ಸುಂಟಿಕೊಪ್ಪ, ಜ. 3: ಇಲ್ಲಿಗೆ ಸಮೀಪದ ಬೋಯಿಕೇರಿಯಲ್ಲಿ ಮಂಗಳೂರು ವಿಶ್ವವಿದ್ಯಾನಿಲಯ ರಾಷ್ಟ್ರೀಯ ಸೇವಾ ಯೋಜನೆ, ಮಡಿಕೇರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವತಿಯಿಂದ ಆಯೋಜಿಸಿರುವ ವಾರ್ಷಿಕ ಎನ್‍ಎಸ್‍ಎಸ್ ಶಿಬಿರದ ಅಂಗವಾಗಿ ಇಬ್ನಿವಳವಾಡಿಯ ಪಾರಂಪರಿಕ ಐತಿಹಾಸಿಕತೆಯುಳ್ಳ ಭದ್ರಕಾಳಿ ದೇವಸ್ಥಾನದ ಆವರಣದಲ್ಲಿ ಶಿಬಿರಾರ್ಥಿಗಳು ಸ್ವಚ್ಛತಾ ಕಾರ್ಯವನ್ನು ಕೈಗೊಂಡರು. ಸುಮಾರು 40 ಮಂದಿ ಶಿಬಿರಾರ್ಥಿಗಳು ದೇವಾಲಯದ ಸುತ್ತ ಬೆಳೆದು ನಿಂತಿದ್ದ ಗಿಡಗಂಟಿಗಳನ್ನು ಕಡಿದು ಹಾಕಿದ್ದಲ್ಲದೇ ಅಲ್ಲಿದ್ದ ಕಸ ಕಡ್ಡಿಗಳನ್ನು ತೆಗೆದು ಸ್ವಚ್ಛಗೊಳಿಸಿದರು. ದೇವಾಲಯ ಸಮಿತಿಯ ಕಾರ್ಯದರ್ಶಿ ನಂದಿನೆರವಂಡ ದಿನೇಶ್, ಸಮಿತಿಯ ಅಧ್ಯಕ್ಷರು, ಪದಾಧಿಕಾರಿಗಳು, ಶಿಬಿರಾಧಿಕಾರಿ ಬಿ.ಆರ್. ಶಶಿಧರ್, ಸಹಾಯಕ ಶಿಬಿರಾಧಿಕಾರಿಗಳಾದ ಸುರೇಶ್, ಮೋಹನ್, ಎನ್‍ಎಸ್‍ಎಸ್ ಘಟಕದ ವಿದ್ಯಾರ್ಥಿ ನಾಯಕರುಗಳಾದ ಪುನೀತ್ ಪ್ರಸಾದ್ ಮತ್ತು ಧರಣಿ ಇದ್ದರು.