ಮಡಿಕೇರಿ, ಆ. 22: ಐತಿಹಾಸಿಕ ನಾಡಹಬ್ಬ ಮಡಿಕೇರಿ ದಸರಾ ಉತ್ಸವಕ್ಕೆ ಈ ಬಾರಿ 1,51,61,000 ರೂ.ಗಳ ಕರಡು ಆಯವ್ಯಯ ಪಟ್ಟಿ ತಯಾರಿಸಲಾಗಿದ್ದು, ಮುಖ್ಯ ಮಂತ್ರಿಯವರನ್ನು ಭೇಟಿ ಮಾಡಿ ಅನುದಾನಕ್ಕೆ ಬೇಡಿಕೆಯಿಡಲು ಮಡಿಕೇರಿ ದಸರಾ ಸಮಿತಿ ತೀರ್ಮಾನಿಸಿದೆ.

ದಸರಾ ಸಮಿತಿ ಹಾಗೂ ನಗರಸಭಾ ಅಧ್ಯಕ್ಷೆಯಾಗಿರುವ ಶ್ರೀಮತಿ ಬಂಗೇರ ಅಧ್ಯಕ್ಷತೆಯಲ್ಲಿ ಇಂದು ಕಾವೇರಿ ಕಲಾಕ್ಷೇತ್ರದಲ್ಲಿ ಸಭೆ ನಡೆಯಿತು. ಕಳೆದ ಬಾರಿ ಉತ್ಸವಕ್ಕೆ 75,36,617 ರೂ. ಖರ್ಚಾಗಿದ್ದು, 2,57,000 ರೂ. ಉಳಿತಾಯ ವಾಗಿದೆ ಎಂದು ಖಜಾಂಚಿ ಅನಿತಾ ಪೂವಯ್ಯ ಮಾಹಿತಿಯಿತ್ತರು.

ಆಕ್ಷೇಪ : ಕಳೆದ ಬಾರಿ ದಸರಾ ಉತ್ಸವದಲ್ಲಿ ಆದಂತಹ ಖರ್ಚು ವೆಚ್ಚಗಳ ಬಗ್ಗೆ ಲೆಕ್ಕ ಪರಿಶೋಧಕರಿಂದ ‘ಆಡಿಟ್’ ಮಾಡಿಸದ ಕುರಿತು ಆಕ್ಷೇಪ ವ್ಯಕ್ತವಾಯಿತು.

ಸಮಿತಿಯ ಕಾರ್ಯದರ್ಶಿ ನಗರಸಭಾ ಆಯುಕ್ತೆ ಪುಷ್ಪಾವತಿಯವರ ಸಹಿ ಇರುವ ಪತ್ರದಲ್ಲಿ ಖರ್ಚು ವೆಚ್ಚದ ಮಾಹಿತಿಯನ್ನು ಮುದ್ರಿಸಲಾಗಿತ್ತು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ದಸರಾ ಸಮಿತಿ ಗೌರವಾಧ್ಯಕ್ಷ ಕೊಡಗು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ ಅವರು ಕಳೆದ ಬಾರಿಯ ಖರ್ಚು ವೆಚ್ಚವನ್ನು ಏಕೆ ‘ಆಡಿಟ್’ ಮಾಡಿಸಿಲ್ಲ ಎಂದು ಪ್ರಶ್ನಿಸಿದರು ಮಾತ್ರವಲ್ಲದೆ ಲೆಕ್ಕ ಪತ್ರದಲ್ಲಿ ಕನ್ನಡ ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕರ ಪ್ರಯಾಣ ವೆಚ್ಚ 42,136 ಎಂದು ತೋರಿಸಲಾಗಿದ್ದು, ಅಷ್ಟು ದುಬಾರಿ ವೆಚ್ಚ ಹೇಗೆ ಸಾಧ್ಯ. ಸ್ಪಷ್ಟನೆ ನೀಡಿ ಎಂದು ಒತ್ತಾಯಿಸಿದರು. ಮತ್ತೋರ್ವ ಗೌರವಾಧ್ಯಕ್ಷ ಸತೀಶ್ ಪೈ ಅವರು ಕೂಡ ಲೆಕ್ಕಪತ್ರವನ್ನು ಆಡಿಟ್ ಮಾಡಿಸದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ದಸರಾ ಸಮಿತಿ ಪ್ರಧಾನ ಕಾರ್ಯದರ್ಶಿ ಚುಮ್ಮಿದೇವಯ್ಯ ಪೌರಾಯುಕ್ತರೆ ದಸರಾ ವೆಚ್ಚದ ಹಣವನ್ನು ಪಾವತಿ ಮಾಡುವಂತೆ ಸರ್ಕಾರದ ಆದೇಶವಿದೆ ಎಂದರು. ಕಳೆದ ಬಾರಿ ಎರಡು ಕಂತುಗಳಲ್ಲಿ ಉತ್ಸವಕ್ಕೆ ಹಣ ಬಿಡುಗಡೆಯಾಯಿತು. ಅದರಲ್ಲಿ ಎರಡನೇ ಕಂತಿನ ಹಣ ತಡವಾಗಿ ಬಿಡುಗಡೆಯಾದ್ದರಿಂದ ಸಾರ್ವಜನಿಕ ವಲಯದಲ್ಲಿ ವಂತಿಗೆ ಸಂಗ್ರಹಿಸಿದ ಹಣದಲ್ಲಿ ಉತ್ಸವದ ಖರ್ಚು ವೆಚ್ಚ ನಿಭಾಯಿಸಲಾಯಿತು ಎಂದರು.

ನಗರಸಭಾ ಮಾಜಿ ಸದಸ್ಯ ಉಮೇಶ್ ಸುಬ್ರಮಣಿ ಮಾತನಾಡಿ, ಕಡಿಮೆ ಅವಧಿಯಲ್ಲಿ ಕಳೆದ ಬಾರಿ ದಸರಾವನ್ನು ಯಶಸ್ವಿಯಾಗಿ ನಡೆಸಲಾಗಿದ್ದು, ಅದಕ್ಕೆ ಸಮಿತಿಯನ್ನು ಅಭಿನಂದಿಸುವದನ್ನು ಬಿಟ್ಟು ವಿರೋಧ

(ಮೊದಲ ಪುಟದಿಂದ) ವ್ಯಕ್ತಪಡಿಸುವದು ಸರಿಯಲ್ಲ ಎಂದು ಸತೀಶ್ ಪೈ ಅವರಿಗೆ ಹೇಳಿದರು. ತಾನು ವಿರೋಧಿಸುತ್ತಿಲ್ಲ ‘ಆಡಿಟ್’ ಏಕೆ ಮಾಡಿಲ್ಲ ಎಂದು ಸ್ಪಷ್ಟನೆ ಕೇಳಿದೆ ಎಂದು ಸತೀಶ್ ಪೈ ಹೇಳಿದರು.

ನಗರಸಭಾ ಸದಸ್ಯ ಕೆ.ಎಸ್. ರಮೇಶ್ ಮಾತನಾಡಿ, ದಸರಾ ಸಮಿತಿ ಈ ಹಿಂದೆ ಮಡಿಕೇರಿ ನಗರದಲ್ಲಿ ದೇಣಿಗೆ ಸಂಗ್ರಹಿಸಿ ದ್ದರಿಂದಾಗಿ ದಸರಾ ಮಂಟಪ ಸಮಿತಿಗಳಿಗೆ ತೊಂದರೆಯಾಗಿದೆ. ಆದ್ದರಿಂದ ದಸರಾ ಸಮಿತಿ ಮಡಿಕೇರಿ ನಗರ ದೊಳಗೆ ದೇಣಿಗೆ ಸಂಗ್ರಹಿಸಬಾರದು. ಒಂದು ವೇಳೆ ಸಂಗ್ರಹಿಸುವದಾದರೆ ಮಂಟಪಗಳಿಗೆ ತಲಾ ರೂ. 5 ಲಕ್ಷ ಹಣ ನೀಡಬೇಕು ಎಂದು ಆಗ್ರಹಿಸಿದರು.

ಕಾರ್ಯಾಧ್ಯಕ್ಷ ಮಹೇಶ್ ಜೈನಿ ಮಾತನಾಡಿ, ಕಳೆದ ಬಾರಿ ಸರ್ವರ ಸಹಕಾರದಿಂದ ಉತ್ಸವ ಯಶಸ್ವಿ ಯಾಗಿದ್ದು, ಈ ಬಾರಿಯು ಸಹಕಾರ ನೀಡುವಂತೆ ಕೋರಿದರು.

ಗೌರವಾಧ್ಯಕ್ಷ ಎಂ.ಬಿ. ದೇವಯ್ಯ ಮಾತನಾಡಿ, ದಸರಾ ಸಮಿತಿ ಬೈಲಾ ರಚನೆ ಶೀಘ್ರ ಆಗಬೇಕು. ಸಮಿತಿ ಮುಂದುವರೆಯಲು ಬೈಲಾ ಹೆಚ್ಚು ಸಹಕಾರಿಯಾಗಲಿದೆ ಎಂದು ಅಭಿಪ್ರಾಯಿಸಿದರು.

ದಶಮಂಟಪ ಸಮಿತಿ ಅಧ್ಯಕ್ಷ ಬಿ.ಎಂ. ರಾಜೇಶ್ ಮಾತನಾಡಿ, ಪೊಲೀಸ್ ಇಲಾಖೆ ದಶಮಂಟಪ ಸಮಿತಿಗೆ ಸೂಕ್ತ ಸಹಕಾರ ನೀಡುತ್ತಿಲ್ಲ. ಈ ಬಾರಿಯಾದರೂ ಪೊಲೀಸ್ ಇಲಾಖೆ ಸಹಕಾರ ನೀಡವಂತಾಗಲಿ ಎಂದರು. ಈ ಸಂದರ್ಭ ಸಮಿತಿಯ ಪ್ರಮುಖರಾದ, ಉಪಾಧ್ಯಕ್ಷ ಅರುಣ್ ಕುಮಾರ್, ಉದಯಕುಮಾರ್, ಗೌರವಾಧ್ಯಕ್ಷರಾದ ಕಾವೇರಮ್ಮ ಸೋಮಣ್ಣ, ಜುಲೇಕಾಬಿ, ಎಸ್.ಸಿ. ಸುಬ್ರಮಣಿ, ಮೋಹನ್, ಕ್ರೀಡಾ ಸಮಿತಿ ಅಧ್ಯಕ್ಷರಾದ ಸದಾ ಮುದ್ದಪ್ಪ, ಗಿಲ್ಬರ್ಟ್ ಲೋಬೋ ಮತ್ತಿತರರು ಇದ್ದರು.

ಕಾರ್ಯದರ್ಶಿ ನಗರಸಭಾ ಆಯುಕ್ತೆ ಪುಷ್ಪಾವತಿ ಕಳೆದ ಬಾರಿಯ ವರದಿ ಮಂಡಿಸಿದರು. ಅನಿತಾ ಪೂವಯ್ಯ ಪ್ರಾರ್ಥಿಸಿ, ಚುಮ್ಮಿದೇವಯ್ಯ ನಿರೂಪಿಸಿ, ಸ್ವಾಗತಿಸಿದರು. ಸ್ವಾಗತ ಸಮಿತಿ ಅಧ್ಯಕ್ಷ ಕಾನೆಹಿತ್ಲು ಮೊಣ್ಣಪ್ಪ ವಂದಿಸಿದರು.