ವೀರಾಜಪೇಟೆ, ನ. 19: ವೀರಾಜಪೇಟೆ ಬಳಿಯ ಹೆಗ್ಗಳ ಗ್ರಾಮದಲ್ಲಿ ಹಲವಾರು ಜನರು ಬೇನಾಮಿ ಹೆಸರಿನಲ್ಲಿ ಕಂದಾಯ ಇಲಾಖೆಯ ಕುಮ್ಮಕ್ಕಿನಿಂದ ಪೈಸಾರಿ ಜಾಗಕ್ಕೆ ಬೇಲಿ ಹಾಕಿಕೊಂಡು ಮಾಜಿ ಸೈನಿಕರಿಗೆ ಅನ್ಯಾಯ ಮಾಡುತ್ತಿದ್ದಾರೆ ಎಂದು ಮಾಜಿ ಸೈನಿಕರಾದ ಹೆಚ್.ಕೆ ಅಪ್ಪಯ್ಯ ಹಾಗೂ ಎ.ಜಿ ಪೂಣಚ್ಚ ಆರೋಪಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರುಗಳು, ಸರ್ಕಾರಿ ಆದೇಶದಂತೆ 1978ರಿಂದ ಒಂದು ಸ್ಥಳದಲ್ಲಿ ವಾಸ ಇದ್ದವರಿಗೆ ಅಕ್ರಮ ಸಕ್ರಮದಡಿಯಲ್ಲಿ ಜಾಗವನ್ನು ಮಂಜೂರು ಮಾಡಲು ಅವಕಾಶವಿದೆ. ಹೆಗ್ಗಳ ಗ್ರಾಮದಲ್ಲಿ 24.20 ಎಕರೆ ಜಾಗವನ್ನು ಸೈದಾಲವಿ, ಜೋಸ್ ಝಾಕಾರಿಯಾ, ಸಿರಿಲ್ ಮ್ಯಾಥ್ಯು, ಬೆನ್ನಿ ಜೋಸೆಫ್, ಹಾಗೂ ಮ್ಯಾಥ್ಯು ಎಂಬ ಬೇನಾಮಿ ಹೆಸರಿನಲ್ಲಿ ದಾಖಲೆಗಳನ್ನು ಸೃಷ್ಟಿ ಮಾಡಲಾಗಿದೆ. ಮಾಹಿತಿ ಹಕ್ಕಿನಲ್ಲಿ ಮಾಹಿತಿ ಪಡೆದಾಗ ಹೆಗ್ಗಳ ಗ್ರಾಮ ಪಂಚಾಯಿತಿಯಲ್ಲಿ ಇವರ ಹೆಸರುಗಳು ಇರುವದಿಲ್ಲ. ಈ ವಿಚಾರದಲ್ಲಿ ಎ.ಪಿ ನಂಜುಂಡ ಎಂಬವರು ಲೋಕಾಯುಕ್ತದಲ್ಲಿ ಮೊಕದ್ದಮೆ ದಾಖಲಿಸಿದ ಪರಿಣಾಮ 1.04.2014 ರಂದು ಲೋಕಾಯುಕ್ತ ನ್ಯಾಯಾಲಯ ಮೂರು ತಿಂಗಳಲ್ಲಿ ಬೇನಾಮಿ ಹೆಸರಿನಲ್ಲಿರುವ ಜಾಗವನ್ನು ತೆರವುಗೊಳಿಸುವಂತೆ ಆದೇಶ ನೀಡಿತು. ಆದರೆ ಕಂದಾಯ ಅಧಿಕಾರಿಗಳು ಈವರೆಗೆ ಜಾಗವನ್ನು ತೆರವುಗೊಳಿಸಿಲ್ಲ ಎಂದು ಗೋಷ್ಠಿಯಲ್ಲಿ ಆರೋಪಿಸಲಾಯಿತು.

ಕೆದಮುಳ್ಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸರ್ವೆ ಸಂಖ್ಯೆ 528/6ರಲ್ಲಿ 10 ಎಕರೆ ಜಾಗ, ಸರ್ವೆ ಸಂಖ್ಯೆ 528ರಲ್ಲಿ 3.58 ಎಕರೆ ಜಾಗ ಹಾಗೂ ಸರ್ವೆ ಸಂಖ್ಯೆ 123/1ಪಿ1 ರಲ್ಲಿ 20ಕ್ಕೂ ಅಧಿಕ ಎಕರೆ ಜಾಗವನ್ನು ಕೆಲವರು ಒತ್ತುವರಿ ಮಾಡಿಕೊಂಡು ನಕಲಿ ದಾಖಲೆಗಳನ್ನು ನಿರ್ಮಿಸಿಕೊಂಡಿದ್ದಾರೆ.

ಹೆಗ್ಗಳ ಗ್ರಾಮದ ಸರ್ವೆ ಸಂಖ್ಯೆ 133/1ಪಿ1 ರಲ್ಲಿ 17.50 ಸರ್ಕಾರಿ ಜಾಗ ಖಾಲಿ ಇದ್ದು, ಮಾಜಿ ಸೈನಿಕರಾದ ನಾವುಗಳು ಈ ಜಾಗಕ್ಕಾಗಿ 2012 ರಲ್ಲಿಯೆ ಅರ್ಜಿ ಸಲ್ಲಿಸಿದ್ದು ಈವರೆಗೂ ಕಂದಾಯ ಅಧಿಕಾರಿಗಳು ಮಂಜೂರು ಮಾಡುತ್ತಿಲ್ಲ. ಕಂದಾಯ ಇಲಾಖೆಯ ವಿರುದ್ಧವಾಗಿ ನವೆಂಬರ್ 24 ರಂದು ತಾಲೂಕು ಕಚೇರಿ ಎದುರು ಅನಿರ್ಧಿಷ್ಟಾವಧಿ ಧರಣಿ ಸತ್ಯಾಗ್ರಹ ನಡೆಸಲಾಗುವದೆಂದು ಹೇಳಿದರು.

ಗೋಷ್ಠಿಯಲ್ಲಿ ಗ್ರಾಮಸ್ಥರಾದ ಪ್ಯಾಟ್ರಿಕ್ ಗೋನ್ಸಾಲ್‍ವೇಸ್ ಉಪಸ್ಥಿತರಿದ್ದರು.