ಶನಿವಾರಸಂತೆ, ಆ. 11: ಕೊಡ್ಲಿಪೇಟೆಯ ಅಂಬೇಡ್ಕರ್ ಭವನದಲ್ಲಿ ಇತ್ತೀಚೆಗೆ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶ ಸೋಮವಾರಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಎಂ. ಲೋಕೇಶ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಕಾಂಗ್ರೆಸ್ ಕಾರ್ಯಕರ್ತರು ಪ್ರಾಮಾಣಿಕವಾಗಿ ಕೆಲಸ ಮಾಡಬೇಕು. ಪಕ್ಷದಲ್ಲಿ ಯಾವದೇ ರೀತಿಯ ಸಮಸ್ಯೆಗಳಿದ್ದರೂ ಅಂತಹ ಪರಿಸ್ಥಿತಿಯನ್ನು ಪರಿಹರಿಸಿಕೊಂಡು ಹೋಗುವ ಶಿಸ್ತಿನ ಪಕ್ಷ ಕಾಂಗ್ರೆಸ್ ಪಕ್ಷ. ಮುಂದಿನ ಚುನಾವಣೆಯಲ್ಲಿ ಎಲ್ಲರೂ ಒಗ್ಗೂಡಿ ಎರಡು ಸ್ಥಾನಗಳನ್ನೂ ಕಾಂಗ್ರೆಸ್ ಪಕ್ಷ ಪಡೆದುಕೊಳ್ಳಬೇಕು ಎಂದು ಲೋಕೇಶ್ ಹೇಳಿದರು.
ತಾಲೂಕು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಎಸ್.ಎಂ. ಚಂಗಪ್ಪ ಮಾತನಾಡಿ, ಕೊಡಗಿನಲ್ಲಿ ಕಾಂಗ್ರೆಸ್ ಪಕ್ಷ ಬಲಿಷ್ಠವಾಗಿದೆ. ಕಳೆದ ಎಂ.ಎಲ್.ಸಿ. ಚುನಾವಣೆಯಲ್ಲಿ ಕೆಲವೇ ಅಂತರದಿಂದ ಕಾಂಗ್ರೆಸ್ ಅಭ್ಯರ್ಥಿ ಚಂದ್ರಮೌಳಿ ಸೋಲಬೇಕಾಯಿತು. ಸಚಿವ ಜಾರ್ಜ್ ಯಾವದೇ ತಪ್ಪು ಮಾಡಿಲ್ಲ. ಆದರೂ ಅವರ ಪರವಾಗಿ ಕಾಂಗ್ರೆಸ್ ಒಂದೂ ಹೇಳಿಕೆ ಕೊಡಲಿಲ್ಲ. ಈ ಬಾರಿ ಯುವಶಕ್ತಿಗೆ ಹೆಚ್ಚು ಜವಾಬ್ದಾರಿ ಕೊಡುವ ಉದ್ದೇಶದಿಂದ ಇಂದಿನ ಕಾರ್ಯಕರ್ತರ ಸಭೆ ಕರೆಯಲಾಗಿದೆ ಎಂದರು. ತಾಲೂಕು ಪಂಚಾಯಿತಿ ಸದಸ್ಯ ಬಿ.ಎಸ್. ಅನಂತಕುಮಾರ್ ಮಾತನಾಡಿ, ಪಕ್ಷ ಸಂಘಟನೆಗೆ ಒತ್ತು ಕೊಡಬೇಕು. ಮುಂದೆ ಎರಡು ಶಾಸಕ ಸ್ಥಾನ ಗೆಲ್ಲುವ ಸಾಧ್ಯತೆ ಇದೆ ಎಂದರು.
ಬಿ.ಕೆ. ಚಿಣ್ಣಪ್ಪ ಮಾತನಾಡಿ, ಕಾಂಗ್ರೆಸಿಗೆ ಅದರದ್ದೇ ಆದ ಇತಿಹಾಸವಿದೆ. ಕಾಂಗ್ರೆಸ್ ಪಕ್ಷದ ಹಿರಿಯರ ಅಭಿಪ್ರಾಯ ಪಡೆದು ಪಕ್ಷ ಬೆಳೆಸಬೇಕೆಂದರು. ವಿ.ಪಿ. ಶಶಿಧರ್ ಮಾತನಾಡಿ, ಭಾಷಾತೀತವಾಗಿ ಆಡಳಿತ ನಡೆಸುವ ಶಕ್ತಿ ಕಾಂಗ್ರೆಸ್ ಪಕ್ಷಕ್ಕಿದೆಯೇ ಹೊರತು ಬಿ.ಜೆ.ಪಿ. ಗಿಲ್ಲ ಎಂದರು.
ಯಾಕೂಬ್ ಮಾತನಾಡಿ, ಕಾಂಗ್ರೆಸ್ ಈ ದೇಶದ ಎಲ್ಲಾ ಸಮಗ್ರ ಜನ ಸಮುದಾಯದ ಪಕ್ಷವಾಗಿ ಕೆಲಸ ಮಾಡುತ್ತಿದೆ ಎಂದರು. ಜಿಲ್ಲಾ ಕಾಂಗ್ರೆಸ್ ಪಕ್ಷದ ವಕ್ತಾರ ಮಂಜುನಾಥ್ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಅವರು ಅಧಿಕಾರಕ್ಕೆ ಬಂದ ಬಳಿಕ ವಿದೇಶದಲ್ಲೇ ಹೆಚ್ಚು ಕಾಲ ಕಳೆಯುತ್ತಿದ್ದಾರೆ. ಕಾಂಗ್ರೆಸ್ ಅನ್ನು ರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೆ ತರಲು ಪಕ್ಷ ಸಜ್ಜಾಗಬೇಕು ಎಂದರು.
ಇದೇ ಸಂದರ್ಭ ಕಾಂಗ್ರೆಸ್ ಪಕ್ಷದಿಂದ ಜಯಶೀಲರಾದ ತಾ.ಪಂ., ಜಿ.ಪಂ. ಹಾಗೂ ಗ್ರಾ.ಪಂ. ಅಭ್ಯರ್ಥಿಗಳನ್ನು ಸನ್ಮಾನಿಸಲಾಯಿತು. ಸಭೆಯಲ್ಲಿ ನಿರ್ಮಲ, ಪಾರ್ವತಿ, ಅಬ್ಬಾಸ್, ಫಿಲೋಮಿನ ಉಪಸ್ಥಿತರಿದ್ದರು. ಹೋಬಳಿ ಕಾಂಗ್ರೆಸ್ ಅಧ್ಯಕ್ಷ ಔರಂಗಜೇಬ್ ಸ್ವಾಗತಿಸಿ, ಬ್ಯಾಡಗೊಟ್ಟ ಪಂಚಾಯಿತಿ ವ್ಯಾಪ್ತಿಯ ಕಾಂಗ್ರೆಸ್ ಅಧ್ಯಕ್ಷ ಮಹಮದ್ ಹನೀಫ್ ವಂದಿಸಿದರು.