ಕೂಡಿಗೆ, ಡಿ. 26: ಹಾಕಿಯ ತವರು ಜಿಲ್ಲೆ ಎಂದೇ ಹೆಸರುವಾಸಿಯಾಗಿರುವ ಕೊಡಗು ಜಿಲ್ಲೆಯ ಎರಡು ಕೇಂದ್ರಗಳಲ್ಲಿ ಹಾಕಿ ಟರ್ಫ್ ಈಗಾಗಲೇ ನಿರ್ಮಾಣವಾಗಿದ್ದು, ಹಾಕಿ ಕ್ರೀಡಾಪಟುಗಳಿಗೆ ಅನುಕೂಲವಾಗಿದೆ.
ಅದರಂತೆ ಕೂಡಿಗೆ ಸರಕಾರಿ ಕ್ರೀಡಾ ಪ್ರೌಢಶಾಲೆಯಲ್ಲಿ ಇದೀಗ ಈ ಸಾಲಿನಲ್ಲಿ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯ ವತಿಯಿಂದ ಅಂದಾಜು ರೂ. 4.5 ಕೋಟಿ ವೆಚ್ಚದಲ್ಲಿ ಹಾಕಿ ಟರ್ಫ್ ಕಾಮಗಾರಿ ಭರದಿಂದ ಸಾಗುತ್ತಿದೆ. ಈ ಶಾಲೆಯಲ್ಲಿ ರಾಜ್ಯಾದ್ಯಂತ ವಿವಿಧ ಜಿಲ್ಲೆಗಳ ವಿದ್ಯಾರ್ಥಿಗಳು ಹಾಕಿ, ಅಥ್ಲೆಟಿಕ್ಸ್ ವಿಭಾಗಗಳಲ್ಲಿ ಅಭ್ಯಾಸಿಸುತ್ತಿದ್ದಾರೆ.
ಈ ಮೊದಲು ವಿದ್ಯಾರ್ಥಿಗಳು ಮಣ್ಣಿನ ಮೈದಾನದಲ್ಲೆ ಹಾಕಿ ಅಭ್ಯಾಸ ಮಾಡುತ್ತಿದ್ದರೂ, ಇದರಲ್ಲೇ ನುರಿತ ತರಬೇತುದಾರರಿಂದ ತರಬೇತಿ ಪಡೆದು ವಿದ್ಯಾರ್ಥಿಗಳು ಜಿಲ್ಲೆ ಹಾಗೂ ರಾಜ್ಯಕ್ಕೆ ಹೆಸರು ತಂದಿದ್ದಾರೆ.
ಆದರೆ ಗ್ರಾಮಾಂತರ ಪ್ರದೇಶದ ವಿದ್ಯಾರ್ಥಿಗಳು ಅಭ್ಯಾಸ ಮಾಡುತ್ತಿರುವ ಈ ಶಾಲಾ ಆವರಣಕ್ಕೆ ಇದೀಗ ಹಾಕಿ ಟರ್ಫ್ (ಕೃತಕ ಹುಲ್ಲಿನ ಮೈದಾನ) ದೊರೆತಿದ್ದು, ಇದೀಗ ಬಹುದಿನಗಳ ಬೇಡಿಕೆ ಈಡೇರಿದಂತಾಗಿದೆ.