ಸೋಮವಾರಪೇಟೆ,ಆ.15: ದೇಶವನ್ನು ಕಾಡುತ್ತಿರುವ ಭಯೋತ್ಪಾದನೆ ಮತ್ತು ಭ್ರಷ್ಟಾಚಾರವನ್ನು ಮೋಲೋಚ್ಛಾಟನೆ ಮಾಡಿದರೆ ಮಾತ್ರ ಸ್ವತಂತ್ರ ಭಾರತ ಇನ್ನಷ್ಟು ಸುಭದ್ರವಾಗುತ್ತದೆ ಎಂದು ಸೋಮವಾರಪೇಟೆ ತಹಶೀಲ್ದಾರ್ ಬಿ.ಸಿ. ಶಿವಪ್ಪ ಹೇಳಿದರು.ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಇಲ್ಲಿನ ಜೂನಿಯರ್ ಕಾಲೇಜು ಆವರಣದಲ್ಲಿ ಆಯೋಜಿಸಲಾಗಿದ್ದ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ, ರಾಷ್ಟ್ರಧ್ವಜಾರೋಹಣ ನೆರವೇರಿಸಿದ ನಂತರ ಅವರು ಸ್ವಾತಂತ್ರ್ಯೋತ್ಸವದ ಸಂದೇಶ ನೀಡಿದರು. ನಾವು ಇಂದು ಮಂಗಳ ಗ್ರಹಕ್ಕೆ ದಾಪುಗಾಲಿಟ್ಟಿದ್ದೇವೆ. ಬಾಹ್ಯಾಕಾಶ ವಿಜ್ಞಾನ ತಂತ್ರಜ್ಞಾನದಲ್ಲಿ ಗಣನೀಯ ಪ್ರಗತಿ ಸಾಧಿಸಿದ್ದೇ ವಾದರೂ ನಮ್ಮ ಮುಂದೆ ಬೆಟ್ಟದಷ್ಟು ಸಮಸ್ಯೆಗಳಿವೆ. ಪ್ರತಿಯೋರ್ವ ಭಾರತೀಯನು ಜಾತಿ, ಧರ್ಮ, ವರ್ಣ ಭೇದಗಳನ್ನು ಮರೆತು ದೇಶದ ಪ್ರಗತಿಗಾಗಿ ದುಡಿಯಬೇಕಿದೆ. ಕೋಮುವಾದ, ಭಯೋತ್ಪಾದನೆ, ಭ್ರಷ್ಟಾಚಾರದಂತಹ ಪೆಡಂಭೂತಗಳನ್ನು ಅಳಿಸಿ ಹಾಕಬೇಕಿದೆ ಎಂದರು.
ಮುಖ್ಯ ಅತಿಥಿಯಾಗಿದ್ದ ಜಿಲ್ಲಾ ಪಂಚಾಯತ್ ಸದಸ್ಯೆ ಪೂರ್ಣಿಮಾ ಗೋಪಾಲ್ ಮಾತನಾಡಿ, ದೇಶದಲ್ಲಿ ಸಾಕ್ಷರತೆಯ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವದು ಉತ್ತಮ ಬೆಳವಣಿಗೆಯಾಗಿದ್ದು, ದೇಶಾದ್ಯಂತ ಏಕರೂಪದ ಶಿಕ್ಷಣ ವ್ಯವಸ್ಥೆ ಜಾರಿ ಯಾಗಬೇಕಿದೆ. ವಿಜ್ಞಾನ, ತಂತ್ರಜ್ಞಾನ, ಕೈಗಾರಿಕೋದ್ಯಮ, ಆಹಾರೋತ್ಪಾದನೆ ಇವೇ ಮುಂತಾದ ಕ್ಷೇತ್ರಗಳಲ್ಲಿ ದೇಶ ಪ್ರಗತಿಯಲ್ಲಿದೆ ಎಂದರು.
ಸ್ವಾತಂತ್ರ್ಯದ ಸಂಭ್ರಮದಲ್ಲೇ ನಾವುಗಳು
(ಮೊದಲ ಪುಟದಿಂದ) ಮೈಮರೆಯುವಂತಿಲ್ಲ. ಜಾಗತೀಕರಣ, ಉದಾರೀಕರಣಕ್ಕೆ ತೆರೆದುಕೊಂಡ ನಂತರವೂ ಭಾರತದಲ್ಲಿ ಆರ್ಥಿಕ ಅಸಮಾನತೆ ಹೆಚ್ಚಾಗುತ್ತಿರುವದು, ಶೈಕ್ಷಣಿಕವಾಗಿ ಹೆಚ್ಚಿನ ಪ್ರಗತಿ ಯಾಗದಿರುವದು ಸೇರಿದಂತೆ ಇತರ ನ್ಯೂನತೆಗಳನ್ನು ತೊಡೆದು ಹಾಕಬೇಕು. ಆಡಳಿತಾತ್ಮಕ ವ್ಯವಸ್ಥೆಯಲ್ಲಿ ಇನ್ನಷ್ಟು ಸುಧಾರಣೆಯಾದರೆ ಮಾತ್ರ ದೇಶದ ಸ್ವಾತಂತ್ರ್ಯಕ್ಕೆ ಅರ್ಥ ಬರುತ್ತದೆ ಎಂದರು.
ತಾ.ಪಂ. ಸದಸ್ಯೆ ತಂಗಮ್ಮ ಟೀಚರ್ ಮಾತನಾಡಿ, ದೇಶದ ಗಡಿ ಕಾಯುವ ಸೈನಿಕ ಹಾಗೂ ದೇಶವಾಸಿಗಳಿಗೆ ಅನ್ನ ನೀಡುವ ರೈತರನ್ನು ದಿನಂಪ್ರತಿ ಸ್ಮರಿಸಬೇಕಿದೆ. ಬಡತನ, ತಾರತಮ್ಯ ನೀತಿಯನ್ನು ಹೋಗಲಾಡಿಸಬೇಕಿದೆ. ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ, ಪೂರ್ವ-ಪಶ್ಚಿಮೋತ್ತರ ರಾಜ್ಯಗಳ ಸಮಸ್ಯೆಯನ್ನೂ ಬಗೆಹರಿಸಲು ಇನ್ನಷ್ಟು ಪ್ರಯತ್ನಗಳು ನಡೆಯಬೇಕಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ತಾ.ಪಂ. ಅಧ್ಯಕ್ಷೆ ಪುಷ್ಪಾ ರಾಜೇಶ್ ಮಾತನಾಡಿ, ನಮ್ಮ ಹಿರಿಯರು ಹೋರಾಟ, ತ್ಯಾಗ, ಬಲಿದಾನಗಳ ಮೂಲಕ ದೇಶಕ್ಕೆ ಸ್ವಾತಂತ್ರ್ಯವನ್ನು ತಂದು ಕೊಟ್ಟಿದ್ದಾರೆ. ಅಂತಹ ಸ್ವಾತಂತ್ರ್ಯಕ್ಕೆ ನೈಜ ಅರ್ಥ ಬರಬೇಕಾದರೆ ಬಡತನ, ಅನಕ್ಷರತೆ ಹಾಗೂ ಅಸಮಾನತೆಗೆ ಮುಕ್ತಿ ದೊರೆಯಬೇಕು. ನಮ್ಮ ಸ್ವಾತಂತ್ರ್ಯದ ಕನಸನ್ನು ನನಸಾಗುವಂತೆ ಮಾಡಿದ ಮಹಾನ್ ಯೋಧರನ್ನು ನೆನೆಸುತ್ತ, ಅವರ ಆದರ್ಶಗಳನ್ನು ಪರಿ ಪಾಲಿಸುವದು ನಮ್ಮ ಕರ್ತವ್ಯವಾಗಬೇಕೆಂದು ಅಭಿಪ್ರಾಯ ಪಟ್ಟರು.
ವೇದಿಕೆಯಲ್ಲಿ ತಾ.ಪಂ. ಸದಸ್ಯೆ ಸಬಿತಾ ಚನ್ನಕೇಶವ, ಪಟ್ಟಣ ಪಂಚಾಯಿತಿ ಅಧ್ಯಕ್ಷೆ ವಿಜಯಲಕ್ಷ್ಮೀ ಸುರೇಶ್, ಚೌಡ್ಲು ಗ್ರಾಮ ಪಂಚಾಯಿತಿ ಅಧ್ಯಕ್ಷೆ ವನಜ, ತಾಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಪಿ. ಚಂದ್ರಶೇಖರ್, ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಸದಸ್ಯರು, ತಾಲೂಕು ಮಟ್ಟದ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
ಇದೇ ಸಂದರ್ಭ ನಿವೃತ್ತ ಸೈನಿಕರಾದ ಜಾನ್ ವಿಲಿಯಮ್, ಹೆಮ್ಮನೆ ಗ್ರಾಮದ ಅಂಧ ಕಲಾವಿದರಾದ ರುದ್ರಪ್ಪ ಹೆಮ್ಮಾನೆ, ನಿವೃತ್ತರಾಗಲಿರುವ ತಹಶೀಲ್ದಾರ್ ಬಿ.ಸಿ. ಶಿವಪ್ಪ ಅವರುಗಳನ್ನು ರಾಷ್ಟ್ರೀಯ ಹಬ್ಬಗಳ ಸಮಿತಿ ವತಿಯಿಂದ ಸನ್ಮಾನಿಸಲಾಯಿತು.
ಕಾರ್ಯಕ್ರಮಕ್ಕೆ ಮುನ್ನ ಪೊಲೀಸ್, ಹೋಂ ಗಾಡ್ರ್ಸ್, ಎನ್.ಸಿ.ಸಿ, ಸ್ಕೌಟ್ಸ್ ಗೈಡ್ಸ್ ಮತ್ತು ಬುಲ್‍ಬುಲ್ ವೃಂದದವರಿಂದ ಗೌರವ ರಕ್ಷೆ ನೀಡಲಾಯಿತು. ವಿವಿಧ ಶಾಲಾ ಮಕ್ಕಳಿಂದ ದೇಶಭಕ್ತಿ ಗೀತೆ ಗಾಯನ ಕಾರ್ಯಕ್ರಮ ನಡೆಯಿತು. ಕ್ಷೇತ್ರ ಶಿಕ್ಷಣಾಧಿಕಾರಿ ಮಲ್ಲೇಸ್ವಾಮಿ ಸ್ವಾಗತಿಸಿ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ನಾಚಪ್ಪ ವಂದಿಸಿದರೆ, ಉಪನ್ಯಾಸಕಿ ಎಂ.ಬಿ.ತಿಲೋತ್ತಮೆ ಕಾರ್ಯಕ್ರಮ ನಿರೂಪಿಸಿದರು.