ಸೋಮವಾರಪೇಟೆ, ಜು. 21: ಚಿತ್ರದುರ್ಗದ ಬೃಹನ್ಮಠದ ವತಿಯಿಂದ ಪೀಠಾಧ್ಯಕ್ಷರಾದ ಶ್ರೀ ಶಿವಮೂರ್ತಿ ಮುರುಘಾ ಶರಣರ ಮಾರ್ಗದರ್ಶನದಲ್ಲಿ ನಾಲ್ಕು ದಿನಗಳ ಕಾಲ ನಡೆದ ಧಾರ್ಮಿಕ ಮತ್ತು ಪರಮಾರ್ಥ ಜಿಜ್ಞಾಸುಗಳಿಗೆ ಆಯೋಜಿಸಿದ್ದ ಚಿಂತನಾ ಕಾರ್ಯಾಗಾರಕ್ಕೆ ತೆರೆಬಿದ್ದಿತು.

ಕೊಡಗು ಜಿಲ್ಲೆ ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ 100ಕ್ಕೂ ಅಧಿಕ ಸ್ವಾಮೀಜಿಗಳು, ಈ ನಾಲ್ಕು ದಿನಗಳ ಕಾಲ ಆಧ್ಯಾತ್ಮಿಕ ಚಿಂತನಾ ಕಾರ್ಯಾಗಾರದಲ್ಲಿ ಭಾಗವಹಿಸಿ ಧ್ಯಾನ, ಜ್ಞಾನದ ಹೊಸ ಅನುಭೂತಿ ಪಡೆದುಕೊಂಡರು.

ಕೊಡಗಿನ ಪರಿಸರ ಮತ್ತು ಹವಾಮಾನ ಎರಡೂ ಆಹ್ಲಾದಕರವಾಗಿದೆ. ಇಂತಹ ಪರಿಸರದ ನಡುವೆ ಒಂದಷ್ಟು ಉತ್ತಮ ಆಲೋಚನೆಗಳು, ಸಕಾರಾತ್ಮಕ ಚಿಂತನೆಗಳು ಬರುತ್ತವೆ. ಹೀಗಾಗಿ ಕೊಡಗಿನಲ್ಲಿರುವ ಬೇಳೂರು ಮಠವನ್ನು ಕಾರ್ಯಾಗಾರಕ್ಕಾಗಿ ಆಯ್ಕೆ ಮಾಡಲಾಯಿತು. ಕಾರ್ಯಾಗಾರಕ್ಕೆ ರಾಜ್ಯಾದ್ಯಂತ ಆಗಮಿಸಿದ್ದ ವಿವಿಧ ಮಠಗಳ ನೂರಕ್ಕು ಅಧಿಕ ಮಠಾಧೀಶರಿಗೆ ಧ್ಯಾನ, ಪರಸ್ಪರ ಸಂವಾದ, ಜ್ಞಾನೋಪದೇಶ, ವ್ಯಕ್ತಿತ್ವ ನಿರ್ಮಾಣದ ಕುರಿತು ಜಾಗೃತಿ ಮೂಡಿಸಲಾಯಿತು ಎಂದು ಮುರುಘಾ ಶರಣರು ತಿಳಿಸಿದರು.

ಚಿಂತನಾಗೋಷ್ಠಿಯಲ್ಲಿ ಬಹುತೇಕ ಬೇರೆ ಬೇರೆ ಸಮುದಾಯದ ಹಾಗು ಶೋಷಿತ ಜನಾಂಗಗಳ ಸ್ವಾಮೀಜಿಗಳು ಕೂಡ ಭಾಗವಹಿಸಿದ್ದರು. ಬಹುತೇಕ ಮಠಾಧೀಶರಿಗೆ ಕಳೆದ ಮೂರು ದಿನಗಳು ನಡೆದ ಕಾರ್ಯಾಗಾರದಿಂದ ಒಂದಷ್ಟು ಸಮಾಧಾನ ತಂದಿದೆ. ಮುಂದಿನ ದಿನಗಳಲ್ಲಿ ಇದೇ ರೀತಿಯ ಕಾರ್ಯಾಗಾರಗಳನ್ನು ಆಯೋಜಿಸಲಾಗುವದು ಎಂದು ತಿಳಿಸಿದರು.

ತಾವು ವರ್ಷದಲ್ಲಿ ಹಲವು ಬಾರಿ ಸಾಹಿತ್ಯ ರಚನೆ, ಗ್ರಂಥಾವಲೋಕನಕ್ಕಾಗಿ ಇಲ್ಲಿನ ಬೇಳೂರು ಮಠಕ್ಕೆ ಬರುತ್ತಿದ್ದೇನೆ. ಇಲ್ಲಿನ ಪರಿಸರವೇ ಒಂದು ಧ್ಯಾನಕೇಂದ್ರವಾಗಿದ್ದು, ಸಾಹಿತಿಗಳಿಗೆ ಹಾಗು ಕೃತಿ ರಚನೆಕಾರರಿಗೆ ಹೇಳಿ ಮಾಡಿಸಿದ ಸ್ಥಳವಾಗಿದೆ ಎಂದು ಕೊಡಗಿನ ಕುರಿತು ಪ್ರಶಂಸೆ ವ್ಯಕ್ತಪಡಿಸಿದರು.

ಇತ್ತೀಚೆಗೆ ಕೊಡಗಿಗೆ ದೇಶಾದ್ಯಂತ ಪ್ರವಾಸಿಗರು ಯಥೇಚ್ಛವಾಗಿ ಆಗಮಿಸುತ್ತಿದ್ದಾರೆ. ಆದರೆ ಪ್ಲಾಸ್ಟಿಕ್ ಸೇರಿದಂತೆ ಹಲವು ತ್ಯಾಜ್ಯ ವಸ್ತುಗಳನ್ನು ಅಲ್ಲಲ್ಲೇ ಬಿಸಾಡುವ ಮೂಲಕ ಸುಂದರವಾದ ಪರಿಸರವನ್ನು ಹಾಳು ಮಾಡುತ್ತಿರುವದು ಬೇಸರದ ಸಂಗತಿ. ಸ್ಥಳೀಯರೂ ಕೂಡ ಈ ಕುರಿತು ಗಮನಹರಿಸಬೇಕು ಎಂದ ಮುರುಘಾ ಶರಣರು, ಸ್ಥಳೀಯ ಆಡಳಿತ ಪರಿಸರವನ್ನು ಹಾಳು ಮಾಡುತ್ತಿರುವವರ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.

ಮೂರು ದಿನಗಳ ಕಾಲ ನಡೆದ ಶಿಬಿರವನ್ನು ಮುರುಘಾ ಶರಣರು ಅದ್ಭುತವಾಗಿ ನಡೆಸಿಕೊಟ್ಟಿದ್ದಾರೆ. ಸಮಾಜಮುಖಿಯಾಗಿ ಹಾಗು ಧಾರ್ಮಿಕ ಸೇವೆ ಮಾಡಲು ನಮ್ಮನ್ನು ಸಜ್ಜುಗೊಳಿಸಿದ್ದಾರೆ. ಕ್ರೀಯಾಶೀಲವಾಗಿ ಕೆಲಸ ಮಾಡಲು ಶಕ್ತಿ ತುಂಬಿದ್ದಾರೆ. ವಿಶೇಷವಾಗಿ ಅವರು ಹೇಳಿದ “ಬದ್ಧತೆಯಿಂದ ಪ್ರಭುದ್ಧತೆ ಸಾಧಿಸಿ” ಎಂಬ ಉಪದೇಶವನ್ನು ಪಾಲನೆ ಮಾಡಿದ್ದಲ್ಲಿ ಜೀವನದಲ್ಲಿ ಉದ್ಧಾರ ಸಾಧ್ಯ ಎಂದು ಕಾರ್ಯಾಗಾರದಲ್ಲಿದ್ದ ದಾವಣಗೆರೆ ವಿರಕ್ತ ಮಠದ ಬಸವ ಪ್ರಭು ಸ್ವಾಮೀಜಿ ಅಭಿಪ್ರಾಯಿಸಿದರು.