ಮಡಿಕೇರಿ, ಆ. 10: ಜಿಲ್ಲೆಯ ಹಿರಿಯ ಕೊಡವ ಸಮಾಜವಾಗಿದ್ದು, ಎಲ್ಲಾ ಕಡೆಗಳಿಂದ ಸದಸ್ಯತ್ವ ಹೊಂದಿರುವ ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿರುವ ಮಡಿಕೇರಿ ಕೊಡವ ಸಮಾಜದಲ್ಲಿ ಇದೀಗ ಚುನಾವಣೆಯ ಕಾವು ಉಂಟಾಗಿದೆ. ಮುಂದಿನ ಮೂರು ವರ್ಷಗಳ ಅಧಿಕಾರಾವಧಿಗೆ ಚುನಾವಣೆ ಘೋಷಣೆ ಯಾಗಿದ್ದು, ತಾ. 21ರಂದು ಚುನಾವಣೆ ನಡೆಯಲಿದೆ. ಹಾಲಿ ಅಧ್ಯಕ್ಷ ಮೂವೇರ ಶಂಭು ಸುಬ್ಬಯ್ಯ ಹಾಗೂ ತಂಡದ ಅಧಿಕಾರಾವಧಿ ಮುಕ್ತಾಯ ಗೊಳ್ಳಲಿದ್ದು, ಸಮಾಜಕ್ಕೆ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಬೇಕಿದೆ. ನಾಮಪತ್ರ ಸಲ್ಲಿಕೆಗೆ ತಾ. 10 ಅಂತಿಮ ದಿನವಾಗಿದ್ದು, ಬಹುತೇಕ ಚುನಾವಣೆ ಖಚಿತವಾದಂತಿದೆ.

ಅಧ್ಯಕ್ಷ, ಉಪಾಧ್ಯಕ್ಷ, ಕಾರ್ಯದರ್ಶಿ, ಜಂಟಿ ಕಾರ್ಯದರ್ಶಿ, 8 ನಿರ್ದೇಶಕರು ಹಾಗೂ 3 ಮಹಿಳಾ ನಿರ್ದೇಶಕರ ಸ್ಥಾನಕ್ಕೆ ಚುನಾವಣೆ ನಡೆಯಬೇಕಿದೆ. ಅಧ್ಯಕ್ಷ ಸ್ಥಾನಕ್ಕೆ ಹಾಲಿ ಉಪಾಧ್ಯಕ್ಷ ಮಂಡೇಪಂಡ ರತನ್ ಸುಬ್ಬಯ್ಯ ಹಾಗೂ ಕೊಂಗಾಂಡ ಎಸ್. ದೇವಯ್ಯ (ಜಯ) ನಾಮಪತ್ರ ಸಲ್ಲಿಸಿದ್ದಾರೆ. ಉಪಾಧ್ಯಕ್ಷ ಸ್ಥಾನಕ್ಕೆ ಮಂಡೀರ ದೇವಿ ಪೂಣಚ್ಚ, ಮಣವಟ್ಟಿರ ಚಿಣ್ಣಪ್ಪ, ಬೊಪ್ಪಂಡ ಶ್ಯಾಮ್ ಪೂಣಚ್ಚ, ಮಂಡುವಂಡ ಜೋಯಪ್ಪ, ಕಾರ್ಯದರ್ಶಿ ಸ್ಥಾನಕ್ಕೆ ಶಾಂತೆಯಂಡ ಸನ್ನಿಪೂವಯ್ಯ ಹಾಗೂ ಅರೆಯಡ ರಮೇಶ್, ಜಂಟಿ ಕಾರ್ಯದರ್ಶಿ ಸ್ಥಾನಕ್ಕೆ ಮಾದೇಟಿರ ಬೆಳ್ಯಪ್ಪ, ಮುಂಡಂಡ ಪೂವಪ್ಪ, ಮಂಡಚಂಡ ಭೀಮಯ್ಯ, ನಂದಿನೆರವಂಡ ಚೀಯಣ್ಣ ಹಾಗೂ ಮಣವಟ್ಟಿರ ಚಿಣ್ಣಪ್ಪ ನಾಮಪತ್ರ ಸಲ್ಲಿಸಿದ್ದಾರೆ. 8 ನಿರ್ದೇಶಕರ ಸ್ಥಾನಕ್ಕೆ 13 ಮಂದಿ ಹಾಗೂ 3 ಮಹಿಳಾ ನಿರ್ದೇಶಕ ಸ್ಥಾನಕ್ಕೆ 7 ಮಂದಿ ನಾಮಪತ್ರ ಸಲ್ಲಿಸಿದ್ದಾರೆ.

ತಾ. 11ರಂದು (ಇಂದು) ನಾಮಪತ್ರ ಪರಿಶೀಲನೆ ನಡೆಯಲಿದ್ದು, ನಾಮಪತ್ರ ಹಿಂಪಡೆಯಲು ತಾ. 12 ಕೊನೆಯ ದಿನವಾಗಿದೆ. ಚುನಾವಣಾಧಿಕಾರಿಯಾಗಿ ತೋಟಗಾರಿಕಾ ಇಲಾಖಾಧಿಕಾರಿ ಚೆಕ್ಕೇರ ಪ್ರಮೋದ್ ನಿಯೋಜಿತರಾಗಿದ್ದಾರೆ.