿದೆ. ಆಸಕ್ತ ವ್ಯಕ್ತಿಯೊಬ್ಬರು ಆರ್.ಟಿ.ಐ. ಕಾಯ್ದೆಯನ್ವಯ ಕರ್ನಾಟಕದ ರೈಲು ಅಧಿಕಾರಿಗಳಲ್ಲಿ ಕೊಡಗಿನ ರೈಲು ಮಾರ್ಗದ ವಿವರ ಬಯಸಿದರು. ರಾಜ್ಯದ ರೈಲು ಅಧಿಕಾರಿಗಳು ಲಿಖಿತವಾಗಿ ನೀಡಿದ ಮಾಹಿತಿ ಅರ್ಜಿದಾರರಿಗೆ ಆಘಾತ ಮೂಡಿಸಿತ್ತು. ಕೊಡಗಿನ ರೈಲು ಮಾರ್ಗವನ್ನು ಕುಶಾಲನಗರದವರೆಗೆ ಮಾತ್ರವಲ್ಲ. ಬಳಿಕ ಮುಂದುವರಿದು ಮಡಿಕೇರಿ ಹಾಗೂ ಮಡಿಕೇರಿಯಿಂದ ಮಕ್ಕಂದೂರು ರಸ್ತೆಯಲ್ಲಿ 3.5 ಕಿ.ಮೀ. ದೂರದವರೆಗೂ ವಿಸ್ತರಿಸುವ ಯೋಜನೆ ರೂಪಿಸಲಾಗಿದೆ ಎಂಬ ಸ್ಪಷ್ಟ ಮಾಹಿತಿ ನೀಡಲಾಗಿತ್ತು. ಈ ಕುರಿತು ಕೆಲವರು ಟ್ವೀಟ್ ಮೂಲಕ ಕೇಂದ್ರ ರೈಲ್ವೆ ಖಾತೆ ಸಚಿವ ಸುರೇಶ್ ಪ್ರಭು ಅವರಿಗೆ ಅಹವಾಲು ಸಲ್ಲಿಸಿ ಕುಶಾಲನಗರದವರೆಗೆ ನೇರ ಮಾರ್ಗವಿದ್ದು ಪರಿಸರಕ್ಕೆ ಅಷ್ಟೇನೂ ಧಕ್ಕೆಯಿಲ್ಲದಿರುವದರಿಂದ ಒಪ್ಪಬಹುದು.

ಆದರೆ,ತಿರುವುಗಳಿಂದ ಕೂಡಿದ ರಸ್ತೆ ಹಾಗೂ ತೋಟಗಳ, ಕಾಡುಗಳ ಬೀಡಾಗಿರುವ ಕುಶಾಲನಗರ-ಮಡಿಕೇರಿ ಹಾಗೂ ಮಕ್ಕಂದೂರು ಮಾರ್ಗಕ್ಕೆ ವಿಸ್ತರಿಸಿದರೆ, ಅರಣ್ಯ ಹನನ, ಕಾಫಿ ತೋಟಗಳ ನಾಶವಾಗುತ್ತದೆ ಎಂಬ ಆತಂಕ ವ್ಯಕ್ತಪಡಿಸಿದ್ದರು. ಈ ಬಗ್ಗೆ ಟ್ವೀಟ್ ಮೂಲಕವೇ ಉತ್ತರಿಸಿದ ರೈಲು ಖಾತೆ ಸಚಿವ ಸುರೇಶ್ ಪ್ರಭು ಅವರು ತಾನು ಯೋಜನೆಯ ವಿವರ ಮಾಹಿತಿಯನ್ನು ಪರಿಶೀಲಿಸುವದಾಗಿ ಖಚಿತಪಡಿಸಿದ್ದರು.

ಆದರೂ ಈ ವಿಚಾರ ಜಿಲ್ಲೆಗೆ ಆತಂಕಕಾರಿಯಾಗಿರುವದರಿಂದ ಜಿಲ್ಲೆಯ ಮತ್ತು ಮೈಸೂರು, ಬೆಂಗಳೂರಿನಲ್ಲಿ ನೆಲೆಸಿರುವ ಕೊಡಗಿನ ಜನರೂ ಸೇರಿದಂತೆ ನಿಸರ್ಗ ಪ್ರಿಯರನ್ನೊಳಗೊಂಡು ಇದುವರೆಗೆ 11,976 ಮಂದಿ ರೈಲು ಖಾತೆ ಸಚಿವ ಸುರೇಶ್ ಪ್ರಭು ಅವರಿಗೆ ರೈಲು ಮಾರ್ಗವನ್ನು ಮಡಿಕೇರಿಗೆ ವಿಸ್ತರಿಸದಂತೆ ಮನವಿ ಮಾಡಿರುವದಾಗಿ ಕೊಡಗಿನವರಾದ ಮೈಸೂರಿನ ವೃಂದಾವನ ಆಸ್ಪತ್ರೆಯ ವೈದ್ಯ ಡಾ. ಮಾತಂಡ ಅಯ್ಯಪ್ಪ ಅವರು “ಶಕ್ತಿ”ಗೆ ತಿಳಿಸಿದ್ದಾರೆ. ಅಲ್ಲದೆ, ಮತ್ತೊಮ್ಮೆ ಯೋಜನೆಯ ಬಗ್ಗೆ ವಿವರ ಪಡೆಯಲು ಆರ್.ಟಿ.ಐ ಕಾಯ್ದೆಯನ್ವಯ ಅಯ್ಯಪ್ಪ ಅವರು ರೈಲ್ವೆ ಅಧಿಕಾರಿಗಳಿಗೆ ಅರ್ಜಿ ಸಲ್ಲಿಸಿದ್ದಾರೆ.

ಆದರೆ, ಸರಕಾರದ ನಿರ್ಧಾರಗಳು ಕಾನೂನಾತ್ಮಕವಾಗಿ ಜಾರಿಗೊಂಡಾಗ ಅದನ್ನು ತಡೆಯುವದು ಅಸಾಧ್ಯವಾಗಬಹುದು ಎಂದು ಭಾವಿಸಿದ ಅನೇಕ ಪರಿಸರ ಪ್ರಿಯರು ಇದೀಗ ಟ್ವೀಟಿಂಗ್ ಮೂಲಕ ಕೇಂದ್ರ ರೈಲು ಖಾತೆ ಸಚಿವರಾದ ಸುರೇಶ್ ಪ್ರಭು ಹಾಗೂ ಪರಿಸರ ಖಾತೆ ಸಚಿವ ಪ್ರಕಾಶ್ ಜಾವಡೇಕರ್ ಮೊದಲಾದವರಿಗೆ ಮನವಿ ಸಲ್ಲಿಸಲಾರಂಭಿಸಿದ್ದಾರೆ. ಬೆಂಗಳೂರಿನಲ್ಲಿ ನೆಲೆಸಿರುವ ಕೊಡಗಿನವರಾದ ಸುಂದರ್ ಮುತ್ತಣ್ಣ್ಣ ಅವರು ಸಾಮಾಜಿಕ ಜಾಲ ತಾಣದ ಮೂಲಕ ಅರಂಭಿಸಿರುವ ಈ ಆಂದೋಲನದಲ್ಲಿ ಮುಖ್ಯವಾಗಿ ಮಡಿಕೇರಿ ಹಾಗೂ ಅಲ್ಲಿಂದ ಮುಂದೆ ಮಕ್ಕಂದೂರು ರಸ್ತೆಯಲ್ಲಿ 3.5 ಕಿ.ಮೀವರೆಗೆ ರೈಲು ಮಾರ್ಗ ವಿಸ್ತರಿಸಿರುವದಕ್ಕೆ ವಿರೋಧ ವ್ಯಕ್ತಪಡಿಸಲಾಗಿದೆ. ಮುಂಗಡ ಪತ್ರದಲ್ಲಿ ಕುಶಾಲನಗರದವರೆಗೆ ಮಾತ್ರ ರೈಲು ಮಾರ್ಗ ಎಂದು ಘೋಷಿಸಿ ಇದೀಗ ರಹಸ್ಯವಾಗಿ ಮಡಿಕೇರಿವರೆಗೆ ವಿಸ್ತರಿಸಲಿರುವ ಬಗ್ಗೆ ತೀವ್ರ ಆತಂಕ ವ್ಯಕ್ತಪಡಿಸಲಾಗಿದೆ. ಈ ಅಂದೋಲನಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು ಇದುವರೆಗೆ 11,976 ಮಂದಿ ಟ್ವೀಟ್ ಮಾಡಿ ವಿರೋಧಿಸಿದ್ದು ಈ ಪ್ರತಿಕ್ರಿಯೆಗಳು ಇನ್ನೂ ಮುಂದುವರಿಯಲಿವೆ.

ಕುಶಾಲನಗರದವರೆಗೆ ನೇರ ಮಾರ್ಗವಿದ್ದು, ಪರಿಸರಕ್ಕೆ ಹೆಚ್ಚು ಧಕ್ಕೆಯಾಗುವ ಸಂಭವ ಕಡಿಮೆ. ಆದರೆ, ಕುಶಾಲನಗರದಿಂದ ಮಡಿಕೇರಿವರೆಗೆ ಮುಂದುವರಿದರೆ, ಕಾಫಿ ಮತ್ತಿತರ ತೋಟಗಳು, ಗದ್ದೆ ಪ್ರದೇಶ ಹಾಗೂ ಅರಣ್ಯ ಪ್ರದೇಶಗಳು ನಾಶಗೊಳ್ಳಲಿವೆ. ತೋಟಗಳನ್ನು ಕಳೆದುಕೊಳ್ಳುವ ಸಾಮಾನ್ಯ ಕೃಷಿಕರು ಜೀವನೋಪಾಯಕ್ಕೆ ದಾರಿ ಕಾಣದ ದುಸ್ಥಿತಿ ತಲಪಲಿದೆ. ಅರಣ್ಯ ಪ್ರದೇಶಗಳ ನಾಶದಿಂದ ಜೀವನದಿ ಕಾವೇರಿಯ ಮೂಲಕ್ಕೇ ಧಕ್ಕೆ ಯಾಗಲಿದೆ. ಕಾವೇರಿ ಜಲಾನಯನ ಪ್ರದೇಶದಲ್ಲಿ ಸಾವಿರಾರು ಮರಗಳು ಧರೆಗುರುಳಬೇಕಾಗುತ್ತದೆ. ದಕ್ಷಿಣ ಭಾರತದ ಸುಮಾರು 8 ಕೋಟಿ ಮಂದಿ ಕಾವೇರಿ ನದಿಯನ್ನು ವಿವಿಧ ರೀತಿಯಲ್ಲಿ ಅವಲಂಬಿಸಿದ್ದಾರೆ. ಕುಡಿಯುವ ನೀರು, ಕೃಷಿ ಬೆಳೆ ಹಾಗೂ ಆರ್ಥಿಕ ಸ್ಥಿತಿ ಮೇಲೆ ದುಷ್ಪರಿಣಾಮ ಬೀರಲಿದೆ. ಜನ ಜೀವನ ಅಸ್ತವ್ಯಸ್ತಗೊಳ್ಳಲಿದೆ ಎಂದು ಮನವಿಯಲ್ಲಿ ಅಭಿಪ್ರಾಯ ಪಡಲಾಗಿದೆ.

ಈ ಮನವಿಗೆ ‘ಸೆಲೆಬ್ರಿಟಿ’ ಗಳಾದ ನಿಕಿಲ್ ಚಿಣ್ಣಪ್ಪ, ಮಿಲಿಂದ್ ಸೋಮನ್ ಮೊದಲಾದವರು ಬೆಂಬಲಿಸಿದ್ದಾರೆ. ನೆಲ್ಲಮಕ್ಕಡ ಅಯ್ಯಣ್ಣ, ದೇವಿಕಾ ದೇವಯ್ಯ, ಡಾ. ಕೋಡೀರ ಕುಶಾಲಪ್ಪ, ಎಂ.ಎನ್.ಸವಿ ಪೊನ್ನಮ್ಮ, ಸೃಷ್ಟಿ ಕುಕ್ರೇಜಾ, ಫೆಫ್ಮಿ ಮೊಹಮ್ಮದ್ ಮುಂತಾದವರು ಕೈ ಜೋಡಿಸಿದ್ದಾರೆ. 15 ಸಾವಿರ ಸಹಿ ಆಂದೋಲನದ ಗುರಿಯಿದ್ದು, ಇದೀಗ ಆ ಸಂಖ್ಯೆಯನ್ನೂ ಮೀರಲಿದೆ ಎಂದು ಡಾ. ಅಯ್ಯಪ್ಪ “ಶಕ್ತಿ” ಗೆ ತಿಳಿಸಿದ್ದು, ಕೊಡಗಿನ ಜನ ಜಿಲ್ಲೆಯ ಅಸ್ತಿತ್ವದ ದೃಷ್ಟಿಯಿಂದ ಈ ಅಭಿಪ್ರಾಯ ಸಂಚಲನಕ್ಕೆ ಸಹಮತದ ಬೆಂಬಲ ನೀಡಿ ಕೇಂದ್ರ ಮತ್ತು ರಾಜ್ಯ ಸರಕಾರಗಳ ಗಮನಕ್ಕೆ ತಂದು ರೈಲು ಮಾರ್ಗವನ್ನು ಮಡಿಕೇರಿಗೆ ವಿಸ್ತರಿಸುವ ಪ್ರಕ್ರಿಯೆ ಸ್ಥಗಿತಗೊಳಿಸಲು ಸಹಕರಿಸುವಂತೆ ಕೋರಿದ್ದಾರೆ.