ಮಡಿಕೇರಿ, ಆ. 14: ಇಡೀ ದೇಶಕ್ಕೆ ಆಗಸ್ಟ್ 15 ಸ್ವಾತಂತ್ರ್ಯೋತ್ಸವದ ಸಂಭ್ರಮದ ದಿನ. ದೇಶಕ್ಕೆ ಸ್ವಾತಂತ್ರ್ಯ ಲಭಿಸಿದ ಈ ದಿನದಂದು ದೇಶಾದ್ಯಂತ ಸ್ವಾತಂತ್ರ್ಯಕ್ಕಾಗಿ ಬಲಿದಾನ ಗೈದವರ, ಹೋರಾಡಿದವರನ್ನು ಸ್ಮರಿಸ ಲಾಗುತ್ತದೆ. ಸ್ವಾತಂತ್ರ್ಯವೇನೋ ಲಭಿಸಿದೆ. ಇದನ್ನು ಉಳಿಸಿಕೊಂಡು ದೇಶ ರಕ್ಷಣೆ ಮಾಡುವದು ಪ್ರತಿಯೊಬ್ಬರ ಆದ್ಯ ಕರ್ತವ್ಯವಲ್ಲವೇ.ವೀರ ಭೂಮಿ ಕೊಡಗು ಸೇನಾ ಜಿಲ್ಲೆಯೆಂದೇ ಪ್ರಪಂಚ ಮಟ್ಟದಲ್ಲಿ ಗುರುತಿಸಿಕೊಂಡಿದೆ. ದೇಶದ ಪ್ರಪ್ರಥಮ ಮಹಾದಂಡ ನಾಯಕ ಫೀ.ಮಾ. ಕಾರ್ಯಪ್ಪ ಜನರಲ್ ತಿಮ್ಮಯ್ಯರಿಂದ ಹಿಡಿದು ದೇಶದ ರಕ್ಷಣಾ ಪಡೆಯಲ್ಲಿ ಅದೆಷ್ಟೊ ಉನ್ನತ ಮಟ್ಟದ ಅಧಿಕಾರಿಗಳು ಸಾವಿರಾರು ಸೈನಿಕರು ಭಾರತಾಂಬೆಯ ಸೇವೆಗೈದಿದ್ದಾರೆ. ಈಗಲೂ ಹಲವಷ್ಟು ಮಂದಿ ದೇಶದ ರಕ್ಷಣಾ ಪಡೆಯಲ್ಲಿ ದುಡಿಯುತ್ತಿದ್ದಾರೆ. ದೇಶಾಭಿಮಾನ ಎಲ್ಲರ ಹೃದಯದಲ್ಲಿದೆ. ಆದರೆ ಸೇನೆಯಲ್ಲಿ ಕರ್ತವ್ಯ ನಿರ್ವಹಿಸಲು ಎಲ್ಲರೂ ಮುಂದೆ ಬರುವದಿಲ್ಲ ಇದರಲ್ಲಿ ಕೊಡಗಿನ ಜನ ವಿಶೇಷವಾಗಿ ಗುರುತಿಸಿ ಕೊಂಡಿರುವದು ಹೆಮ್ಮೆಯ ವಿಚಾರ ಮಾತ್ರವಲ್ಲದೆ ಇತರರಿಗೆ ಮಾದರಿ ಕೂಡ.

ಜಮ್ಮು ಮತ್ತು ಕಾಶ್ಮೀರ, ಲೇಲಡಾಕ್, ಬಾರಾಮುಲ್ಲಾ, ಪಠಾಣ್‍ಕೋಟ್‍ನಂತಹ ಗಡಿಭಾಗ, ದುರ್ಗಮ ಪ್ರದೇಶಗಳ ಭೌಗೋಳಿಕ ಪರಿಸ್ಥಿತಿ. ಹಿಮಪಾತ ಗಡಿಯಲ್ಲಿ ಪದೇ ಪದೇ ಮೊಳಗುವ ಗುಂಡಿನ ಶಬ್ದ. ಇದನ್ನು ಊಹಿಸಿಕೊಂಡರೇ ಮೈಜುಂ ಎನ್ನುತ್ತದೆ. ಇಂತಹ ಪ್ರದೇಶಗಳಲ್ಲಿ ತಂದೆ ತಾಯಿ, ಪತಿ, ಮಕ್ಕಳನ್ನು ಬಿಟ್ಟು ಮಹಿಳೆಯರು, ಯುವತಿಯರು ದೇಶ ರಕ್ಷಣೆಯ ಬೆನ್ನಲುಬಾದ ರಕ್ಷಣಾ ಪಡೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ ಎಂದರೆ ಅದು ನಿಸ್ಸಂಶಯವಾಗಿಯೂ ಶ್ಲಾಘನೀಯವೇ ಸರಿ. ಹೌದು ದೇಶಕ್ಕೆ ಸಾಕಷ್ಟು ಕೊಡುಗೆ ನೀಡಿರುವ ಕೊಡಗಿನ ಹಲವು ಮಹಿಳೆಯರೂ ಭಾರತಮಾತೆಯ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ.

ಪ್ರಸ್ತುತ ಸೇನಾಪಡೆಗೆ ಸೇರುತ್ತಿರುವ ಕೊಡಗಿನವರ ಸಂಖ್ಯೆ ಕಡಿಮೆಯಾಗುತ್ತಿದೆ ಎಂಬ ವಿಚಾರವೂ ಇದೆ. ಇದು ಒಂದೆಡೆಯಾದರೆ ಪ್ರಸ್ತುತ ಸೇನೆಯಲ್ಲಿ ಅಧಿಕಾರಿಗಳಾಗಿ ದುಡಿಯುತ್ತಿರುವವರ ಸಂಖ್ಯೆ ಹೆಚ್ಚಿರುವದು ಹೆಮ್ಮೆಯ ವಿಚಾರವಾಗಿದೆ. ‘ಶಕ್ತಿ’ಗೆ ತಿಳಿದು ಬಂದಿರುವಂತೆ ಕೊಡವ ಜನಾಂಗ ಒಂದರಲ್ಲೇ 100ಕ್ಕೂ ಅಧಿಕ ಮಂದಿ ಪ್ರಸ್ತುತ ಭೂಸೇನೆ, ನೌಕಾಪಡೆ, ವಾಯುಪಡೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇವರಲ್ಲದೆ ಕೊಡಗಿನ ಇನ್ನೂ ಹಲವಷ್ಟು ಅಧಿಕಾರಿಗಳು ಸೇನಾಪಡೆಯಲ್ಲಿದ್ದಾರೆ.

ಇದರೊಂದಿಗೆ ಸೇನೆಯಲ್ಲಿ ಸೇರ್ಪಡೆಯಾಗುತ್ತಿರುವ ಕೊಡಗಿನ ವನಿತೆಯರ ಸಂಖ್ಯೆಯೂ ಹೆಚ್ಚಾಗುತ್ತಿದೆ. ವೈದ್ಯಕೀಯ ವಿಭಾಗದಲ್ಲಿ ಅದೆಷ್ಟೋ ಮಹಿಳೆಯರು ವಿವಿಧ ರ್ಯಾಂಕ್‍ನಲ್ಲಿದ್ದಾರೆ. ಆದರೆ ವೈದ್ಯಕೀಯ (ಎಂಎನ್‍ಎಸ್) ಹೊರತುಪಡಿಸಿ ನೇರವಾಗಿ (ಫೀಲ್ಡ್) ಕರ್ತವ್ಯ ನಿರ್ವಹಿಸುವದು ಸುಲಭದ ಮಾತಲ್ಲ.

(ಮೊದಲ ಪುಟದಿಂದ) ಆದರೂ ‘ಶಕ್ತಿ’ ಸಂಗ್ರಹಿಸಿದ ಮಾಹಿತಿಯಂತೆ ಪ್ರಸ್ತುತ ಕೊಡಗಿನ 7 ವೀರ ವನಿತೆಯರು ರಕ್ಷಣಾ ಪಡೆಯಲ್ಲಿ ವಿವಿಧ ಹಂತದ ಅಧಿಕಾರಿಗಳಾಗಿ ದುಡಿಯುತ್ತಿದ್ದಾರೆ.

ಮೇಜರ್ ಹುದ್ದೆಯಲ್ಲಿ ಮೇವಡ ಸ್ಮಿತಾ ಅಯ್ಯಪ್ಪ (ಮಂಡೇಪಂಡ ಕರ್ನಲ್ ಅಯ್ಯಪ್ಪ ಅವರ ಪತ್ನಿ) ಸೇವೆಯಲ್ಲಿದ್ದಾರೆ. ಕ್ಯಾಪ್ಟನ್ ರ್ಯಾಂಕ್‍ನಲ್ಲಿ ಬಾಚಮಂಡ ಜಿ. ವಿನಿತ ಹಾಗೂ ಬಿದ್ದಂಡ ಈಶ್ವರಿ ಜಗದೀಶ್, ಏರ್‍ಪೋರ್ಸ್‍ನಲ್ಲಿ ವಿಂಗ್ ಕಮಾಂಡರ್‍ಗಳಾಗಿ ಬೊಳಕಾರಂಡ ಲತಿಕಾ ಹಾಗೂ ಅಳಮೇಂಗಡ ವಿಲ್ಮ (ಮೇಜರ್ ಪಾಂಡಂಡ ದೇವಯ್ಯ ಅವರ ಪತ್ನಿ) ಸ್ಕ್ವಾಡ್ರನ್ ಲೀಡರ್‍ಗಳಾಗಿ ಕೇಕಡ ಪಲ್ಲವಿ ಪೊನ್ನಪ್ಪ ಹಾಗೂ ಕುಟ್ಟೇಟಿರ ತಷೀನಾ ಕುಟ್ಟಪ್ಪ ಸೇರಿ 7 ಮಂದಿ ಕೊಡಗಿನ ಮಹಿಳಾ ಅಧಿಕಾರಿಗಳು ರಕ್ಷಣಾ ಪಡೆಯಲ್ಲಿ ಗುರುತಿಸಿಕೊಂಡಿದ್ದಾರೆ.

ಮೇಜರ್ ಸ್ಮಿತಾ ಅವರು ವಿಶ್ವಸಂಸ್ಥೆಯ ಶಾಂತಿಪಾಲನಾ ಪಡೆಯಲ್ಲಿ ದೇಶದ ಏಕೈಕ ಮಹಿಳೆಯಾಗಿ ಸಿರಿಯಾ, ಇಸ್ರೇಲ್‍ನಲ್ಲಿಯೂ ಸೇವೆ ಸಲ್ಲಿಸಿದ್ದಾರೆ. ಕಾರ್ ರ್ಯಾಲಿಯಲ್ಲೂ ಇವರು ಸಾಧನೆ ಮಾಡಿದ್ದಾರೆ. 2013ರಲ್ಲಿ ಹಿಮಾಲಯ ರ್ಯಾಲಿಯಲ್ಲಿ ಜಯಗಳಿಸಿರುವ ಇವರು ಅದೇ ವರ್ಷ ಕೂಪ್ ಡಿ ಡಾಮೇಸ್ ಅನ್ನು ಗೆದ್ದು ಸಾಧನೆ ತೋರಿದ್ದಾರೆ. ಹಲವು ದುರ್ಗಮ ಪ್ರದೇಶಗಳಲ್ಲಿಯೂ ಇವರು ಕರ್ತವ್ಯ ನಿಭಾಯಿಸಿದ್ದಾರೆ.

ಕ್ಯಾಪ್ಟನ್ ಬಿದ್ದಂಡ ಈಶ್ವರಿ ಅವರು ಜಮ್ಮು ಮತ್ತು ಕಾಶ್ಮೀರ ಗಡಿಯಲ್ಲಿ ಕರ್ತವ್ಯ ನಿರ್ವಹಿಸಿದ್ದಾರೆ. ನಿವೃತ್ತ ಮೇ.ಜ. ಬಾಚಮಂಡ ಎ. ಕಾರ್ಯಪ್ಪ ಅವರ ಸಹೋದರರ ಪುತ್ರಿಯಾಗಿರುವ ಕ್ಯಾಪ್ಟನ್ ಬಾಚಮಂಡ ವಿನಿತಾ ಸರ್ಟಿಫೈಡ್ ಇನ್‍ಸ್ಟ್ರಕ್ಟರ್ ಇನ್‍ಪ್ಯಾರಾ ಮೋಟಾರ್ ಪರಿಣತಿ ಹೊಂದಿದ್ದಾರೆ. ವಿಂಗ್ ಕಮಾಂಡರ್ ಬೊಳಕಾರಂಡ ಲತಿಕಾ ಅವರು ಸರ್ಟಿಫೈಡ್ ಸ್ಕೈ ಡೈವಿಂಗ್ ಪರಿಣತಿ ಹೊಂದಿರುವ ಕೆಲವೇ ಮಹಿಳೆಯರಲ್ಲಿ ಒಬ್ಬರಾಗಿದ್ದಾರೆ. ಸ್ವಾತಂತ್ರ್ಯೋತ್ಸವ ಶುಭ ಸಂದರ್ಭದಲ್ಲಿ ಇವರೆಲ್ಲರ ಸೇವೆಯನ್ನು ಸ್ಮರಿಸುವದರೊಂದಿಗೆ ಇವರಿಗೆ ಹ್ಯಾಟ್ಸಾಫ್.

ಪತಿ - ಪತ್ನಿಯರ ದೇಶ ಸೇವೆ

ವಕೀಲರು, ವೈದ್ಯರು, ಇಂಜಿನಿಯರ್‍ಗಳು, ಐಎಫ್‍ಎಸ್, ಐಎಎಸ್ ಅಧಿಕಾರಿಗಳು ಈ ರೀತಿಯಾಗಿ ಪತಿ - ಪತ್ನಿಯರಿಬ್ಬರು ಒಂದೇ ರೀತಿಯ ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ನಿದರ್ಶನಗಳು ಸಾಕಷ್ಟಿವೆ. ಆದರೆ ಸೇನಾ ಪಡೆಯಲ್ಲಿ ಇಂತಹ ಕರ್ತವ್ಯ ನಿರ್ವಹಣೆ ಅಪರೂಪ.

ಮೇಜರ್ ಮೇವಡ ಸ್ಮಿತಾ, ಮಂಡೇಪಂಡ ಅಯ್ಯಪ್ಪ ಅವರನ್ನು ವಿವಾಹವಾಗಿದ್ದು, ಅವರು ಭೂಸೇನೆಯಲ್ಲಿ ಕರ್ನಲ್ ಆಗಿದ್ದಾರೆ. ಸ್ಮಿತಾ ಅವರ ತಂದೆ ಮೇವಡ ಅಪ್ಪಣ್ಣ ಅವರು ಸುಬೇದಾರ್ ಮೇಜರ್ ಆಗಿ ನಿವೃತ್ತರಾಗಿದ್ದು, ಇವರದ್ದು ಸೇನಾ ಪರಂಪರೆಯೇ ಆಗಿದೆ. ವಿಂಗ್‍ಕಮಾಂಡರ್ ಆಗಿರುವ ಅಳಮೇಂಗಡ ವಿಲ್ಮ ಅವರ ಪತಿ ಪಾಂಡಂಡ ದೇವಯ್ಯ ಮೇಜರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

‘ಸಮ್‍ಥಿಂಗ್ ಡಿಫರೆಂಟ್’

ಸೇನಾಪಡೆಯಲ್ಲಿ ‘ಫೀಲ್ಡ್’ನಲ್ಲಿ ಕೆಲಸ ನಿರ್ವಹಿಸುವದು ವಿಶೇಷ ಅನುಭವ . ಇದು ಒಂದು ತರಹದಲ್ಲಿ ‘ ಸಮ್‍ಥಿಂಗ್ ಡಿಫರೆಂಟ್’ ಯಾವಾಗ ಏನಾಗುತ್ತೆ ಗೊತ್ತಾಗಲ್ಲ. ತಂದೆ ತಾಯಿ, ಸಂಬಂಧಿಕರನ್ನು ಬಿಟ್ಟು ಅದೆಲ್ಲೋ ಕೆಲಸ ನಿರ್ವಹಿಸುವದು ಸುಲಭದ ಮಾತಲ್ಲ. ನನಗೆ ಚಿಕ್ಕಂದಿನಿಂದಲೂ ಸೇನೆಯ ಬಗ್ಗೆ ಆಸಕ್ತಿ ಇತ್ತು ಎಂದು ಕ್ಯಾಪ್ಟನ್ ಬಿದ್ದಂಡ ಈಶ್ವರಿ ಅವರು ತಮ್ಮ ಅನುಭವ ಹೇಳಿಕೊಂಡರು.

ರಕ್ತಗತವೇ ಸರಿ

ಪಠಾಣ್‍ಕೋಟ್, ಸಿಲ್ಲಿಗುಡಿ, ಜೋಧ್‍ಪುರ್, ಜಲಂಧರ್‍ನಲ್ಲಿ 9 ವರ್ಷ ದಿಂದ ಕರ್ತವ್ಯ ನಿರ್ವಹಿಸಿ ರುವ ಬಾಚಮಂಡ ಜಿ. ವಿನಿತಾ ತಮ್ಮ ವೃತ್ತಿಯ ಬಗ್ಗೆ ಹರ್ಷ ವ್ಯಕ್ತಪಡಿಸಿ, ಕೊಡಗಿ ನವರಿಗೆ ಸೇನಾ ಪರಂಪರ ರಕ್ತಗತವಾಗಿ ಬಂದಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.

( ಮಾಹಿತಿ ಸಹಕಾರ : ಉಳ್ಳಿಯಡ ಎಂ. ಪೂವಯ್ಯ)

( ಇನ್ನೂ ಅನೇಕ ಮಹಿಳೆಯರು ಸೇನಾ ವಿಭಾಗದಲ್ಲಿ ಸೇವೆ ಸಲ್ಲಿಸುತ್ತಿರಬಹುದು. ‘ಶಕ್ತಿ’ಗೆ ಲಭ್ಯವಾದ ಮಾಹಿತಿಯನ್ನು ನೀಡಲಾಗಿದೆ. - ಸಂ.)