ಸೋಮವಾರಪೇಟೆ, ಅ. 22: ಭ್ರಷ್ಟಾಚಾರ ಮುಕ್ತ ಸಮಾಜ ನಿರ್ಮಾಣಕ್ಕೆ ಎಲ್ಲರೂ ಕಟಿಬದ್ಧರಾಗಬೇಕೆಂದು ಲಂಚಮುಕ್ತ ಕರ್ನಾಟಕ ನಿರ್ಮಾಣ ವೇದಿಕೆಯ ರಾಜ್ಯಾಧ್ಯಕ್ಷ ರವಿ ಕೃಷ್ಣ ಅವರು ಕರೆ ನೀಡಿದರು.
ಇಲ್ಲಿನ ಪತ್ರಿಕಾಭವನದಲ್ಲಿ ಆಯೋಜಿಸಲಾಗಿದ್ದ ಲಂಚಮುಕ್ತ ಕರ್ನಾಟಕ ನಿರ್ಮಾಣ ಜನಜಾಗೃತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಸಮಾಜದ ವಿವಿಧ ಸ್ತರಗಳಲ್ಲಿ ಲಂಚ ಮೇಳೈಸುತ್ತಿದ್ದು, ಇದನ್ನು ತಡೆಗಟ್ಟಿ ಭ್ರಷ್ಟಾಚಾರ ಮುಕ್ತ ಸಮಾಜ ನಿರ್ಮಾಣ ಮಾಡುವತ್ತ ಎಲ್ಲರೂ ಮುಂದಾಗಬೇಕು ಎಂದರು.
ಮಾಹಿತಿ ಹಕ್ಕು ಕಾಯ್ದೆ ಮತ್ತು ಸಕಾಲ ಯೋಜನೆಗಳು ಭ್ರಷ್ಟಾಚಾರವನ್ನು ತಡೆಗಟ್ಟಲು ಇರುವ ಎರಡು ಪ್ರಬಲ ಆಯುಧಗಳು. ಇದನ್ನು ಸರಿಯಾಗಿ ಬಳಸಿಕೊಳ್ಳುವತ್ತ ವೇದಿಕೆಯ ಸದಸ್ಯರು ಮುಂದಾಗ ಬೇಕು. ಆರ್‍ಟಿಐ ಕಾಯ್ದೆ ಜಾರಿಗೊಂಡ ಮೇಲೆ ಹಲವು ಭ್ರಷ್ಟಾಚಾರ ಪ್ರಕರಣಗಳು ಹೊರ ಬರುತ್ತಿವೆ ಎಂದರು.
ಲಂಚದ ಬಗ್ಗೆ ಸಮಾಜ ನಿರ್ಲಕ್ಷ್ಯ ಅಥವಾ ಉದಾಸೀನತೆ ವಹಿಸ ಬಾರದು. ನಾವ್ಯಾರೂ ಲಂಚ ಕೊಡೋದಿಲ್ಲ ಎಂಬ ಪ್ರತಿಜ್ಞೆ ಕೈಗೊಳ್ಳಬೇಕು. ಭ್ರಷ್ಟಾಚಾರಿಗಳ ವಿರುದ್ಧ ವೇದಿಕೆಯ ಹೋರಾಟ ನಿರಂತರ ವಾಗಿರಲಿದೆ. ಈ ನಿಟ್ಟಿನಲ್ಲಿ ಪ್ರತಿ ಯೋರ್ವರೂ ಜವಾಬ್ದಾರಿ ತೆಗೆದುಕೊಳ್ಳಬೇಕು ಎಂದರು.
ತೀರಾ ಬಡವರು ಮತ್ತು ಅತ್ಯಂತ ಶ್ರೀಮಂತರು ಇಂದು ಕೊಡಗನ್ನು ತ್ಯಜಿಸಿ ನಗರ ಪ್ರದೇಶಗಳಿಗೆ ತೆರಳುತ್ತಿದ್ದಾರೆ. ವಿದ್ಯಾವಂತರು ಯಾವದೇ ಕಾರಣಕ್ಕೂ ಕೊಡಗನ್ನು ತೊರೆಯಬಾರದು. ಸ್ಥಳೀಯವಾಗಿಯೇ ಸ್ವಾವಲಂಬಿ ಬದುಕು ರೂಪಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಲಂಚ ಮತ್ತು ಭ್ರಷ್ಟಾಚಾರ ಮುಕ್ತ ಕೊಡಗು ನಿರ್ಮಾಣಕ್ಕೆ ಪ್ರತಿಯೋರ್ವರೂ ಪಣತೊಡಬೇಕು. ಈ ನಿಟ್ಟಿನಲ್ಲಿ ನಡೆಯುವ ಹೋರಾಟ ಗಳಿಗೆ ವೇದಿಕೆಯು ಸಂಪೂರ್ಣ ಬೆಂಬಲ ನೀಡಲಿದೆ ಎಂದರು. ಕಾರ್ಯಕ್ರಮದ ವೇದಿಕೆಯಲ್ಲಿ ಲಂಚಮುಕ್ತ ಕರ್ನಾಟಕ ನಿರ್ಮಾಣ ವೇದಿಕೆಯ ರಾಜ್ಯ ಪದಾಧಿಕಾರಿಗಳಾದ ಉದಯಸಿಂಹ, ವೆಂಕಟೇಶ್ ಪ್ರಸಾದ್, ತಾಲೂಕು ಘಟಕದ ಪದಾಧಿಕಾರಿ ಗಳಾದ ಚಂದನ ಸುಬ್ರಮಣಿ, ವಸಂತ್, ಮೋಹನ್, ಅಭಿಷೇಕ್ ಅವರುಗಳು ಉಪಸ್ಥಿತರಿದ್ದರು.