ಶ್ರೀಮಂಗಲ, ಅ. 1: ಜಾಗತೀಕವಾಗಿ ತಾಪಮಾನ ವರ್ಷದಿಂದ ವರ್ಷಕ್ಕೆ ಹೆಚ್ಚುತಿರುವ ಸಂದÀರ್ಭದಲ್ಲಿ ಮರದ ನೆರಳಿನ ಆಶ್ರಯದಲ್ಲಿ, ಹಾಗೂ ಉತ್ತಮ ಹವಾಮಾನದಲ್ಲಿ ಬೆಳೆಯುತ್ತಿರುವ ಕಾಫಿ ಪ್ಲಾಂಟೇಷನ್ ಪರಿಸರ ಸ್ನೇಹಿಯಾಗಿದ್ದು, ಸಾಂಪ್ರದಾಯಿಕವಾಗಿ ಬೆಳೆಯುತ್ತಿರುವ ಕಾಫಿಗೆ ಉತ್ತಮ ಭವಿಷ್ಯವಿದೆ. ಇದರ ಬಗ್ಗೆ ಬೆಳೆಗಾರರು ಯಾವದೇ ಕಾರಣಕ್ಕೂ ನಿರಾಸಕ್ತಿ ಬೆಳೆಸಿಕೊಳ್ಳದೆ ಉತ್ತಮ ಗುಣಮಟ್ಟದ ಹಾಗೂ ಹೆಚ್ಚಿನ ಇಳುವರಿಯ ಕಾಫಿ ಬೆಳೆಯಲು ಪ್ರಾಶಸ್ತ್ಯ ನೀಡಬೇಕೆಂದು ಕಾಫಿ ಬೆಳೆಗಾರರಿಗೆ ಭಾರತೀಯ ಕಾಫಿ ಮಂಡಳಿ ಉಪಾಧ್ಯಕ್ಷೆ ಆದೇಂಗಡ ತಾರಾ ಅಯ್ಯಮ್ಮ ಅವರು ಕರೆ ನೀಡಿದರು.

ಗೋಣಿಕೊಪ್ಪ ಕೃಷಿ ವಿಜ್ಞಾನ ಕೇಂದ್ರದಲ್ಲಿ ಭಾರತೀಯ ಕಾಫಿಮಂಡಳಿ ಆಯೋಜಿಸಿದ್ದ ಅಂತರರಾಷ್ಟ್ರೀಯ ಕಾಫಿ ದಿನಾಚರಣೆ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಮುಂದುವರಿದು ಮಾತನಾಡಿದ ಅವರು ಕಾಫಿಯನ್ನು ಲಕ್ಷಾಂತರ ಮರಗಳ ಆಶ್ರಯದಲ್ಲಿ ಬೆಳೆಯಲಾಗುತ್ತಿದೆ. ಕಾಫಿ ಉದ್ಯಮದಿಂದ ಪರಿಸರಕ್ಕೆ ಹೆಚ್ಚಿನ ಅನುಕೂಲವಿದೆ. ಕೊಡಗು ಜಿಲ್ಲೆಯಲ್ಲಿ ಇತ್ತಿಚೆಗೆ ಮರಗಳ ಹನನ ಹೆಚ್ಚಾಗುತ್ತಿದ್ದು ಇದರಿಂದ ಹವಾಮಾನದಲ್ಲಿ ವ್ಯತ್ಯಾಸವಾಗಿ ಕಾಫಿ ಬೆಳೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ವಿಶ್ವದಲ್ಲಿ ಅತೀ ಹೆಚ್ಚು ಕಾಫಿ ಬೆಳೆಯುವ ಬ್ರಿಜಿಲ್ ದೇಶದಲ್ಲಿ ಬರಗಾಲ ಹಾಗೂ ಮಂಜಿನಿಂದ ಕಾಫಿ ಬೆಳೆ ನಷ್ಟವಾಗಿದ್ದು, ಜಾಗತೀಕವಾಗಿ ಕಾಫಿ ಬೆಳೆಗೆ ಮುಂದಿನ ದಿನಗಳಲ್ಲಿ ಹೆಚ್ಚಿನ ಬೇಡಿಕೆ ಬರಲಿದೆ ಎಂದು ಹೇಳಿದರು. ಜಿಲ್ಲೆಯಲ್ಲಿ ಬಹುತೇಕ ಸಣ್ಣ ಬೆಳೆಗಾರರಿದ್ದು ಸಂಕಷ್ಟದಲ್ಲೇ ಉಳಿದಿದ್ದಾರೆ. ಆದರೆ ದೊಡ್ಡ ಬೆಳೆಗಾರರು ತಾವು ಬೆಳೆಸಿದ ಕಾಫಿಯನ್ನು ರಫ್ತು ಮಾಡುವ ಹಾಗೂ ಬೇರೆ ಕಾಫಿಯನ್ನು ಖರೀದಿ ಮಾಡುವ ಮೂಲಕ ಲಾಭಗಳಿಸುತ್ತಿದ್ದಾರೆ ಎಂದು ಹೇಳಿದ ಅವರು ಈ ನಿಟ್ಟಿನಲ್ಲಿ ಸಣ್ಣ ಬೆಳೆಗಾರರು ಸಂಘಗಳನ್ನು ನಿರ್ಮಿಸಿಕೊಂಡು ತಮ್ಮ ಕಾಫಿಯನ್ನು ತಾವೇ ರಫ್ತು ಮಾಡುವ ಮೂಲಕ ಮಾರುಕಟ್ಟೆ ಕಲ್ಪಿಸಿಕೊಂಡು ಲಾಭ ಗಳಿಸಲು ಪ್ರಯತ್ನಿಸಬೇಕು ಎಂದು ಹೇಳಿದರು.

ಕುಟ್ಟದ ಪ್ರಗತಿಪರ ಕಾಫಿ ಬೆಳೆಗಾರ ಬೊಳ್ಳೇರ ದೀಪಕ್ ಚಂಗಪ್ಪ ಮಾತನಾಡಿ, ಈ ಹಿಂದೆ ಕಾಫಿ ಉತ್ಪಾದನೆ ಹೆಚ್ಚಾಗಿ ಅದರ ಬೇಡಿಕೆ ಕಡಿಮೆ ಇತ್ತು. ಇದರಿಂದ ಕಾಫಿ ಮಾರುಕಟ್ಟೆ ಕುಸಿತ ಕಂಡಿತ್ತು. ಆದರೆ ಪ್ರಮುಖವಾಗಿ ಕಾಫಿ ಉತ್ಪಾದಿಸುವ ದೇಶಗಳಲ್ಲಿ ಹವಾಮಾನ ವೈಪರೀತ್ಯದಿಂದ ಕಾಫಿ ಬೆಳೆ ತೀವ್ರ ನಷ್ಟ ಉಂಟಾಗಿದೆ. ಇದರಿಂದ ಭಾರತದ ಕಾಫಿಗೆ ಉತ್ತಮ ಬೆಲೆಯನ್ನು ಮುಂದಿನ ದಿನಗಳಲ್ಲಿ ನಿರೀಕ್ಷಿಸಬಹುದಾಗಿದೆ ಎಂದು ಹೇಳಿದರು. ಎಂದಿಗೂ ಕಾಫಿಯನ್ನು ನೆರಳು ಇಲ್ಲದೆ ಬೆಳೆಯುವ ಪದ್ಧತಿ ಅನುಸರಿಸದೆ, ನೆರಳಿನ ಆಶ್ರಯದಲ್ಲೆ ಬೆಳೆಯಬೇಕು. ಭಾರತದ ಕಾಫಿ ಉತ್ತಮ ಹವಾಮಾನ ಹಾಗೂ ನೆರಳಿನ ಆಶ್ರಯದಲ್ಲಿ ಬೆಳೆಯುವದರಿಂದ ವಿಶ್ವಮಟ್ಟದಲ್ಲಿ ಹೆಚ್ಚಿನ ಬೇಡಿಕೆ ಇದೆ ಎಂದು ಹೇಳಿದರು.

ಮುಖ್ಯ ಅತಿಥಿಯಾಗಿ ಮಾತನಾಡಿದ ಪ್ರಗತಿಪರ ಬೆಳೆಗಾರ ಅಜ್ಜಿನಿಕಂಡ ಭೀಮಯ್ಯ ಅವರು ಪ್ರತಿ ಕಾಫಿ ಬೆಳೆಗಾರ ವೈಜ್ಞಾನಿಕವಾಗಿ ಕಾಫಿ ಬೆಳೆಯುವಂತಾಗಬೇಕು. ಕಾಫಿಯೊಂದಿಗೆ ಕರಿಮೆಣಸು ಇತ್ಯಾದಿ ಮಿಶ್ರ ಬೆಳೆಗಳನ್ನು ಹಾಗೂ ಹಲಸಿನ ಮರ ಸಿಲ್ವರ್, ಆಗರ್‍ಉಡ್ ಮರಗಳನ್ನು ಬೆಳೆಸಿ ಆದಾಯ ಗಳಿಸಬಹುದಾಗಿದೆ. ಸರಕಾರ ಇನ್ಸ್‍ಟೆಂಟ್ ಕಾಫಿ ಘಟಕ ಸ್ಥಾಪಿಸಿ ಕಾಫಿಗೆ ಉತ್ತಮ ಮಾರುಕಟ್ಟೆ ಕಲ್ಪಿಸಬೇಕೆಂದು ಹೇಳಿದರು.

ವೀರಾಜಪೇಟೆ ಕಾಫಿ ಮಂಡಳಿ ಉಪನಿರ್ದೇಶಕ ಸತೀಶ್ ಚಂದ್ರ ಮಾತನಾಡಿ, ಭಾರತದ ಕಾಫಿ ನೆರಳಿನಲ್ಲಿ ಬೆಳೆದ ಕಾಫಿ ಎಂದು ವಿಶ್ವ ಪ್ರಸಿದ್ಧವಾಗಿದ್ದು, ಉತ್ತಮ ಗುಣಮಟ್ಟದಲ್ಲಿದೆ. ಆದರೆ ಇಳುವರಿ ಹೆಚ್ಚಿಸುವ ಉದ್ದೇಶದಿಂದ ನೆರಳಿನ ಮರ ತೆರವು ಮಾಡಿ ತೆರೆದ ತೋಟದಲ್ಲಿ ಬೆಳೆಯಲಾಗುತ್ತಿದೆ. ಎದರಿಂದ ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಭಾರತದ ಕಾಫಿಗೆ ಇರುವ ಒಳ್ಳೆಯ ಹೆಸರು ಕೆಡುವಂತಾಗಿದೆ. ನೆರಳಿನಿಂದ ಬೆಳೆಯು ಕಾಫಿಗೆ ಹೆಚ್ಚಿನ ಬೇಡಿಕೆಯಿದ್ದು, ದೇಶದ ಅತಿ ಹೆಚ್ಚು ಕಾಫಿ ರಪ್ತು ಮಾಡಬೇಕಾಗಿರುವ ದರಿಂದ ಗುಣಮಟ್ಟ ಕೆಡದಂತೆ ಬೆಳೆಗಾರರು ಎಚ್ಚರವಹಿಸಬೇಕಾಗಿದೆ ಎಂದು ಸಲಹೆ ನೀಡಿದರು.

ಗೋಣಿಕೊಪ್ಪ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥರಾದ ಸಾಜು ಜಾರ್ಜ್ ಮಾತನಾಡಿ ಕಾಫಿ ಹಾಗೂ ಕರಿಮೆಣಸು ಬೆಳೆಯತ್ತ ಯುವ ಸಮುದಾಯ ಆಸಕ್ತಿ ಬೆಳೆಸಿಕೊಳ್ಳುವಂತಾಗಬೇಕು. ಈ ಬೆಳೆಯತ್ತ ತೊಡಗಿಸಿಕೊಂಡು ಲಾಭಗಳಿಸಬಹುದು. ಕಾಫಿ ತೋಟದ ಮಣ್ಣಿನ ಸಂರಕ್ಷಣೆ ಹಾಗೂ ಲಘು ಪೋಷಕಾಂಶದ ಮಹತ್ವದ ಬಗ್ಗೆ ವಿವರಿಸಿದ ಅವರು ಮಣ್ಣಿನ ಸೂಕ್ಷ್ಮಾಣು ಜೀವಿಗಳ ವೃದ್ದಿಗೆ ಹಾಗೂ ಮಣ್ಣಿನ ಪರೀಕ್ಷೆಗೆ ಹೆಚ್ಚಿನ ಮಹತ್ವ ನೀಡಬೇಕೆಂದು ಹೇಳಿದರು.

ಕಾಫಿ ಉಗಮ, ಇತಿಹಾಸ ಸಾರುವ ಸಾಕ್ಷ್ಯ ಚಿತ್ರವನ್ನು ಪ್ರದರ್ಶಿಸಲಾಯಿತು.

ವೇದಿಕೆಯಲ್ಲಿ ಗೋಣಿಕೊಪ್ಪ ಕಾಫಿ ಮಂಡಳಿಯ ಎಸ್.ಎಲ್.ಒ ಬಿ.ಎನ್ ಶಂಕರ್, ಶ್ರೀಮಂಗಲ ಜೆ.ಎಲ್.ಒ, ಸಣ್ಣುವಂಡ ರಮೇಶ್ ಹಾಜರಿದ್ದರು. ಕಾಫಿ ಮಂಡಳಿಯಲ್ಲಿ ಸುದೀರ್ಘ ಸೇವೆ ಸಲ್ಲಿಸಿ ಜೆ.ಎಲ್.ಒಗಳಾದ ಎಂ.ಕೆ ಪೂವಯ್ಯ ವಿ.ಬಿ. ವಾಸುದೇವ, ಬಿ.ಟಿ. ಶಿವರಾಮ್ ರೈ ಅವರನ್ನು ಸನ್ಮಾನಿಸಲಾಯಿತು.