ಮಡಿಕೇರಿ, ಜು. 5: ಮಡಿಕೇರಿ ನಗರ ಬಿಜೆಪಿಯ ನೂತನ ಪದಾಧಿಕಾರಿಗಳ ಆಯ್ಕೆಯ ವಿಚಾರದಲ್ಲಿ ಪಕ್ಷದ ಕಾರ್ಯಕರ್ತರ ನಡುವೆ ಅಸಮಾಧಾನದ ಹೊಗೆ ಕಾಣಿಸಿಕೊಂಡಿದೆ. ನೂತನ ಅಧ್ಯಕ್ಷರು ಹಾಗೂ ಪದಾಧಿಕಾರಿಗಳ ಆಯ್ಕೆ ಏಕಪಕ್ಷೀಯವಾಗಿ ನಡೆದಿದೆ ಎಂದು ಕೆಲವು ಪ್ರಮುಖ ಕಾರ್ಯಕರ್ತರು ಆಕ್ಷೇಪಿಸಿದ್ದು, ಈ ಕುರಿತು ಪತ್ರಿಕಾ ಹೇಳಿಕೆ ನೀಡಿದ್ದಾರೆ.
ಭಾರತೀಯ ಜನತಾ ಪಾರ್ಟಿಯ ನೂತನ ನಗರ ಸಮಿತಿ ರಚನೆಯಾಗಿರುವದು, ನಿಷ್ಠಾವಂತ ಕಾರ್ಯಕರ್ತರ ಹಾಗೂ 23 ವಾರ್ಡ್ ಅಧ್ಯಕ್ಷರ ಮತ್ತು ನಗರಸಭಾ ಸದಸ್ಯರ ಗಮನಕ್ಕೆ ಬಂದಿಲ್ಲ. ಅದರಲ್ಲೂ ನಗರ ಹಾಗೂ ತಾಲೂಕು ಮಟ್ಟದಲ್ಲಿ ಯಾವದೇ ಸಭೆಯನ್ನು ಕರೆಯದೆ ಈ ಹಿಂದಿನ ಅಧ್ಯಕ್ಷರು ಮತ್ತು ಪ್ರಧಾನ ಕಾರ್ಯದರ್ಶಿಯವರನ್ನು ಪುನಃ ಅದೇ ಸ್ಥಾನದಲ್ಲಿ ಮುಂದುವರಿಸಿರುವದು ಪಕ್ಷದಲ್ಲಿ ನಿಷ್ಠಾವಂತ ಕಾರ್ಯಕರ್ತರು ಅವಕಾಶ ವಂಚಿತರಾಗಿದ್ದಾರೆ.
ಹಿಂದಿನ ನಗರಸಭಾ ಚುನಾವಣೆಯಲ್ಲಿ ಈಗಿನ ಅಧ್ಯಕ್ಷರು ಹಾಗೂ ಪ್ರಧಾನ ಕಾರ್ಯದರ್ಶಿಗಳು ಚುನಾವಣೆಯಲ್ಲಿ ಸ್ಪರ್ಧಿಸಿ ಹೀನಾಯವಾಗಿ ಸೋತು, ಪಕ್ಷವನ್ನು ಅಧಿಕಾರಕ್ಕೆ ತರಲು ವಿಫಲರಾಗಿದ್ದಾರೆ. ಆ ಸಂದರ್ಭದಲ್ಲಿ ನೈತಿಕ ಹೊಣೆ ಹೊತ್ತು ರಾಜಿನಾಮೆ ಕೊಡಬೇಕಾದವರನ್ನು ಪುನಃ ಆಯ್ಕೆ ಮಾಡಿರುವದು ಸಮಂಜಸವಲ್ಲ. ಪಕ್ಷದ ತತ್ವ ನೀತಿ ಸಿದ್ಧಾಂತಗಳನ್ನು ಗಾಳಿಗೆ ತೂರಿ ನೇಮಕಾತಿ ಮಾಡಿರುವದು ಖಂಡನೀಯ.
ಈ ಹಿಂದಿನಿಂದಲೂ ಪಕ್ಷದ 23 ವಾರ್ಡ್ನ ಅಧ್ಯಕ್ಷ ಮತ್ತು ಪ್ರಧಾನ ಕಾರ್ಯದರ್ಶಿಗಳು, ನಗರಸಭಾ ಸದಸ್ಯರು ಹಾಗೂ ಪಕ್ಷದ ಹಿರಿಯರ ಸಮ್ಮುಖದಲ್ಲಿ ಅಧ್ಯಕ್ಷ ಮತ್ತು ಕಾರ್ಯದರ್ಶಿಯನ್ನು ಆಯ್ಕೆ ಮಾಡಲಾಗುತ್ತಿತ್ತು. ಈಗಿನ ಅಧ್ಯಕ್ಷರು ಮತ್ತು ಪ್ರಧಾನ ಕಾರ್ಯದರ್ಶಿಗಳ ಆಯ್ಕೆಯನ್ನು ಬೆರಳೆಣಿಕೆಯಷ್ಟು ಮಂದಿಯನ್ನು ಸೇರಿಸಿಕೊಂಡು ಗುಪ್ತ ಸಭೆಯನ್ನು ನಡೆಸಿ ಆಯ್ಕೆ ಮಾಡಲಾಗಿದೆ. ಹಿರಿಯ ನಾಯಕರನ್ನು ಈ ಬಗ್ಗೆ ಪ್ರಶ್ನಿಸಿದಾಗ ಇದು ರಾಜ್ಯ ನಾಯಕರ ತೀರ್ಮಾನ ಎಂಬ ಉತ್ತರ ದೊರೆತಿದೆ. ಈಗಿನ ಸಮಿತಿ ಅಸಿಂಧುವಾಗಿದ್ದು, ಎಲ್ಲಾ 23 ವಾರ್ಡ್ನ ಅಧ್ಯಕ್ಷರು ಮತ್ತು ಸದಸ್ಯರನ್ನು ಸೇರಿಸಿ ಪುನಃ ನೂತನ ಸಮಿತಿಯನ್ನು ರಚನೆ ಮಾಡುವಂತೆ ಜಿಲ್ಲಾ ನಾಯಕರಿಗೆ ಒತ್ತಾಯ ಮಾಡುವದಾಗಿ ಸ್ಥಾನಾಕಾಂಕ್ಷಿಗಳಾಗಿದ್ದ ಕಾರ್ಯಕರ್ತರು ಲಿಖಿತ ಹೇಳಿಕೆಯಲ್ಲಿ ತಿಳಿಸಿದ್ದಾರೆ.