ಮಡಿಕೇರಿ, ಡಿ. 28: ಪ್ರೌಢಶಾಲಾ ಸಹ ಶಿಕ್ಷಕರು ಹಾಗೂ ಮುಖ್ಯೋಪಧ್ಯಾಯರಿಗೆ ನೀಡಿರುವ ಸೌಲಭ್ಯಗಳನ್ನು ಇತರ ಶಿಕ್ಷಕರುಗಳಿಗೂ ಮತ್ತು ತತ್ಸಮಾನ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಶಿಕ್ಷಕರುಗಳಿಗೂ ವಿಸ್ತರಿಸುವಂತೆ ವೇತನ ಬಡ್ತಿ ವಂಚಿತರಾದ ಶಿಕ್ಷಕರ ಸಂಘದ ಪದಾಧಿಕಾರಿಗಳು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಒತ್ತಾಯಿಸಿದ್ದಾರೆ.

ಬೆಂಗಳೂರಿನಲ್ಲಿ ಮುಖ್ಯಮಂತ್ರಿಗಳನ್ನು ಭೇಟಿಯಾದ ಶಿಕ್ಷಕರ ಸಂಘದ ನಿಯೋಗ 2016 ಜೂನ್‍ನಿಂದ ಕರ್ತವ್ಯ ನಿರ್ವಹಿಸುತ್ತಿರುವ ಪ್ರೌಢಶಾಲೆಗಳ ಇತರ ಶಿಕ್ಷಕರುಗಳಿಗೂ ಹಾಗೂ ತತ್ಸಮಾನ ಹುದ್ದೆಗಳ ಶಿಕ್ಷಕರುಗಳಿಗೂ ಹೆಚ್ಚುವರಿ ವೇತನ ಬಡ್ತಿ ಮಂಜೂರಾತಿ ಮಾಡಲು ಸರಕಾರ ಆದೇಶ ಮಾಡಬೇಕೆಂದು ಮನವಿ ಮಾಡಿದರು.

ಇತ್ತೀಚೆಗೆ ಸರಕಾರ ಹೊರಡಿಸಿರುವ ಆದೇಶದಂತೆ ಸರಕಾರಿ ಹಾಗೂ ಅನುದಾನಿತ ಪ್ರೌಢಶಾಲಾ ಶಿಕ್ಷಕರು ಮತ್ತು ಮುಖ್ಯ ಶಿಕ್ಷರುಗಳಿಗೆ ಹೆಚ್ಚುವರಿ ವೇತನ ಬಡ್ತಿ ಮಂಜೂರು ಮಾಡಲಾಗಿದೆ. ಆದರೆ ಸಹ ಶಿಕ್ಷಕ ವೃಂದವಾದ ದೈಹಿಕ ಶಿಕ್ಷಕರು ಗ್ರೇಡ್ 1, ಗ್ರೇಡ್ 2, ಸಂಗೀತ ಶಿಕ್ಷಕರು, ವೃತ್ತಿ ಶಿಕ್ಷಕರು, ಚಿತ್ರಕಲಾ ಶಿಕ್ಷಕರು, ಪ್ರೌಢ ಶಾಲಾ ಸಹ ಶಿಕ್ಷಕರ ಗ್ರೇಡ್-2 ತತ್ಸಮಾನ ಬೋಧಕೇತರ ಹುದ್ದೆಗಳಾದ ಶಿಕ್ಷಣ ಸಂಯೋಜಕರು, ಕ್ಷೇತ್ರ ಸಂಪನ್ಮೂಲ ವ್ಯಕ್ತಿಗಳು, ಪದವೀಧರ ಮುಖ್ಯ ಶಿಕ್ಷಕರು, ತಾಂತ್ರಿಕ ಸಹಾಯಕರು, 8 ನೇ ತರಗತಿ ಭೋಧಿಸುವ ಟಿಜಿಟಿ ಶಿಕ್ಷಕರು, ಪ್ರೌಢ ಶಾಲಾ ಮುಖ್ಯ ಶಿಕ್ಷಕರ ವೃಂದದದಲ್ಲಿ ತತ್ಸಮಾನ ವಿಷಯ ಪರಿವೀಕ್ಷಕರು, ಬಿಆರ್‍ಸಿ ಡಯಟ್ ಕಿರಿಯ ಉಪನ್ಯಾಸಕರು ಹಾಗೂ ಸಹಾಯಕ ನಿರ್ದೇಶಕರುಗಳು ಮತ್ತು ಇತರೆ ಹುದ್ದೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿಗಳಿಗೆ ಸರಕಾರದ ಆದೇಶದಂತೆ ಸೌಲಭ್ಯ ನೀಡುವ ಬಗ್ಗೆ ಸ್ಪಷ್ಟನೆ ಇಲ್ಲ ಎಂದು ಶಿಕ್ಷಕರುಗಳ ನಿಯೋಗ ಮುಖ್ಯಮಂತ್ರಿಗಳಿಗೆ ಮನವರಿಕೆ ಮಾಡಿಕೊಟ್ಟರು.

ಕಾಂಗ್ರೆಸ್ ಪಕ್ಷದ ರಾಜ್ಯ ಉಸ್ತುವಾರಿ ಹಾಗೂ ವರಿಷ್ಠ ದಿಗ್ವಿಜಯ್ ಸಿಂಗ್ ಅವರನ್ನು ಕೂಡ ಶಿಕ್ಷಕರ ನಿಯೋಗ ಭೇಟಿ ಮಾಡಿ ಮನವಿ ಸಲ್ಲಿಸಿತು. ಇದನ್ನು ಪರಿಗಣಿಸಿದ ದಿಗ್ವಿಜಯ್ ಸಿಂಗ್ ಅವರು ತಕ್ಷಣ ಬೇಡಿಕೆಗೆ ಸ್ಪಂದಿಸುವಂತೆ ಮುಖ್ಯಮಂತ್ರಿಗಳಿಗೆ ನಿರ್ದೇಶನ ನೀಡಿದರು. ಶಿಕ್ಷಣ ಸಚಿವ ತನ್ವೀರ್ ಸೇಠ್ ಅವರನ್ನು ಕೂಡ ಶಿಕ್ಷಕರು ಭೇಟಿಯಾಗಿ ಚರ್ಚಿಸಿದರು. ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಬ್ರಿಜೇಶ್ ಕಾಳಪ್ಪ ಅವರ ಮಾರ್ಗದರ್ಶನದಲ್ಲಿ ಶಿಕ್ಷಕರ ಸಂಘದ ಮುಖಂಡರು ಹಾಗೂ ನೈಋತ್ಯ ಶಿಕ್ಷಕರ ಕ್ಷೇತ್ರದ ಅಭ್ಯರ್ಥಿಯಾಗಿದ್ದ ಕೆ.ಕೆ.ಮಂಜುನಾಥ್ ಕುಮಾರ್ ಅವರು ನಿಯೋಗದ ನೇತೃತ್ವ ವಹಿಸಿದ್ದರು.

ನಿಯೋಗದಲ್ಲಿ ಚಿಕ್ಕಮಗಳೂರಿನ ಷಡಾಕ್ಷರಿ, ಮಹೇಶ್, ಶಿವಮೊಗ್ಗದ ರಂಗಪ್ಪ, ಜಯಣ್ಣ ಗೌಡ, ಮಹೇಶ್ವರಪ್ಪ, ಭದ್ರಾವತಿಯ ಆರಿಫ್, ಹಾಸನ ಹಾವೇರಿ, ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಭಾಗಗಳ ಶಿಕ್ಷಕರುಗಳು ನಿಯೋಗದಲ್ಲಿದ್ದರು.