ಮಡಿಕೇರಿ, ಸೆ. 25: ಮಹಿಳೆಯರು ಮತ್ತು ಮಕ್ಕಳ ಸಾಗಾಟ ತಡೆಯುವ ನಿಟ್ಟಿನಲ್ಲಿ ಶಾಲಾ ಹಾಗೂ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಜಾಗೃತಿ ಕಾರ್ಯ ಕ್ರಮಗಳನ್ನು ಹಮ್ಮಿಕೊಳ್ಳುವದು ಅತ್ಯಗತ್ಯವಾಗಿದೆ ಎಂದು ಜಿ.ಪಂ. ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್ ಸಲಹೆ ಮಾಡಿದ್ದಾರೆ.

ನಗರದ ಕೋಟೆಯ ಜಿ.ಪಂ. ಸಿಇಓ ಕಚೇರಿಯಲ್ಲಿ ಜಿ.ಪಂ. ಸಿಇಓ ಚಾರುಲತಾ ಸೋಮಲ್ ಅವರ ಅಧ್ಯಕ್ಷತೆಯಲ್ಲಿ ಮಹಿಳೆಯರ ಮತ್ತು ಮಕ್ಕಳ ಸಾಗಾಟ ನಿಯಂತ್ರಣ ಸಂಬಂಧ ನಡೆದ ಜಿಲ್ಲಾ ಸಮಿತಿ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು.

ಜಿ.ಪಂ. ಸಿಇಓ ಚಾರುಲತಾ ಸೋಮಲ್ ಮಾತನಾಡಿ, ಮಹಿಳೆಯರ ಮತ್ತು ಮಕ್ಕಳ ಸಾಗಾಟ ತಡೆಯುವ ನಿಟ್ಟಿನಲ್ಲಿ ವಿಶೇಷ ಜಾಗೃತಿ ಶಿಬಿರಗಳನ್ನು ಹಮ್ಮಿಕೊಳ್ಳುವಲ್ಲಿ ಅಗತ್ಯ ಕಾರ್ಯಕ್ರಮ ರೂಪಿಸುವದು, ಜೊತೆಗೆ ಶಾಲಾ-ಕಾಲೇಜು ಹಂತದಲ್ಲಿ ಅರಿವು ಮೂಡಿಸುವದು, ಗ್ರಾಮೀಣ ಮತ್ತು ಹಾಡಿ ಪ್ರದೇಶಗಳಲ್ಲಿ ಹೆಚ್ಚಿನ ಶಿಕ್ಷಣ ದೊರೆಯುವಂತಾಗಲು ಅಗತ್ಯ ಕ್ರಮ ಕೈಗೊಳ್ಳುವಂತೆ ಸಲಹೆ ಮಾಡಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ನಾಗರಾಜು ಅವರು ವರದಕ್ಷಿಣೆ ಕಿರುಕುಳ ಸಂಬಂಧಿಸಿದಂತೆ ಜಿಲ್ಲೆಯಲ್ಲಿ 26 ಪ್ರಕರಣಗಳು ದಾಖಲಾಗಿದ್ದು, ಮಡಿಕೇರಿ ತಾಲೂಕಿನಲ್ಲಿ 5, ಸೋಮವಾರಪೇಟೆ ತಾಲೂಕಿನಲ್ಲಿ 17, ವೀರಾಜಪೇಟೆ ತಾಲೂಕಿನಲ್ಲಿ 4 ಪ್ರಕರಣಗಳು ದಾಖಲಾಗಿವೆ. ಇದರಲ್ಲಿ 2 ಪ್ರಕರಣಗಳು ಖುಲಾಸೆಯಾಗಿವೆ.

ಮಹಿಳೆಯರ ಮೇಲೆ ನಡೆಯುವ ದೌರ್ಜನ್ಯಗಳು ಮತ್ತಿತರ ಸಂಬಂಧ ದೂರು ಹೇಳಿಕೊಳ್ಳಲು ಬರುವ ಮಹಿಳೆಯರಿಗೆ ಸಾಂತ್ವನ ಕಲ್ಪಿಸುವ ನಿಟ್ಟಿನಲ್ಲಿ ಜಿಲ್ಲಾ ಮಟ್ಟದಲ್ಲಿ ಜಿಲ್ಲಾ ಶಿಶು ಕಲ್ಯಾಣ ಸಂಸ್ಥೆ ಹಾಗೂ ವೀರಾಜಪೇಟೆಯಲ್ಲಿ ಸ್ಪೂರ್ತಿ ಸರ್ಕಾರೇತರ ಸಂಸ್ಥೆಗಳು ಕಾರ್ಯ ನಿರ್ವಹಿಸುತ್ತಿದ್ದು, ಮಹಿಳೆಯರ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಬಂದ ದೂರುಗಳಿಗೆ ಸಾಂತ್ವನ ಕಲ್ಪಿಸಲು ಪ್ರಯತ್ನಿಸಲಾಗುತ್ತಿದ್ದು, 2016-17ನೇ ವರ್ಷದಲ್ಲಿ ವೀರಾಜಪೇಟೆಯ ಸ್ಪೂರ್ತಿ ಕೇಂದ್ರದಲ್ಲಿ 227 ಪಕ್ರರಣಗಳು ವರದಿಯಾಗಿವೆ ಎಂದು ಮಾಹಿತಿ ನೀಡಿದರು.

ಜಿಲ್ಲೆಯಲ್ಲಿ 1099 ಗ್ರಾಮೀಣ ಸ್ತ್ರೀಶಕ್ತಿ ಗುಂಪುಗಳು ಹಾಗೂ 53 ನಗರ ಸ್ತ್ರೀಶಕ್ತಿ ಗುಂಪುಗಳು ಸೇರಿ ಒಟ್ಟು 1152 ಗುಂಪುಗಳಿವೆ. ಈ ಗುಂಪುಗಳ ಮಹಿಳೆಯರನ್ನು ಸಂಘಟಿಸುವದರ ಮುಖಾಂತರ ಅವರಲ್ಲಿ ಆತ್ಮವಿಶ್ವಾಸ ಮತ್ತು ಸ್ವಾವಲಂಬನೆ ಮೂಡಿಸಲು ಪ್ರಯತ್ನಿಸಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕರಾದ ನಾಗರಾಜು ತಿಳಿಸಿದರು.

ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮೋಹನ್ ಪ್ರಭು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಓ.ಆರ್. ಶ್ರೀರಂಗಪ್ಪ, ಡಿವೈಎಸ್‍ಪಿ ಛಬ್ಬಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಕಾರ್ಯಕ್ರಮ ಅಧಿಕಾರಿ ಮಮ್ತಾಜ್, ಸಿಡಿಪಿಓಗಳಾದ ದಮಯಂತಿ, ಸರಳಮಣಿ, ಶಾರದ ಮತ್ತಿತರರು ಮಹಿಳೆಯರು ಮತ್ತು ಮಕ್ಕಳ ಸಾಗಾಟ ತಡೆಯುವ ನಿಟ್ಟಿನಲ್ಲಿ ಕೈಗೊಳ್ಳಲಾಗಿರುವ ಕ್ರಮಗಳ ಬಗ್ಗೆ ಹಲವು ಮಾಹಿತಿ ನೀಡಿದರು.