ಸುಂಟಿಕೊಪ್ಪ, ಆ. 22: ಮದ್ಯಪಾನ ಹಾಗೂ ಮಾದಕ ವಸ್ತುಗಳನ್ನು ಸೇವಿಸುವ ಮೂಲಕ ಒಂಟಿ ವೃದ್ಧ ಮಹಿಳೆಯರ ಮನೆಗಳಿಗೆ ನುಗ್ಗಿ ಭೀತಿಯ ವಾತಾವರಣವನ್ನು ನಿರ್ಮಿಸಿ, ನಾಪತ್ತೆಯಾಗಿದ್ದ ವ್ಯಕ್ತಿಯನ್ನು ಗ್ರಾಮಸ್ಥರೇ ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ 7ನೇ ಹೊಸಕೋಟೆಯಲ್ಲಿ ನಡೆದಿದೆ.
7ನೇ ಹೊಸಕೋಟೆ ಉಪ್ಪುತೋಡು ನಿವಾಸಿ ಕಬೀರ್ ಎಂಬಾತ ಗ್ರಾಮದಲ್ಲಿ ಒಂಟಿಯಾಗಿ ನೆಲೆಸಿರುವ ವೃದ್ಧ ಮಹಿಳೆಯರ ಮನೆಗಳಿಗೆ ನುಗ್ಗಿ ಚಿನ್ನಾಭರಣ ಮತ್ತಿತರ ಬೆಲೆ ಬಾಳುವ ವಸ್ತುಗಳನ್ನು ನೀಡುವಂತೆ ಒತ್ತಡ ಹೇರುತ್ತಿದ್ದ ಎನ್ನಲಾಗಿದೆ. ಘಟನೆಯ ನಂತರ ಗ್ರಾಮದಿಂದ ತಲೆಮರೆಸಿಕೊಂಡು ತಿರುಗುತ್ತಿದ್ದ ಆತ ಮಧ್ಯ ರಾತ್ರಿಯ ವೇಳೆ ಮನೆ ಬಂದು ಸೇರುತ್ತಿರುವದನ್ನು ಗ್ರಾಮಸ್ಥರು ಗಮನಿಸಿದ್ದರು. ಈತನÀ ವಾಸದ ಮನೆಯನ್ನು ಸೋಮವಾರ ಬೆಳಿಗ್ಗೆ 5 ಗಂಟೆಯ ಸಂದರ್ಭದಲ್ಲಿ ಸುತ್ತುವರಿದ ಗ್ರಾಮದ ಯುವಕರು ಹಾಗೂ ಮಹಿಳಾ ಸ್ವಸಹಾಯ ಸಂಘದ ಸದಸ್ಯರು ಆತ ಮನೆಯಲ್ಲಿ ಇರುವದನ್ನು ದೃಢಪಡಿಸಿಕೊಂಡು ಸುಂಟಿಕೊಪ್ಪ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಆ ಮೂಲಕ ಆತನನ್ನು ಬಂಧನಕ್ಕೆ ಒಳಪಡಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕಬೀರ್ 2-3 ಬಾರಿ ಈ ರೀತಿ ಮಾಡಿದ್ದು, ಇದರಿಂದ ಗ್ರಾಮದಲ್ಲಿ ಒಂದು ರೀತಿಯ ಭೀತಿಯ ವಾತಾವರಣವನ್ನು ಸೃಷ್ಟಿಸಿದ್ದ. ಒಂಟಿ ಮಹಿಳೆಯರು ಆತಂಕದಲ್ಲಿ ದಿನದೂಡುವಂತಾಗಿತ್ತು. ಸುತ್ತ-ಮುತ್ತಲ ತೋಟಗಳಲ್ಲಿ ಕಾಲ ಕಳೆಯುತ್ತ ಮಧ್ಯರಾತ್ರಿ ವೇಳೆ ಮನೆಗೆ ಬಂದು ಸೇರುತ್ತಿರುವ ಬಗ್ಗೆ ಗ್ರಾಮಸ್ಥರು ಪತ್ರಕರ್ತರೊಂದಿಗೆ ದೂರಿಕೊಂಡರು.
ಈ ಸಂದರ್ಭ ಗ್ರಾಮಸ್ಥರಾದ ದಿಲೀಪ್, ಉಮೇಶ್, ದಿನೇಶ್, ಸಂತೋಷ್, ಚಂದ್ರ, ಶಿವ, ಗಿರೀಶ್, ಪ್ರಕಾಶ್, ವಿನಾಯಕ ಸಂಘದ ಪದಾಧಿಕಾರಿಗಳು ಹಾಗೂ ಬಸವೇಶ್ವರ ಸಂಘದ ಮಹಿಳೆಯರು ಇದ್ದರು.