ಮಡಿಕೇರಿ, ಅ. 27: ಬಿಸಿಎಂ ಇಲಾಖೆಯ ವಸತಿ ಶಾಲೆ ಮತ್ತು ವಸತಿ ನಿಲಯಗಳಲ್ಲಿನ ಡಿ ಗ್ರೂಪ್ ಹುದ್ದೆಗಳಿಗೆ ನೇರ ನೇಮಕಾತಿಯ ಮೂಲಕ ಭರ್ತಿ ಮಾಡಲು ಮುಂದಾಗಿರುವ ಸರ್ಕಾರದ ಕ್ರಮವನ್ನು ವಿರೋಧಿಸಿ ಕರ್ನಾಟಕ ರಾಜ್ಯ ಶಾಲೆ ಮತ್ತು ವಸತಿ ನಿಲಯಗಳ ಬೋಧಕೇತರ ಸಿಬ್ಬಂದಿಗಳ ಒಕ್ಕೂಟದ ವತಿಯಿಂದ ಜಿಲ್ಲಾಡಳಿತ ಭವನದ ಎದುರು ಪ್ರತಿಭಟನೆ ನಡೆಸಿ ಜಿಲ್ಲಾಡಳಿತದ ಮೂಲಕ ಮನವಿ ಸಲ್ಲಿಸಲಾಯಿತು.
ಸಮಾಜ ಕಲ್ಯಾಣ ಇಲಾಖೆಯ ವಸತಿ ನಿಲಯಗಳಲ್ಲಿ ಕೆಲಸಗಾರರನ್ನು ತೆಗೆದುಕೊಳ್ಳುವಾಗ ಯಾವದೇ ವಿದ್ಯಾಭ್ಯಾಸವನ್ನು ಕಡ್ಡಾಯಗೊಳಿಸದೇ ಸರ್ಕಾರ ದುಡಿಸಿಕೊಳ್ಳುತ್ತಿದೆ. ಆದರೆ ಈಗ ನೇರ ನೇಮಕಾತಿ ಹೆಸರಿನಲ್ಲಿ ಎಲ್ಲಾ ಕಾರ್ಮಿಕರನ್ನು ಮನೆಗೆ ಕಳುಹಿಸುವ ಹುನ್ನಾರ ನಡೆದಿದೆ. ನೇರ ನೇಮಕಾತಿಯಿಂದ ಈಗಾಗಲೇ 10-15 ವರ್ಷಗಳಿಂದ ಕೆಲಸ ಮಾಡಿಕೊಂಡು ಬಂದಿರುವ ಕೆಲಸಗಾರರು ಹಾಗೂ ಅವರ ಕುಟುಂಬದವರು ಬೀದಿ ಪಾಲಾಗುತ್ತಾರೆ.
ನೇರ ನೇಮಕಾತಿಯಿಂದ ಸರ್ಕಾರದ ಖಜಾನೆಗೆ ಹೊರೆಯಾಗುತ್ತದೆ. ದಿನಗೂಲಿ ಕೆಲಸದವರಿಗಿಂತ ನೇರ ನೇಮಕಾತಿ ಮಾಡಿದ ಕೆಲಸಗಾರರಿಗೆ ದುಪ್ಪಟ್ಟು ಸಂಬಳ ಕೊಡಬೇಕಾಗುತ್ತದೆ.
ನೇರನೇಮಕಾತಿಯ ಪ್ರಕ್ರಿಯೆಯಲ್ಲಿ ಬಹಳಷ್ಟು ಅಕ್ರಮ ನಡೆಯುತ್ತಿರುವ ಸಾಧ್ಯತೆಗಳಿವೆ. ಈಗಿನ ಎಲ್ಲಾ ಕೆಲಸಗಾರರನ್ನು ಕರ್ನಾಟಕ ಡೈಲಿವೇಜಸ್ ಎಂಪ್ಲಾಯಿಸ್ ವೆಲ್‍ಫೇರ್ ಆಕ್ಟ್ -2012ರ ಅಡಿಯಲ್ಲಿ ಖಾಯಂ ಮಾಡುವದರಿಂದ ಸರ್ಕಾರಕ್ಕೆ ಕಾನೂನಿನ ಯಾವದೇ ತೊಡಕು ಬರುವದಿಲ್ಲ ಹಾಗೂ ಹಾಲಿ ಕೆಲಸ ಮಾಡುತ್ತಿರುವವರಿಗೆ ಬದುಕು ಕಟ್ಟಿಕೊಟ್ಟಂತಾಗುತ್ತದೆ. ಕಾರ್ಮಿಕರು ಸರ್ಕಾರಕ್ಕೆ ಋಣಿಯಾಗಿರುತ್ತಾರೆ ಎಂದು ಮನವಿಯಲ್ಲಿ ಆಗ್ರಹಿಸಲಾಗಿದ್ದು, ಈ ಬಗ್ಗೆ ಸಂಬಂಧಪಟ್ಟ ಸಚಿವರೊಂದಿಗೆ ಚರ್ಚಿಸಿ ಮನವಿ ಮಾಡಿದರೂ ಯಾವದೇ ಪ್ರಯೋಜನವಾಗಿಲ್ಲ ಹಾಗಾಗಿ ಕೆಲಸಗಾರರು ಚಳವಳಿ ಹಾದಿಯನ್ನು ಹಿಡಿಯುವದು ಅನಿವಾರ್ಯವಾಗುತ್ತದೆ. ಈ ಹಿನ್ನೆಲೆಯಲ್ಲಿ ತಾ. 19ರಿಂದ ಅನಿರ್ದಿಷ್ಟ ಆಹೋರಾತ್ರಿ ಚಳವಳಿಯನ್ನು ಬೆಂಗಳೂರಿನಲ್ಲಿ ಹಮ್ಮಿಕೊಳ್ಳಲಾಗಿದೆ. ಚಳವಳಿ ಈಗ ಎಲ್ಲಾ ಜಿಲ್ಲೆಗಳಿಗೂ ವಿಸ್ತರಿಸಲಾಗಿದೆ. ನ. 7ರಂದು ಸಮಾಜ ಕಲ್ಯಾಣ ಇಲಾಖೆಯ ಸಚಿವರ ತವರು ಜಿಲ್ಲೆಯಲ್ಲಿ ಧರಣಿ ನಡೆಸಲಾಗುವದು. ಆದರೂ ಸರ್ಕಾರದಿಂದ ಯಾವದೇ ಪ್ರಕ್ರಿಯೆ ಬಾರದಿದ್ದಲ್ಲಿ ನ. 8ರಿಂದ ಅನಿರ್ದಿಷ್ಟ ಅವಧಿ ಎಲ್ಲಾ ಕಾರ್ಮಿಕರು ಆಯಾಯ ತಾಲೂಕು ಕಚೇರಿ ಮುಂದೆ ಧರಣಿ ನಡೆಸಲಾಗುವದು ಎಂದು ಪ್ರತಿಭಟನಾಕಾರರು ಮನವಿಯಲ್ಲಿ ಆಗ್ರಹಿಸಿದ್ದಾರೆ. ಈ ಸಂದರ್ಭ ಒಕ್ಕೂಟದ ರಾಜ್ಯ ಅಧ್ಯಕ್ಷೆ ರಾಧ ಸುಂದರೇಶ್, ಜಿಲ್ಲಾಧ್ಯಕ್ಷ ಹರೀಶ್, ಪ್ರಧಾನ ಕಾರ್ಯದರ್ಶಿ ಪ್ರಶಾಂತ್, ಉಪಾಧ್ಯಕ್ಷ ಯೋಗೇಶ್, ಜಯಶೀಲ, ಸಂಘಟನಾ ಕಾರ್ಯದರ್ಶಿ ರವಿ ಹಾಗೂ ಇನ್ನಿತರರು ಇದ್ದರು.