ಮಡಿಕೇರಿ, ಸೆ. 21 : ಮಾನವ ಚಿರಾಯುವಾಗಲು ಸಾಧ್ಯವಿಲ್ಲ ವಾದರೂ ಪುಸ್ತಕಗಳು ಎಂದಿಗೂ ಚಿರಾಯುವಾಗಿರುತ್ತದೆಂದು ಅಭಿಪ್ರಾಯಿಸಿದ ಜಿಲ್ಲಾಧಿಕಾರಿ ಡಾ| ರಿಚರ್ಡ್ ವಿನ್ಸೆಂಟ್ ಡಿಸೋಜ, ಜ್ಞಾನದ ಎಲ್ಲೆಗಳನ್ನು ವಿಸ್ತರಿಸುವ ಓದಿನ ಅಭಿರುಚಿಯನ್ನು ಮಕ್ಕಳಲ್ಲಿ ಹೆಚ್ಚಿಸಲು ಪ್ರಯತ್ನಿಸಬೇಕೆಂದು ಕರೆ ನೀಡಿದರು.

ಸಿಂಗಾಪುರದಲ್ಲಿ ನೆಲೆಸಿರುವ ಜಿಲ್ಲೆಯ ನಿಶಿ ಕುಟ್ಟಣ್ಣ ಅವರು ಸಂಗ್ರಹಿಸಿ ಕಳುಹಿಸಿರುವ ನೂರಾರು ಅತ್ಯುಪಯುಕ್ತವಾದ ವಿವಿಧ ವಿಚಾರಗಳ ಪುಸ್ತಕಗಳನ್ನು ಜಿಲ್ಲೆಯ ವಿವಿಧ ಶಾಲೆಗಳಿಗೆ ವಿತರಿಸುವ ಕಾರ್ಯಕ್ರಮ ನಗರದ ಭಾರತೀಯ ವಿದ್ಯಾಭವನದÀ ಸಭಾಂಗಣದಲ್ಲಿ ನಡೆಯಿತು. ಕೊಡಗು ಜಿಲ್ಲಾ ಪತ್ರಕರ್ತರ ಸಂಘÀ, ಭಾರತೀಯ ವಿದ್ಯಾಭವನದ ಕೊಡಗು ಕೇಂದ್ರ ಮತ್ತು ಹೊಸ್ಕೇರಿ ಅರೆಕಾಡಿನ ಸ್ಪ್ರೌಟ್ ವುಮೆನ್ ಫಾರ್ಮರ್ಸ್ ಕ್ಲಬ್‍ನ ವತಿಯಿಂದ ನಡೆದ ಕಾರ್ಯಕ್ರಮವನ್ನು (ಮೊದಲ ಪುಟದಿಂದ) ಉದ್ಘಾಟಿಸಿ ಜಿಲ್ಲಾಧಿಕಾರಿಗಳು ಮಾತನಾಡಿದರು.

ಪ್ರಸ್ತುತ ಓದುವ ಹವ್ಯಾಸ ಕಡಿಮೆಯಾಗುತ್ತಿದ್ದು, ಸಾಮಾಜಿಕ ಜಾಲತಾಣಗಳ ಆಕರ್ಷಣೆÉ ಸೇರಿದಂತೆ ವಿವಿಧ ವಿಚಾರಗಳು ಮಕ್ಕಳ ಏಕಾಗ್ರತೆಯನ್ನು ಹಾಳುಗೆಡಹುತ್ತಿವೆ. ಹಿಂದೆ ಶಾಲೆಗಳಲ್ಲಿ ಪುಸ್ತಕಗಳ ವಾಚನಕ್ಕೆ ನಿಗದಿತ ತರಗತಿಗಳು ಇರುತ್ತಿದ್ದವು. ಹಿರಿಯ ಸಾಹಿತಿಗಳ ಸಾಹಿತ್ಯ ಬದುಕನ್ನು ಉತ್ತಮವಾಗಿ ಮುನ್ನಡೆಸಲು ಮಾರ್ಗದರ್ಶಕವಾಗಿ ನಿರಂತರವಾಗಿ ಇರುತ್ತವೆ ಎಂದು ಅಭಿಪ್ರಾಯಪಟ್ಟ ಅವರು, ಓದು ವ್ಯಕ್ತಿಯ ಚಿಂತನೆಗಳಿಗೆ ಹೆಚ್ಚಿನ ಶಕ್ತಿಯನ್ನು ತುಂಬುತ್ತದೆ ಎಂದರು.

ಭಾರತೀಯ ವಿದ್ಯಾಭವನದ ಕೊಡಗು ಕೇಂದ್ರದ ಅಧ್ಯಕ್ಷ ಕೊಂಗಂಡ ಎಸ್. ದೇವಯ್ಯ ಮಾತನಾಡಿ, ‘ಜ್ಞಾನ’ ಎನ್ನುವದು ಶಕ್ತಿ, ಇಂತಹ ಅರಿವಿನ ಶಕ್ತಿ ಕೆಟ್ಟ ಭಾವನೆಗಳನ್ನು ತೊಡೆದು ಸದ್ವಿಚಾರಗಳ ಮೂಲಕ ಉತ್ತಮ ಭಾವನೆಗಳನ್ನು ಮೂಡಿಸಲು ಸಾಧ್ಯವಾಗಿದೆ ಎಂದರು. ವಿವಿಧ ವಿದ್ಯಾಸಂಸ್ಥೆಗಳಿಗೆ ಪುಸ್ತಕಗಳನ್ನು ನೀಡುವ ಇಂತಹ ಸಾಹಿತ್ಯ ಪರವಾದ ಕಾರ್ಯಕ್ರಮಗಳಿಗೆ ವಿದ್ಯಾಭವನದ ಅಧ್ಯಕ್ಷನಾಗಿ ಇರುವವರೆಗೆ ಸಭಾಂಗಣವನ್ನು ಉಚಿತವಾಗಿ ಒದಗಿಸುವದಾಗಿ ಸ್ಪಷ್ಟಪಡಿಸಿದರು.

ಸಾರ್ವಜನಿಕ ಶಿಕಣ ಇಲಾಖೆಯ ಉಪನಿರ್ದೇಶಕ ಬಸವರಾಜು ಮಾತನಾಡಿ, ಓದುವ ಹವ್ಯಾಸ ಎಲ್ಲರಿಗೂ ಅವಶ್ಯ. ಹೀಗಿದ್ದೂ ಇಂದು ದೂರದರ್ಶನ ಸೇರಿದಂತೆ ವಿವಿಧ ವಿಚಾರಗಳು ಜ್ಞಾನಾರ್ಜನೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿರುವ ಬಗ್ಗೆ ಗಂಭೀರ ಚಿಂತನೆಯ ಅಗತ್ಯವಿದೆ. ಪ್ರಸ್ತುತ ಶಿಕ್ಷಣ ವ್ಯವಸ್ಥೆಯಲ್ಲಿ ಪರೀಕ್ಷೆ ಎನ್ನುವದು ಇದ್ದೇ ಇರುತ್ತದೆ. ಇಂತಹ ಪರೀಕ್ಷೆಗಳನ್ನು ಓದಿನ ಹವ್ಯಾಸವನ್ನು ಬೆಳೆÀಸಿಕೊಂಡಾಗ ಮಾತ್ರ ಎದುರಿಸಲು ಸಾಧ್ಯವಾಗುತ್ತದೆ ಎಂದರು.

ನಬಾರ್ಡ್ ಜಿಲ್ಲಾ ಪ್ರಬಂಧಕ ಎಂ.ಸಿ.ನಾಣಯ್ಯ ಮಾತನಾಡಿ, ವಿದ್ಯಾಸಂಸ್ಥೆಗಳಿಗೆ ವಿವಿಧ ಪುಸ್ತಕಗಳನ್ನು ನೀಡುವ ಕಾರ್ಯ ಶ್ಲಾಘನೀಯ. ಜಿಲ್ಲೆಯಲ್ಲಿ ಕೃಷಿ ಚಟುವಟಿಕೆಗಳಿಗೆ ಆದ್ಯತೆ ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳಲ್ಲಿ ಕೃಷಿಯ ಬಗ್ಗೆ ಒಲವು ಮೂಡಿಸುವ ಕಾರ್ಯಕ್ರಮವನ್ನು ನಬಾರ್ಡ್ ಮೂಲಕ ಆಯೋಜಿಸುವದಾಗಿ ತಿಳಿಸಿದರು.

ಫೀ| ಮಾ| ಕಾರ್ಯಪ್ಪ ಕಾಲೇಜಿನ ಇಂಗ್ಲಿಷ್ ವಿಷಯದ ಸ್ನಾತಕೋತ್ತರ ವಿಭಾಗದ ಸಂಯೋಜಕಿ ಡಾ| ನಯನಾ ಕಶ್ಯಪ್ ಮಾತನಾಡಿ, ವಿದ್ಯಾರ್ಥಿಗಳು ಆಧುನಿಕ ವ್ಯವಸ್ಥೆಯ ಸಮಾಜಿಕ ಜಾಲತಾಣ ಸೇರಿದಂತೆ ವಿವಿಧ ವಿಚಾರಗಳಿಗೆ ಮಾರು ಹೋಗುತ್ತಿರುವದಕ್ಕೆ ನಾವು ಕೂಡ ಹೊಣೆಗಾರರಾಗುತ್ತೇವೆ. ಮೊದಲನೆಯದಾಗಿ ಮಕ್ಕಳಿಗೆ ಪೆÇೀಷಕರಾದ ನಾವೇ ಮಾದರಿಯಾಗಬೇಕು. ನಾವೇ ಪುಸ್ತಕಗಳನ್ನು ಓದದೆ ಮಕ್ಕಳನ್ನು ಓದುವಂತೆ ಹೇಳುವದರಿಂದ ಯಾವದೇ ಪ್ರಯೋಜನವಾಗಲಾರದೆಂದು ಅಭಿಪ್ರಾಯಪಟ್ಟರು. ಪ್ರತಿ ಮನೆಮನೆಗಳಲ್ಲಿ ಸಣ್ಣದಾದರೂ ಒಂದಷ್ಟು ಪುಸ್ತಕಗಳ ಸಂಗ್ರಹವಿರಬೇಕು ಮತ್ತು ಇಂತಹ ಪುಸ್ತಕಗಳನ್ನು ಓದುವ ಆಸಕ್ತಿಯನ್ನು ಮಕ್ಕಳಲ್ಲಿ ಮೂಡಿಸುವ ಕೆಲಸವನ್ನು ನಾವೇ ಪುಸ್ತಕಗಳನ್ನು ಓದುವ ಮೂಲಕ ಮಾಡಬೇಕು ಎಂದು ಸಲಹೆ ನೀಡಿದರು.

ಸಭಾಧ್ಯಕ್ಷತೆ ವಹಿಸಿದ್ದ ಕೊಡಗು ಜಿಲ್ಲಾ ಪತ್ರಕರ್ತರ ಸಂಘÀದ ಅಧ್ಯಕ್ಷ ರಮೇಶ್ ಕುಟ್ಟಪ್ಪ ಮಾತನಾಡಿ, ಶಿಕ್ಷಕ ಸಮೂಹ ತಾವೇ ಮಾದರಿಯಾಗುವ ಮೂಲಕ ಮಕ್ಕಳನ್ನು ಸಮಾಜಮುಖಿಯಾಗಿ ಬೆಳೆಸಬೇಕೆಂದು ಕರೆ ನೀಡಿದರು. ಇತರರ ವಿಚಾರಗಳಿಗಷ್ಟೆ ಜೋತು ಬೀಳದೆ ವಾಸ್ತವತೆಯನ್ನು ಅರ್ಥೈಸಿಕೊಂಡು ಮುನ್ನಡೆಯಬೇಕೆ ಹೊರತು ತೋರ್ಪಡಿಕೆ ಬೇಡವೆಂದರು. ಪ್ರಾಸ್ತಾವಿಕವಾಗಿ ಮಾತನಾಡಿದ ನಿವೃತ್ತ ಪ್ರಾಂಶುಪಾಲೆ ಹಾಗೂ ಮಂಗಳೂರು ವಿವಿ ಸಿಂಡಿಕೇಟ್ ಸದಸ್ಯೆÀ ಪುಷ್ಪಾಕುಟ್ಟಣ್ಣ ತಮ್ಮ ಮಗಳು ನಿಶಿ ಕುಟ್ಟಣ್ಣ ಸಿಂಗಾಪುರದಲ್ಲಿ ಅಲ್ಲಿನ ಮಕ್ಕಳ ಸಹಕಾರದೊಂದಿಗೆ ಸಂಗ್ರಹಿಸಿದ ಅತ್ಯುತ್ತಮವಾದ ಪುಸ್ತಕಗಳನ್ನು ಕಳುಹಿಸಿ ಕೊಟ್ಟಿದ್ದು, ಇದನ್ನು ಆಸಕ್ತ ಶಾಲೆಗಳಿಗೆ ವಿತರಿಸಲಾಗುತ್ತಿದೆ ಎಂದು ತಿಳಿಸಿದರು.

ಪುಸ್ತಕ ವಿತರಣೆ

ಇದೇ ಸಂದರ್ಭ ವಿವಿಧ ಶಾಲೆಗಳಿಗೆ ಅತಿಥಿ ಗಣ್ಯರು ಪುಸ್ತಕಗಳನ್ನು ವಿತರಿಸಿದರು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿ ವಿಷ್ಣು ಪ್ರಸಾದ್, ಅನನ್ಯ ಕಾವೇರಮ್ಮ ಮತ್ತು ದೇವಯ್ಯ ನೀತಿ ಕಥೆಗಳನ್ನು ಹೇಳುವ ಮೂಲಕ ಗಮನ ಸೆಳೆದರು.

ಪತ್ರಕರ್ತರ ಸಂಘದ ಕಾರ್ಯದರ್ಶಿ ಕುಡೆಕಲ್ ಸಂತೋಷ್ ಮತ್ತು ಹೆಚ್.ಟಿ. ಅನಿಲ್ ಕಾರ್ಯಕ್ರಮ ನಿರೂಪಿಸಿದರು. ಅರೆಕಾಡಿನ ಸ್ಪ್ರೌಟ್ಸ್ ವುಮೆನ್ ಫಾರ್ಮರ್ಸ್ ಕ್ಲÀಬ್ ಕಾರ್ಯದರ್ಶಿ ದರ್ಶನ್ ಗಣಪತಿ ವಂದಿಸಿದರು.