ಸೋಮವಾರಪೇಟೆ,ಸೆ.6: ಭ್ರಷ್ಟಾಚಾರದ ಆರೋಪ ಹೊತ್ತಿರುವ ಅಧಿಕಾರಿಯನ್ನು ಸೋಮವಾರಪೇಟೆ ತಾಲೂಕು ತಹಸೀಲ್ದಾರ್ ಆಗಿ ನಿಯೋಜಿಸಲು ತೆರೆಮರೆಯ ಪ್ರಯತ್ನ ನಡೆಯುತ್ತಿದ್ದು, ಇಂತಹ ಅಧಿಕಾರಿ ಸೋಮವಾರಪೇಟೆಗೆ ಬೇಡ. ಒಂದು ವೇಳೆ ಸರ್ಕಾರ ಇದೇ ಕ್ರಮಕ್ಕೆ ಮುಂದಾದರೆ ತಾಲೂಕು ಕಚೇರಿಗೆ ಬೀಗ ಜಡಿದು ಪ್ರತಿಭಟಿಸಲಾಗುವದು ಎಂದು ಬೆಳೆಗಾರರ ಹೋರಾಟ ಸಮಿತಿ ಅಧ್ಯಕ್ಷ ಎಂ.ಸಿ. ಮುದ್ದಪ್ಪ ಹೇಳಿದರು.
ನಗರದ ಪತ್ರಿಕಾಭವನದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾತನಾಡಿದ ಅವರು, ಪ್ರಸ್ತುತ ಜಿಲ್ಲಾ ಕೇಂದ್ರ ಸ್ಥಾನದಲ್ಲಿ ಚುನಾವಣಾ ವಿಭಾಗದ ತಹಶೀಲ್ದಾರ್ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಮಹಿಳಾ ಅಧಿಕಾರಿಯನ್ನು ಸೋಮವಾರಪೇಟೆ ತಾಲೂಕು ಕಚೇರಿಗೆ ತಹಶೀಲ್ದಾರರಾಗಿ ನೇಮಿಸಲು ಕೆಲವು ರಾಜಕೀಯ ಪಕ್ಷದ ಮುಖಂಡರುಗಳು ಸರ್ಕಾರದ ಮಟ್ಟದಲ್ಲಿ ತೀವ್ರ ಪ್ರಯತ್ನ ನಡೆಸುತ್ತಿದ್ದು, ಇದು ಕಾರ್ಯರೂಪಕ್ಕೆ ಬಂದರೆ ಸೋಮವಾರಪೇಟೆ ತಾಲೂಕು ಬಂದ್ ಮಾಡಲಾಗುವದು ಎಂದು ಎಚ್ಚರಿಸಿದರು.
ಈ ಹಿಂದೆ ಕರ್ತವ್ಯ ದಲ್ಲಿದ್ದ ಸಂದರ್ಭ ಸರ್ಕಾರಿ ಜಾಗವನ್ನು ಒತ್ತುವರಿ ಮಾಡಿ ಕೊಂಡಿದ್ದಲ್ಲದೆ, ಭ್ರಷ್ಟಾಚಾರದ ಆರೋಪ ಎದುರಿಸುತ್ತಿರುವ ಅಧಿಕಾರಿಯನ್ನು ಸೋಮವಾರ ಪೇಟೆಯ ಜನತೆ ಒಪ್ಪಿಕೊಳ್ಳಲು ತಯಾರಿಲ್ಲ. ಈ ಬಗ್ಗೆ ಜಿಲ್ಲಾಡಳಿತ ಗಮನಹರಿಸಿ ಬೇರೆ ಅಧಿಕಾರಿಯನ್ನು ನಿಯೋಜಿಸಬೇಕು ಎಂದು ಆಗ್ರಹಿಸಿದರು. ಈಗಾಗಲೇ ಸರ್ಕಾರಿ ಜಾಗವನ್ನು ಅನಧಿಕೃತವಾಗಿ ಒತ್ತುವರಿ ಮಾಡಿಕೊಂಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗಕ್ಕೆ ದೂರು ನೀಡಲಾಗಿದ್ದು, ಇದಕ್ಕೆ ಸಂಬಂಧಿಸಿದಂತೆ ಎಲ್ಲಾ ದಾಖಲೆಗಳು ತನ್ನ ಬಳಿ ಇದೆ ಎಂದು ಗೋಷ್ಠಿಯಲ್ಲಿ ಪಾಲ್ಗೊಂಡಿದ್ದ ಜಿಲ್ಲಾ ದಲಿತ ಸಂಘರ್ಷ ಸಮಿತಿಯ ಸಂಘಟನಾ ಸಂಚಾಲಕ ಎಚ್.ಎನ್. ಯೋಗೇಶ್ ತಿಳಿಸಿದರು. ಕಾವೇರಿ ನೀರು ವಿವಾದ ಹಿನ್ನೆಲೆ ವಿವಿಧ ಕನ್ನಡಪರ ಸಂಘಟನೆಗಳು ಹಮ್ಮಿಕೊಂಡಿರುವ ಹೋರಾಟಕ್ಕೆ ಕಾಫಿ ಬೆಳೆಗಾರರ ಹೋರಾಟ ಸಮಿತಿ ಸಂಪೂರ್ಣ ಬೆಂಬಲ ನೀಡಲಿದೆ ಎಂದು ಗೋಷ್ಠಿಯಲ್ಲಿದ್ದ ಸಮಿತಿಯ ಉಪಾಧ್ಯಕ್ಷೆ ಜಲಾ ಹೂವಯ್ಯ ಹೇಳಿದರು. ಗೋಷ್ಠಿಯಲ್ಲಿ ಪದಾಧಿಕಾರಿಗಳಾದ ಜಾನಕಿ ವೆಂಕಟೇಶ್, ಶ್ರೀಕೇಶ್, ಕುಶಾಲಪ್ಪ ಉಪಸ್ಥಿತರಿದ್ದರು.