ಮಡಿಕೇರಿ, ನ. 29: ಒಂದು ಭಾಷೆಯ ಪರಿಸರದಲ್ಲಿ ಬೆಳೆದು ಅದನ್ನು ಮೈಗೂಡಿಸಿ ಕೊಂಡಿರು ವವರು ಮಾತ್ರ ಅದರ ಸಮರ್ಥ ವಾರಸು ದಾರರಾಗಲು ಸಾಧ್ಯ. ಯಾರೋ ಹೊರಗಿನವರು ಬಂದು ಭಾಷೆಯನ್ನು ಮುನ್ನಡೆಸುವದು ಅಸಂಭವ ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಹೇಳಿದ್ದಾರೆ. ಕರ್ನಾಟಕ ಅರೆಭಾಷೆ ಸಂಸ್ಕøತಿ ಮತ್ತು ಸಾಹಿತ್ಯ ಅಕಾಡೆಮಿಯು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಹಮ್ಮಿಕೊಂಡಿದ್ದ 2015ನೇ ಸಾಲಿನ ಗೌರವ ಪ್ರಶಸ್ತಿ ಪ್ರಧಾನ ಸಮಾರಂಭ ವನ್ನು ಉದ್ಘಾಟಿಸಿ ಮಾತನಾಡಿದರು. ಯಾವದೇ ಭಾಷೆಯಾಗಲಿ ಅದು ಹಿಂದಿನ ಪರಂಪರೆಯನ್ನು ತನ್ನೊಂದಿಗೆ ಇಟ್ಟುಕೊಂಡಿರಬೇಕು, ಇದರ ಜೊತೆಯಲ್ಲೇ ಅದು ಸಮಕಾಲೀನವಾಗಿ ಬೆಳೆಯುತ್ತಿರಬೇಕು. ಇಂತಹ ಭಾಷೆ ಯಾವತ್ತಿಗೂ ಜೀವಂತವಾಗಿರುತ್ತದೆ. ಮಡಿಕೇರಿ - ಸುಳ್ಯ ಸೀಮೆಯಲ್ಲಿ ಜೀವಂತವಾಗಿರುವ ಅರೆಭಾಷೆ ಕೂಡ ಇಂತಹ ಒಂದು ಭಾಷೆಯಾಗಿದೆ. ಆದರೆ ಎಲ್ಲರೂ ಅರೆಭಾಷೆಯನ್ನು ಸಮರ್ಥವಾಗಿ ಬೆಳೆಸಿಕೊಂಡು ಹೋಗುತ್ತಿದ್ದಾರೆ ಎಂದು ಅವರು ಹೇಳಿದರು.
2015ನೇ ಸಾಲಿನ ಗೌರವ ಪ್ರಶಸ್ತಿಗೆ ಭಾಜನರಾದ ಟಿ.ಜಿ. ಮುಡೂರು, ಬೈತಡ್ಕ ಜಾನಕಿ ಬೆಳ್ಯಪ್ಪ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ನವದೆಹಲಿ ಜವಾಹರಲಾಲ್ ವಿಶ್ವವಿದ್ಯಾಲಯದ ಕನ್ನಡ ಪ್ರಾಧ್ಯಾಪಕರು, ಲೇಖಕರೂ ಆದ ಡಾ. ಪುರುಷೋತ್ತಮ ಬಿಳಿಮಲೆ ಅವರು ಮಾತನಾಡಿ, ಅರೆಭಾಷೆಯ ಪೂಮಾಲೆ ಗುಡ್ಡದ ಮೂಲಕ ರಾಮಾಯಣ , ನರಿಗಳ ವ್ಯತಿರಿಕ್ತ ಕಥೆಗಳ ಮೂಲಕ ಪ್ರಚಲಿತವಾಗಿದೆ. ಅರೆಭಾಷೆಗೆ ಗಡಿಯಾಚಿಗಿನ ಸಂಬಂಧವನ್ನು ನಿರ್ಮಿಸಿಕೊಳ್ಳಲು ಸಾಧ್ಯವಾಗಿದೆ ಎಂದರೆ ಭಾಷೆ ಬೆಳೆದಿದೆ ಎಂದು ಅರ್ಥ ಎಂದು ಅಭಿಪ್ರಾಯಪಟ್ಟರು. “ಯುನೆಸ್ಕೊ ವರದಿ ಪ್ರಕಾರ ಜಗತ್ತಿನಲ್ಲಿ 7900 ಭಾಷೆಗಳಿವೆ. ಅದರಲ್ಲಿ 400 ಕ್ಕೂ ಹೆಚ್ಚು ಭಾಷೆಗಳು ಭಾರತದಲ್ಲಿದೆ. ಕೆಲವು ವರ್ಷಗಳ ಹಿಂದೆ ನಮ್ಮಲ್ಲಿ ಕೊರಗ ಭಾಷೆಯಿತ್ತು. ಈಗ ಆ ಭಾಷೆಯನ್ನು ಮಾತನಾಡುವ 25-30 ಜನರಿದ್ದಾರಷ್ಟೇ. ಯುವಕರೆಲ್ಲರೂ ಕನ್ನಡ ಅಥವಾ ತುಳು ಭಾಷೆಯನ್ನು ಕಲಿತು ಕೊರಗ ಭಾಷೆಯನ್ನೇ ಕೈಬಿಟ್ಟಿದ್ದಾರೆ. ಹಾಗಾಗಿ ಅರೆಭಾಷೆ ಎನ್ನುವ ಸಣ್ಣ ಭಾಷೆಯನ್ನು ಮುತುವರ್ಜಿಯಿಂದ ಬಳಸುವ ಮತ್ತು ಉಳಿಸಬೇಕಾದ ಅಗತ್ಯವಿದೆ ಸಲಹೆ ನೀಡಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಶಾಸಕ ಕೊಂಬಾರನ ಜಿ.ಬೋಪಯ್ಯ ಮಾತನಾಡಿ, ಭಾರತದಲ್ಲಿ ಯಾವದೇ ಒಂದು ಜಾತಿಯಲ್ಲಿ ಹುಟ್ಟುವದು ಅನಿವಾರ್ಯ. ಹುಟ್ಟಿದ ಜಾತಿಯನ್ನು ಅಭಿಮಾನದಿಂದ ಕಾಣಬೇಕು. ಆದರೆ ಇತರ ಜಾತಿಗಳ ಮೇಲೆ ದುರಾಭಿಮಾನ ಇರಬಾರದು ಎಂದು ಕಿವಿಮಾತು ಹೇಳಿ ಅಕಾಡೆಮಿಯ ಕಾರ್ಯವೈಖರಿಯ ಬಗ್ಗೆ ಪ್ರಶಂಸಿಸಿದರು. ವಸತಿ ಸಚಿವ ಎಂ.ಕೃಷ್ಣಪ್ಪ ಪ್ರಶಸ್ತಿ ಭಾಜನರಿಗೆ ಶುಭ ಕೋರಿದರು. ಶಾಸಕ ವಾಸು ಮಾತನಾಡಿ, ಅರೆಭಾಷೆಯ ಶ್ರೀಮಂತ ಸಂಸ್ಕøತಿಯನ್ನು ಕೊಂಡಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ಅರೆಭಾಷೆ ಸಂಸ್ಕøತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಕೊಲ್ಯದ ಗಿರೀಶ್ ವಹಿಸಿದ್ದರು. ಕನ್ನಡ ಮತ್ತು ಸಂಸ್ಕøತಿ ಇಲಾಖೆ ನಿರ್ದೇಶಕ ಕೆ.ಎ. ದಯಾನಂದ, ಜಂಟಿ ನಿರ್ದೇಶಕ ಮಲ್ಲಿ ಕಾರ್ಜುನ ಸ್ವಾಮಿ, ಅಕಾಡೆಮಿ ನಿಕಟ ಪೂರ್ವ ಅಧ್ಯಕ್ಷ ಎನ್.ಎಸ್. ದೇವಿಪ್ರಸಾದ್, ಕೊಡಗು ಮತ್ತು ದಕ್ಷಿಣ ಕನ್ನಡ ಗೌಡ ಸಮಾಜದ ಅಧ್ಯಕ್ಷೆ ಪದ್ಮಾ ಕೋಲ್ಚಾರ್, ಬೆಂಗಳೂರು ಕೊಡಗು ಗೌಡ ಸಮಾಜದ ಅಧ್ಯಕ್ಷ ಅಮ್ಮವನ ವಾಸು, ಬಿಬಿಎಂಪಿ ಜಂಟಿ ಆಯುಕ್ತ ಪಾಣತ್ತಲೆ ಪಳಂಗಪ್ಪ, ಅಕಾಡೆಮಿ ಸದಸ್ಯರುಗಳಾದ ಮಂದ್ರೀರ ಮೋಹನ್ ದಾಸ್, ಸದಾನಂದ ಮಾವಜಿ, ಬಿ.ಸಿ.ವಸಂತ, ಪಿ.ಎಸ್. ಕಾರ್ಯಪ್ಪ ಉಪಸ್ಥಿತರಿದ್ದರು. ಕಾರ್ಯಕ್ರಮಕ್ಕೆ ಅಸಂಖ್ಯ ಭಾಷಾಭಿಮಾನಿಗಳು ಸಾಕ್ಷಿಯಾದರು. ಅರೆಭಾಷೆ ಅಕಾಡೆಮಿ ರಿಜಿಸ್ಟ್ರಾರ್ ಆದ ಉಮರಬ್ಬ ಸ್ವಾಗತಿಸಿದರು. ಕೋರನ ಸರಸ್ವತಿ ನಿರೂಪಿಸಿ, ಡಾ. ಪೂವಪ್ಪ ಕಣಿಯೂರು ವಂದಿಸಿದರು. ಅರುಣೋದಯ ಕಲಾ ತಂಡದಿಂದ ಅರೆಭಾಷೆ ಆಚಾರ-ವಿಚಾರದ ನೃತ್ಯರೂಪಕ, ಶ್ರೀರಾಮ ಯುವಕ ಸಂಘದಿಂದ ಸಿದ್ಧವೇಷ, ಶಶಿಧರ್ ಮಾವಿನಕಟ್ಟೆ ಅವರಿಂದ ಅರೆಭಾಷೆ ಹಾಡು ಹಾಗೂ ಬೆಂಗಳೂರು ಕೊಡಗು ಮತ್ತು ದಕ್ಷಿಣ ಕನ್ನಡ ಗೌಡ ಸಮಾಜ ಮತ್ತು ಕೊಡಗು ಗೌಡ ಸಮಾಜದ ಸದಸ್ಯರಿಂದ ವೈವಿಧ್ಯವಾದ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆದವು.