ಮಡಿಕೇರಿ, ಜ. 16: ಸರಕಾರ ನಿಗದಿ ಮಾಡಿದ ಭತ್ತದ ಬೆಂಬಲ ಬೆಲೆ ರೂ. 1550 ಆಗಿದ್ದು, ಖಾಸಗಿಯವರು ಪ್ರಸ್ತುತ ರೂ. 1750 ಬೆಲೆ ನೀಡುತ್ತಿದ್ದಾರೆ. ಭತ್ತದ ಕೃಷಿಕರಿಗೆ ಬಹಳಷ್ಟು ಖರ್ಚುಗಳು ಬರುತ್ತಿದ್ದು, ಇವರಿಗೆ ಸರಕಾರ ನಿಗದಿಪಡಿಸಿದ ಮೊತ್ತ ಏನೇನು ಸಾಲುತ್ತಿಲ್ಲ. ಭತ್ತಕ್ಕೆ ಬೆಂಬಲ ಬೆಲೆಯನ್ನು ರೂ. 2000ಕ್ಕೆ ಹೆಚ್ಚಿಸಲು ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ಜಿ.ಪಂ. ಅಧ್ಯಕ್ಷ ಬಿ.ಎ. ಹರೀಶ್ ಜಿಲ್ಲಾಧಿಕಾರಿಗಳಿಗೆ ಪತ್ರದ ಮುಖೇನ ಕೋರಿದ್ದಾರೆ.
ಹೊರ ರಾಜ್ಯಕ್ಕೆ ಹುಲ್ಲು ಸಾಗಾಣಿಕೆ ನಿರ್ಬಂಧಿಸಿರುವದರಿಂದ ಇಲ್ಲಿನ ರೈತರಿಗೆ ಅನ್ಯಾಯವಾಗುತ್ತಿದೆ. ನೆರೆ ರಾಜ್ಯ ಕೇರಳದಲ್ಲಿ ಕಂತೆ ಒಂದಕ್ಕೆ ರೂ. 30 ಸಿಗುತ್ತಿದ್ದು, ನಮ್ಮಲ್ಲಿ ಕೇವಲ ರೂ. 12 ಸಿಗುತ್ತಿದೆ. ಒಂದು ಕಂತೆ ಕಟ್ಟಲು ರೂ. 2ನ್ನು ನೀಡಬೇಕಾಗಿದ್ದು, ರೈತರಿಗೆ ಜೀವನ ನಡೆಸಲು ಕಷ್ಟವಾಗುತ್ತಿದೆ. ಭತ್ತದ ಬೆಳೆಯಲ್ಲಿ ಯಾವದೇ ಲಾಭಾಂಶ ಬಾರದೆ ಇರುವದರಿಂದ ಈಗಾಗಲೇ ಹಲವು ರೈತರು ಭತ್ತದ ಕೃಷಿಯನ್ನು ಬಿಟ್ಟಿರುತ್ತಾರೆ. ಇದೇ ರೀತಿ ಮುಂದುವರೆದರೆ ಮುಂದಿನ ದಿನಗಳಲ್ಲಿ ಭತ್ತವನ್ನು ವ್ಯವಸಾಯ ಮಾಡುವವರು ಇಲ್ಲದಂತಾಗುತ್ತಾರೆ. ಬೆಳೆಗಾರರ ಕಷ್ಟಗಳನ್ನು ಗಣನೆಗೆ ತೆಗೆದುಕೊಂಡು ಹೊರ ರಾಜ್ಯಕ್ಕೆ ಹುಲ್ಲು ಸಾಗಾಣಿಕೆಗೆ ಅನುಮತಿ ನೀಡಬೇಕಾಗಿ ಅಧ್ಯಕ್ಷರÀು ಕೋರಿದ್ದಾರೆ.