ನಾಪೋಕ್ಲು, ನ. 26: ಅನ್ನದಾತ ಬೆಳೆದ ಬೆಳೆಯನ್ನು ಜತನದಿಂದ ಕಾಪಾಡಿ, ಮಾರಾಟವಾಗಿ ಹಣ ಕೈಸೇರುವದರೊಳಗೆ ಒಂದಲ್ಲ ಒಂದು ಸಮಸ್ಯೆ ಎದುರಿಸಬೇಕಾಗುತ್ತದೆ. ಇದೀಗ ಹುಲುಸಾಗಿ ಬೆಳೆದ ಭತ್ತದ ಬೆಳೆಗಳಿಗೆ ಕಾಡು ಹಂದಿಗಳ ಉಪಟಳ ದಿಂದ ಭಾರೀ ನಷ್ಟ ಸಂಭವಿಸಿದೆ.

ಕೊಡಗಿನಲ್ಲಿ ಭತ್ತದ ಬೇಸಾಯ ನಿರಂತರ ಸಮಸ್ಯೆಯನ್ನು ಎದುರಿಸುತ್ತಿದ್ದು, ಹತ್ತು-ಹಲವು ಸಮಸ್ಯೆಗಳ ನಡುವೆ ಬೇಸಾಯ ಮಾಡುತ್ತಿದ್ದಾರೆ. ಪಾಲೂರು ಗ್ರಾಮದಲ್ಲಿ ರೈತರು ಬೆಳೆಯಲಾದ ಭತ್ತದ ಗದ್ದೆಗಳು ಸಮಸ್ಯೆಗಳ ಸುಳಿಗೆ ಸಿಲುಕಿವೆ. ಭತ್ತದ ಪೈರುಗಳು ಹುಲುಸಾಗಿ ಬೆಳೆದು ಕಟಾವಿಗೆ ಬಂದು ಕೊಯ್ಲು ಪ್ರಾರಂಭವಾಗುವ ಸಂದರ್ಭದಲ್ಲಿ ಭತ್ತ ಕೈಸೇರುವ ಮೊದಲೇ ಕಾಡು ಹಂದಿಗಳ ಉಪಟಳ ಆರಂಭವಾಗಿದೆ. ಕಾಡು ಹಂದಿಗಳು ಭತ್ತದ ಪೈರುಗಳಿಗೆ ಧಾಳಿ ಮಾಡಿ ಭತ್ತದ ತೆನೆಗಳನ್ನು ತಿಂದು ಹುಲ್ಲು ಮಾತ್ರ ರೈತನ ಪಾಲಾಗುವ ಹಂತಕ್ಕೆ ಬಂದಿದೆ. ಇದರಿಂದಾಗಿ ರೈತರು ಬೇಗನೆ ಭತ್ತದ ಕಟಾವಿಗೆ ಮುಂದಾಗಿದ್ದಾರೆ. ಮಾತ್ರವಲ್ಲ ಗದ್ದೆಯ ಏರಿಗಳನ್ನು ಹಾಗೂ ಬಂಜರು ಬಿದ್ದ ಭೂಮಿಗಳನ್ನು ಕಾಡು ಹಂದಿಗಳು ಧ್ವಂಸ ಮಾಡಿವೆ. ಒಂದೆಡೆ ಪೈರು ನಾಶವಾದರೆ ಮತ್ತೊಂದೆಡೆ ಹೊಲ ಗುಂಡಿ ಬಿದ್ದು ಸಮಸ್ಯೆಗಳು ಕಾಡುತ್ತಿವೆ. ಒಂದೆಡೆ ಮಳೆಯ ಕೊರತೆಯಿಂದ ಭತ್ತದ ಗದ್ದೆಗಳು ಒಣಗಿ ಹೋಗುತ್ತಿದ್ದರೆ ಇತ್ತ ಕಾಡು ಹಂದಿಗಳ ಉಪಟಳದಿಂದ ರೈತರು ಚಿಂತೆಯಲ್ಲಿ ದಿನದೂಡು ವಂತಾಗಿದೆ. ಸಂಬಂಧಿಸಿದ ಇಲಾಖೆ ಸೂಕ್ತ ಪರಿಹಾರ ನೀಡಿದರೆ ಮಾತ್ರ ಬೆಳೆಗಾರರು ಚೇತರಿಸಲು ಸಾಧ್ಯ ಎನ್ನುವಂತಾಗಿದೆ.

- ದುಗ್ಗಳ ಸದಾನಂದ