ಮಡಿಕೇರಿ, ಅ. 6: ಮಡಿಕೇರಿ ಜನೋತ್ಸವ ಅಂಗವಾಗಿ ವಿವಿಧ ಚಟುವಟಿಕೆಗಳೊಂದಿಗೆ ಕ್ರೀಡಾ ಕೂಟವೂ ವಿಶೇಷ ಗಮನ ಸೆಳೆಯುತ್ತಿದೆ. ನಗರದ ದಸರಾ ಕ್ರೀಡಾ ಸಮಿತಿ ವತಿಯಿಂದ ತಾ. 5 ರಿಂದ 8ರತನಕ ವಿವಿಧ ಕ್ರೀಡಾಸ್ಪರ್ಧೆಗಳನ್ನು ಹಲವು ವಿಭಾಗಗಳಲ್ಲಿ ಆಯೋಜಿಸ ಲಾಗಿದೆ. ತಾ. 5 ರಂದು ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಮೆರಥಾನ್ ಸ್ಪರ್ಧೆ ಏರ್ಪಡಿಸಲಾಗಿತ್ತು. ತಾ. 6 ರ ಗುರುವಾರದಂದು ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ವಿವಿಧ ರೀತಿಯ ಕ್ರೀಡಾ ಸ್ಪರ್ಧೆಗಳನ್ನು ಆಯೋಜಿಸ ಲಾಗಿದ್ದು, ಕ್ರೀಡಾಸಕ್ತರು ಉತ್ಸುಕತೆ ಯಿಂದ ತೊಡಗಿಸಿ ಕೊಂಡಿದ್ದರು.

ಓಟದ ಸ್ಪರ್ಧೆ, ಥ್ರೋಬಾಲ್, 5 ಆಟಗಾರರ ಫುಟ್ಭಾಲ್, ನಡಿಗೆ ಸ್ಪರ್ಧೆ, ಸೈಕಲ್‍ರೇಸ್, ಹಗ್ಗಜಗ್ಗಾಟ, ವಾಲಗ ಕುಣಿತ ಸೇರಿದಂತೆ ಹಲವು ಸ್ಪರ್ಧೆಗಳು ಇಂದು ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆದರೆ, ತೆಂಗಿನಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆ, ಶ್ರೀ ರಾಜರಾಜೇಶ್ವರಿ ಶಾಲಾ ಆವರಣದಲ್ಲಿ ಜರುಗಿತು. ಸಾರ್ವಜನಿಕರಿಗೆ, ವಿದ್ಯಾರ್ಥಿಗಳಿಗೆ, ದಸರಾ ಸಮಿತಿ ಪದಾಧಿಕಾರಿಗಳು, ಪತ್ರಕರ್ತರು, ನಗರಸಭಾ ಸಿಬ್ಬಂದಿ ಗಳಿಗೂ ವಿವಿಧ ಸ್ಪರ್ಧೆಗಳನ್ನು ಕ್ರೀಡಾಸಮಿತಿ ಆಯೋಜಿಸಿತ್ತು. ಕ್ರೀಡಾ ಸಮಿತಿ ಅಧ್ಯಕ್ಷ ಮಂಡೀರ ಸದಾ ಮುದ್ದಪ್ಪ ನೇತೃತ್ವದ ಕ್ರೀಡಾ ಸಮಿತಿಯ ಪದಾಧಿಕಾರಿಗಳು ದಸರಾ ಉತ್ಸವಕ್ಕೆ ಕ್ರೀಡೆಯ ಮೆರುಗು ನೀಡಿದರು.

ಕ್ರೀಡೆಗೂ ಹಬ್ಬಕ್ಕೂ ವಿಶೇಷ ಸಂಬಂಧ : ವೀಣಾ

ಕೊಡಗು ಜಿಲ್ಲೆ ಕ್ರೀಡೆಗೆ ಹೆಸರುವಾಸಿಯಾಗಿದೆ. ಅದರಲ್ಲೂ ಜಿಲ್ಲೆಯಲ್ಲಿ ಕ್ರೀಡೆಗೂ ಹಬ್ಬಕ್ಕೂ ವಿಶೇಷ ಸಂಬಂಧವಿದೆ ಎಂದು ಕ್ರೀಡಾ ಕೂಟವನ್ನು ಉದ್ಘಾಟಿಸಿದ ವಿಧಾನ ಪರಿಷತ್ ಸದಸ್ಯೆ ಶಾಂತೆಯಂಡ ವೀಣಾ ಅಚ್ಚಯ್ಯ ಅಭಿಪ್ರಾಯ ವ್ಯಕ್ತಪಡಿಸಿದರು. ಹಬ್ಬಗಳಿಗೆ ಕ್ರೀಡೆಯ ಸಂಬಂಧವಿರುವದರಿಂದ ಕ್ರೀಡಾಪಟು ಗಳಿಗೆ ಸಾಕಷ್ಟು ಅನುಕೂಲವಾಗಲಿದೆ ಇದರೊಂದಿಗೆ ಪ್ರತಿಭೆಗಳನ್ನು ಗುರುತಿಸಿ ಉತ್ತೇಜನ ನೀಡುವಂತಾಗಬೇಕೆಂದು ಅವರು ಕರೆ ನೀಡಿದರು.

ದಸರಾ ಸಮಿತಿ ಅಧ್ಯಕ್ಷೆಯಾಗಿರುವ ನಗರಸಭಾ ಅಧ್ಯಕ್ಷೆ ಕೂಡಕಂಡಿ ಕಾವೇರಮ್ಮ ಸೋಮಣ್ಣ, ದಸರಾ ಸಮಿತಿ ಕಾರ್ಯಾಧ್ಯಕ್ಷ ಮಹೇಶ್ ಜೈನಿ ಅವರುಗಳು ಕ್ರೀಡಾಕೂಟಕ್ಕೆ ಶುಭ ಹಾರೈಸಿ ಮಾತನಾಡಿದರು.

ಈ ಸಂದರ್ಭ ದಸರಾ ಸಮಿತಿ ಪ್ರಧಾನ ಕಾರ್ಯದರ್ಶಿ ಚುಮ್ಮಿದೇವಯ್ಯ, ಮಾಜಿ ಅಧ್ಯಕ್ಷ ಕೆ.ಎಂ. ಗಣೇಶ್, ನಗರಸಭಾ ಸದಸ್ಯ ಪಿ.ಡಿ. ಪೊನ್ನಪ್ಪ, ಕ್ರೀಡಾ ಸಮಿತಿ ಅಧ್ಯಕ್ಷ ಮಂಡೀರ ಸದಾ ಮುದ್ದಪ್ಪ ಹಾಗೂ ಪದಾಧಿಕಾರಿಗಳು ಹಾಜರಿದ್ದರು.

ಉದ್ಘಾಟನಾ ಸಮಾರಂಭದಲ್ಲಿ ರಾಷ್ಟ್ರೀಯ ಹಾಕಿಪಟು ನಿಡುಮಂಡ ನಿಶಾ ನಂಜಪ್ಪ ಅವರನ್ನು ಸನ್ಮಾನಿಸಲಾಯಿತು. ಯುಕ್ತಾ ನೀಲಮ್ಮ ಪ್ರಾರ್ಥಿಸಿ, ದೈಹಿಕ ಶಿಕ್ಷಕ ರಮೇಶ್ ಸ್ವಾಗತಿಸಿ ನಿರೂಪಿಸಿದರು. ದೇವರಾಜ್ ವಂದಿಸಿದರು.