ಗೋಣಿಕೊಪ್ಪಲು, ಅ. 10: ಮಳೆ ಕೊರತೆ ನಡೆವೆಯೂ ಕಷ್ಟಪಟ್ಟು ಭತ್ತದ ಕೃಷಿ ಮಾಡಿರುವ ರೈತರ ಬತ್ತದ ಗದ್ದೆಗಳ ಮೇಲೆ ನಿರಂತರ ವಾಗಿರುವ ಕಾಡಾನೆ ಧಾಳಿ ಬೆಂದಗಾಯದ ಮೇಲೆ ಬರೆ ಎಳೆದಂತಾಗಿದೆ.

ನಾಗರಹೊಳೆ, ಬ್ರಹ್ಮಗಿರಿ ಪರ್ವತ ಶ್ರೇಣಿ, ದುಬಾರೆ ಅರಣ್ಯ ಪ್ರದೇಶದ ಅಂಚಿನಲ್ಲಿರುವ ಭತ್ತದ ಗದ್ದೆಗಳ ಮೇಲೆ ಆನೆ ಹಾವಳಿ ಅತಿಯಾಗಿದೆ. ಭತ್ತದ ಗದ್ದೆಗಳಿಗೆ ಧಾಳಿ ಮಾಡುತ್ತಿರುವ ಕಾಡಾನೆ ಫಸಲನ್ನು ತುಳಿದು ತಿಂದು ನಾಶ ಪಡಿಸುತ್ತಿವೆ.

ತಿತಿಮತಿ ಸಮೀಪದ ದೇವರಪುರ ಗ್ರಾಮದ ರೈತ ರಾಜ್‍ಕುಮಾರ್ ಅವರ ಬತ್ತದ ಗದ್ದೆಗೆ ಧಾಳಿ ಮಾಡಿರುವ ಕಾಡಾನೆ ಬೆಳೆದ ಭತ್ತದ ಪೈರನ್ನು ತುಳಿದು ಹಾಕಿವೆ. ತಿತಿಮತಿ ಭಾಗಕ್ಕೆ ಈ ಬಾರಿ 15 ಇಂಚೂ ಮಳೆಯಾಗಿಲ್ಲ. ಇಂತಹದರ ನಡುವೆ ಇಲ್ಲಿನ ಕೃಷಿಕರು ಹೇಗೋ ತೊರೆ-ತೋಡುಗಳ ನೀರು ಹಾಯಿಸಿಕೊಂಡು ಭತ್ತದ ನಾಟಿ ಮಾಡಿದ್ದರು. ನೀರಿನ ಕೊರತೆಯ ನಡುವೆಯೂ ಭತ್ತ ಸಮೃದ್ಧಿಯಾಗಿ ಬೆಳೆದಿತ್ತು. ಇರುವ ಭತ್ತವಾದರೂ ಅಲ್ಪಸ್ವಲ್ಪವಾದರೂ ಕೈ ಸೇರಲಿದೆ ಅನ್ನುಷ್ಟರಲ್ಲಿ ಕಾಡಾನೆ ತಿಂದು ಮುಗಿಸಿವೆ ಎಂದು ರಾಜ್‍ಕುಮಾರ್ ತಮ್ಮ ಅಳಲು ತೋಡಿಕೊಂಡರು.

ಕಾಡಾನೆಗಳು ಗದ್ದೆಗೆ ಬಂದರೂ ಭತ್ತವನ್ನು ತುಳಿದು ಹಾಕುತ್ತಿದ್ದವು ಹೊರತು ಭತ್ತದ ಪೈರನ್ನು ತಿನ್ನುತ್ತಿರಲಿಲ್ಲ. ಆದರೆ ಈಗ ಭತ್ತವನ್ನು ಬುಡ ಸಮೇತ ತಿನ್ನುತ್ತಿವೆ. ಇದಕ್ಕೆ ಕಾಡಾನೆಗಳಿಗೆ ಕಾಡಿನಲ್ಲಿರುವ ಮೇವಿನ ಕೊರತೆ. ಇದನ್ನು ನೀಗಿಸುವದಕ್ಕೆ ಅರಣ್ಯ ಇಲಾಖೆ ಯಾವದೇ ಕ್ರಮ ತೆಗೆದುಕೊಳ್ಳುತ್ತಿಲ್ಲ ಎಂದು ಅವರು ದೂರಿದರು.

- ಎನ್.ಎನ್. ದಿನೇಶ್