ಭಾಗಮಂಡಲ, ಸೆ. 13: ಉರಿಬಿಸಿಲನ್ನು ಬೇಧಿಸಿ ಭಾಗಮಂಡಲದಲ್ಲಿ ಇಂದು ಅಪರಾಹ್ನ ಮಳೆ ಸುರಿಯಿತು; ಮಡಿಕೇರಿ ಯಲ್ಲಿಯೂ ಭಾರಿ ಮಳೆಯಾಯಿತು. ಮಂಡ್ಯದಲ್ಲಿಯೂ ಇಂದು ದಿಢೀರಾಗಿ ಮೋಡದ ವಾತಾವರಣ ಕವಿದಿದೆ ಎಂದು ಅಲ್ಲಿನ ಪತ್ರಕರ್ತರೊಬ್ಬರು ಮಾಹಿತಿಯಿತ್ತರು. ಇದಕ್ಕೆಲ್ಲ ಹಿನ್ನೆಲೆ ಹುಡುಕುತ್ತ ಹೋದಾಗ ಭಾಗಮಂಡಲದಲ್ಲಿ ತಾ. 11 ರಿಂದ 15 ಮಂದಿ ಪುರೋಹಿತರ ತಂಡ ಪರ್ಜನ್ಯ ವೃಷ್ಟಿ ಯಜ್ಞ ಮಾಡುತ್ತಿರುವದು ಗಮನಕ್ಕೆ ಬಂದಿತು.ಇದರ ರೂವಾರಿ ಯಾರು ಎಂದು ಕುತೂಹಲದಿಂದ ತಪಾಸಣೆಗೆ ಇಳಿದಾಗ ಬೆಂಗಳೂರಿನ ಪ್ರಕೃತಿ ಫೌಂಡೇಶನ್ಸ್ ಎಂಬದು “ಶಕ್ತಿ” ಯ ಗಮನಕ್ಕೆ ಬಂದಿತು. ಇದರ ಪ್ರಮುಖ ಸುಮಾರು 58 ರ ಹರೆಯದ ಚಂದ್ರಶೇಖರ್ ರಾಜ್ ಎಂಬವರನ್ನು ಸಂಪರ್ಕಿಸಿದಾಗ ಸುಮಾರು ರೂ. 4 ಲಕ್ಷ ಖರ್ಚು ಮಾಡಿ ಈ ಯಜ್ಞ ನಡೆಸುತ್ತಿದ್ದಾರೆ ಎಂಬ ಮಾಹಿತಿ ದೊರೆಯಿತು. ಇದು ಧಾರ್ಮಿಕ ಯಜ್ಞವಲ್ಲ, ವೈಜ್ಞಾನಿಕ ಆಧಾರಿತ ಯಜ್ಞ ಎಂದು ಅವರು ಸ್ಪಷ್ಟಪಡಿಸಿದರು.ಮೋಡ ಬಿತ್ತನೆ ಯಜ್ಞಕ್ಕೆ ಬಳಸುವ ತುಪ್ಪ, ಆಲದ ಮರ, ಹಲಸಿನ ಮರ ಮೊದಲಾದ ಪವಿತ್ರ ಮರದ ತುಂಡುಗಳು ಹಾಗೂ ಇನ್ನಿತರ ವಸ್ತುಗಳನ್ನು ಅಗ್ನಿಗೆ ಆಹುತಿ ಮಾಡಿದಾಗ ‘ಝಿಂಕ್ ಆಕ್ಸೈಡ್’ ಮತ್ತು ‘ಮ್ಯಾಂಗನೀಸ್ ಆಕ್ಸೈಡ್’ ಉತ್ಪತ್ತಿ ಯಾಗುತ್ತದೆ. ಆ ಮೂಲಕ ಆಗಸದಲ್ಲಿ ಮೋಡ ಬಿತ್ತನೆ ಯಾಗುತ್ತದೆ. ವೈಜ್ಞಾನಿಕವಾಗಿಯೇ ಮಳೆ ಬರುತ್ತದೆ ಎಂದು ಅವರು ವಿವರಿಸಿದರು. ಯಜ್ಞ ಕೇಂದ್ರದಿಂದ ಸುಮಾರು 78 ಚದರ ಕಿ.ಮೀ. ವ್ಯಾಪ್ತಿಯಲ್ಲಿ ಮಳೆ ಸುರಿಯತ್ತದೆ ಎಂದರು. ಇಂತಹ ವೈಜ್ಞಾನಿಕ ಆಧಾರಿತ ಯಜ್ಞವನ್ನು ಈ ವರ್ಷ ಏಪ್ರಿಲ್‍ನಲ್ಲಿ ಬರ ಪೀಡಿತವಾಗಿದ್ದ ಲಾತೂರ್‍ನಲ್ಲಿ ನಡೆಸಲಾಯಿತು. ಅಲ್ಲದೆ ಕಳೆದ ವರ್ಷ ನಾಗಪುರದಲ್ಲಿಯೂ ನಡೆಸಲಾಗಿತ್ತು ಆ ಸಂದರ್ಭ ಆಯಾ ಪ್ರದೇಶಗಳಲ್ಲಿ ಉತ್ತಮ ಮಳೆಯಾಗಿ ಜನತೆ ನೆಮ್ಮದಿ ಹೊಂದುವಂತಾಗಿತ್ತು.