ಮಡಿಕೇರಿ, ಅ.14: ಭಾಗಮಂಡಲದಲ್ಲಿ 10 ಟಿಪ್ಪರ್‍ಗಳಷ್ಟು ಅಕ್ರಮ ಮರಳು ಪತ್ತೆಯಾಗಿದೆ. ಮಡಿಕೇರಿ ತಾಲೂಕು ತಹಶೀಲ್ದಾರ್ ಅವರು ತಮಗೆ ದೊರೆತ ಮಾಹಿತಿಯನ್ವಯ ಕೆಲವು ಸ್ಥಳಗಳಲ್ಲಿ ಧಾಳಿ ನಡೆಸಿದ್ದು ಅಕ್ರಮ ಮರಳು ದಂಧೆಯನ್ನು ಪತ್ತೆ ಹಚ್ಚಿದ್ದಾರೆ.

ಭಾಗಮಂಡಲದಲ್ಲಿ ಜಿಲ್ಲಾಡಳಿತ ದಿಂದ ಕಾವೇರಿ ಜಾತ್ರೆ ಹಿನ್ನೆಲೆ ಸಂಗಮದಿಂದ ಹೂಳೆತ್ತಲು ಟೆಂಡರ್ ಮೂಲಕ ಗುತ್ತಿಗೆ ನೀಡಲಾಗಿತ್ತು. ಜಿಲ್ಲಾ ಪಂಚಾಯ್ತಿಯ ಅಸಿಸ್ಟೆಂಟ್ ಎಕ್ಸಿಕ್ಯೂಟಿವ್ ಇಂಜಿನಿಯರ್ ಮೂಲಕ ಟೆಂಡರ್ ಆಹ್ವಾನಿಸಲಾಗಿತ್ತು. ಟೆಂಡರ್ ಪಡೆದ ವ್ಯಕ್ತಿಗಳು ದಸರಾ ಉತ್ಸವದ ಹಿನ್ನೆಲೆಯಲ್ಲಿ ಪೊಲೀಸ್ ಅಧಿಕಾರಗಳು ಬಿಝಿ ಇÀದ್ದುದನ್ನು ಗಮನಿಸಿ ರಾತೋರಾತ್ರಿ ಭಾಗಮಂಡಲ ಸಂಗಮದಿಂದ ತೆಗೆಯಲಾಗಿದ್ದ ಮರಳನ್ನು ಅಕ್ರಮ ಸಾಗಾಟ ಮಾಡಿರುವದಾಗಿ ಅಪರ ಜಿಲ್ಲಾಧಿಕಾಯವರಿಗೆ ಮೌಖಿಕ ದೂರು ದೊರೆತಿತ್ತು. ಈ ಹಿನ್ನೆಲೆಯಲ್ಲಿ ತಾಲೂಕು ತಹಶೀಲ್ದಾರ್ ಎ.ಎ. ಕುಸುಮ ಅವರು ತಮ್ಮ ಸಿಬ್ಬಂದಿ ಸಹಿತ ಭಾಗಮಂಡಲ ಸನಿಹದ ಕೆಲವು ಸ್ಥಳಗಳಲ್ಲಿ ಅಕ್ರಮ ಮರಳು ಸಾಗಾಟವಾಗಿರುವದನ್ನು ಪತ್ತೆ ಹಚ್ಚಿ ಅಪರ ಜಿಲ್ಲಾಧಿಕಾರಿಯವರಿಗೆ ಹಾಗೂ ಜಿಲ್ಲಾ ಪಂಚಾಯ್ತಿ ಇಂಜಿನಿಯರ್ ಗಳಿಗೆ ದೂರಿತ್ತರು. ಈ ಬಗ್ಗೆ ಅಪರ ಜಿಲ್ಲಾಧಿಕಾರಿ ಸತೀಶ್ ಕುಮಾರ್ ಅವರು ಮಾಹಿತಿ ಬಯಸಿದಾಗ ಜಿಲ್ಲಾ ಪಂಚಾಯ್ತಿ ಇಂಜಿನಿಯರ್‍ಗಳು ಈ ಅಕ್ರಮ ಮರಳು ಭಾಗಮಂಡಲ ಸಂಗಮದಿಂದ ತೆಗೆದುದಲ್ಲ ಎಂದು ಸಮಜಾಯಿಷಿಕೆಯಿತ್ತಿದ್ದಾರೆ. ತಹಶೀಲ್ದಾರ್ ಅವರು ಅಕ್ರಮ ಮರಳು ಕುರಿತು ಭಾಗಮಂಡಲ ಪೊಲೀಸ್ ಠಾಣೆಗೂ ಮಾಹಿತಿಯಿತ್ತಿದ್ದು ಇದುವರೆಗೂ ಯಾರ ವಿರುದ್ಧವೂ ಎಫ್.ಐ ಆರ್ ಆಗಿಲ್ಲ ಎಂಬದು “ಶಕ್ತಿ” ಗೆ ಖಾತರಿಯಾಗಿದೆ.

ಆದರೆ, ತಹಶೀಲ್ದಾರ್ ಕುಸುಮ ಅವರು ಖುದ್ದು ಕೆಲವು ಸ್ಥಳಗಳಿಗೆ ತೆರಳಿ ಅಕ್ರಮ ಮರಳನ್ನು ಪತ್ತೆ ಹಚ್ಚಿರುವದು ಖಚಿತಗೊಂಡಿದೆ. ಈ ಸಂಬಂಧ ಕ್ರಮ ಕೈಗೊಳ್ಳಲು ಜಿಲ್ಲಾ ಪಂಚಾಯ್ತಿ ಇಂಜಿನಿಯರ್‍ಗಳು, ಪೊಲೀಸ್ ಇಲಾಖೆ ಮುಂದಾಗಿಲ್ಲ ಏಕೆ ಎಂಬದು ಇದೀಗ ಸಾರ್ವಜನಿಕ ವಲಯದಲ್ಲಿ ಕೇಳಿ ಬಂದಿರುವ ಪ್ರಶ್ನೆ.

ತಹಶೀಲ್ದಾರ್ ಅವರು ತಮ್ಮ ಸಿಬ್ಬಂದಿ ಸಹಿತ ಭಾಗಮಂಡಲ ಕರಿಕೆ ರಸ್ತೆಯಲ್ಲಿರುವ ರವೀಂದ್ರ ಎಂಬವರ ಮನೆ ಆವರಣ, ತಣ್ಣ್ಣಿಮಾನಿ ಭಗವತಿ ದೇವಾಲಯ ಆವರಣ, ಕೋರಂಗಾಲದ ಪುನೀತ್ ಎಂಬವರ ಮನೆ ಆವರಣದಲ್ಲಿ ಅಕ್ರಮ ಮರಳು ಪತ್ತೆ ಹಚ್ಚಿ ಸಂಬಂಧಿತ ಅಧಿಕಾರಿಗಳಿಗೆ ಮಾಹಿತಿಯಿತ್ತಿದ್ದಾರೆ.