ಗೋಣಿಕೊಪ್ಪಲು, ಜ. 19: ಹುದಿಕೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸಿಗುವ ಬೇಗೂರು-ಚೇನಿವಾಡದಲ್ಲಿ ಸುಮಾರು 500 ವರ್ಷಕ್ಕೂ ಅಧಿಕ ಇತಿಹಾಸ ಇರುವ ಪುರಾತನ ಶ್ರೀ ಮಹಾವಿಷ್ಣು ದೇವಾಲಯ ಇತ್ತೀಚೆಗೆ ಪತ್ತೆಯಾಗಿದ್ದು, ಇದೀಗ ಮಲ್ಲಂಡ ಸುಬ್ರಮಣಿ ನಂಜಪ್ಪ ಅಧ್ಯಕ್ಷತೆಯಲ್ಲಿ ರೂ. 1.50 ಕೋಟಿ ವೆಚ್ಚದ ಆಧುನಿಕ ಶೈಲಿಯ ದೇವಾಲಯ ನಿರ್ಮಾಣ ಪೂರ್ವಭಾವಿ ಸಿದ್ಧತೆಗಳು ಭರದಿಂದ ಸಾಗಿದೆ.
ಸುಮಾರು 3.60 ಎಕರೆ ಜಾಗದಲ್ಲಿ ಶ್ರೀ ಮಹಾವಿಷ್ಣು ವಿಗ್ರಹ, ಗಣಪತಿ ವಿಗ್ರಹ, ನಾಗರಕಲ್ಲು, ಹಳೆಯ ಎರಡು ತೆರೆದ ಬಾವಿಗಳು, ಪುರಾತನ ಶೈಲಿಯ ದೇವರ ಪೀಠ, ಹಳೆ ಹಿತ್ತಾಳೆ ಚೆಂಬು, ಪಾತ್ರೆ ಇತ್ಯಾದಿಗಳು ಸ್ಥಳೀಯ ಗ್ರಾಮಸ್ಥರಿಗೆ ಲಭಿಸಿದ್ದು, ದೇವಸ್ಥಾನ ಜೀರ್ಣೋದ್ಧಾರ ಸಮಿತಿ ಮೂಲಕ ಪುನರ್‍ಪ್ರತಿಷ್ಠಾಪನಾ ಕಾರ್ಯಕ್ರಮಗಳು ಭರದಿಂದ ನಡೆಯುತ್ತಿದೆ.
ಮಹಾವಿಷ್ಣು ದೇವಾಲಯವು ರಾಜರ ಕಾಲದ ಅತಿಕ್ರಮಣ, ಪ್ರಕೃತಿ ವಿಕೋಪದಿಂದಲೂ ನಾಶವಾಗಿದ್ದು, ಬೇಗೂರು-ಚೇನಿವಾಡ ಗ್ರಾಮದಲ್ಲಿ ನಂತರದ ವರ್ಷಗಳಲ್ಲಿ ಬೆಳೆನಾಶ, ಅಪಮೃತ್ಯು, ವಿಚಿದ್ರಕಾರಕ ಶಕ್ತಿಗಳಿಗೆ ಉತ್ತೇಜನ, ಬುದ್ಧಿ ಭ್ರಮಣೆ, ಜಗಳ, ಆಶಾಂತಿ, ದ್ರವ್ಯಹಾನಿ ಮುಂತಾದ ಅಪಶಕುನಗಳು ಸಂಭವಿಸುತ್ತಿದ್ದವು ಎನ್ನಲಾಗಿದೆ. ಈ ನಿಟ್ಟಿನಲ್ಲಿ ಗ್ರಾಮದ ಹಿರಿಯರ ಸಲಹೆಯೊಂದಿಗೆ ಮಲ್ಲಂಡ ಸುಬ್ರಮಣಿ ನಂಜಪ್ಪ ಅಧ್ಯಕ್ಷತೆಯಲ್ಲಿ ಕಳೆದ ಒಂದು ವರ್ಷದಿಂದ ಜೀರ್ಣೋದ್ಧಾರ ಕಾರ್ಯ ಶ್ರದ್ಧಾಭಕ್ತಿಯೊಂದಿಗೆ ನಡೆದು ಬರುತ್ತಿದೆ. ತಾ. 9.1.2016ರಲ್ಲಿ ಕೇರಳದ ಪ್ರಸಿದ್ಧ ಜ್ಯೋತಿಷಿ ಪ್ರಕಾಶನ್ ಅವರ ಮೂಲಕ ಅಷ್ಟಮಂಗಲ ಪ್ರಶ್ನೆ ಕೇಳಲಾಗಿ, ಜ್ಯೋತಿಷಿಯ ಮಾರ್ಗದರ್ಶನದಂತೆ ದೇವಸ್ಥಾನ ಪುನರ್‍ಪ್ರತಿಷ್ಠಾಪನಾ ಕಾರ್ಯ ನಡೆದು ಬರುತ್ತಿದೆ.
ನಂತರ ಕೇರಳ ಪೂಂದೋಟಂ ಪಾಂಡುರಂಗ ತಂತ್ರಿ ನೇತೃತ್ವದಲ್ಲಿ ಬಾಲಾಲಯ ಹಳೆಯ ವಿಗ್ರಹವನ್ನು ಮೇ. 2016ರಲ್ಲಿ ಪ್ರತಿಷ್ಠಾಪನೆ ಮಾಡಲಾಯಿತು. ಇದೀಗ ತಾ.16 ರಂದು ಷಡಾಧಾರ ಪ್ರತಿಷ್ಠಾಪನೆಯನ್ನು ಮಾಡಲಾಯಿತು. ನೂರಾರು ಭಕ್ತಾದಿಗಳ ಸಮ್ಮುಖದಲ್ಲಿ ಸ್ಥಳ ಶುದ್ದಿ, ವಾಸ್ತುಬಲಿ, ಷಡಾಧಾರ ಶುದ್ಧಕ್ರಿಯೆ, ಪ್ರತಿಷ್ಠಾಪನೆ, ಮಹಾಪೂಜೆ ಹಾಗೂ ಸಾಮೂಹಿಕ ಅನ್ನಸಂತರ್ಪಣೆ ನೆರವೇರಿತು. ಕಾರ್ಯಕ್ರಮದ ಮಾರ್ಗದರ್ಶಕರಾದ ಪೆÇನ್ನಂಪೇಟೆ ಕೊಡವ ಸಮಾಜ ಮಾಜಿ ಅಧ್ಯಕ್ಷ ಹಾಗೂ ಹಿರಿಯರಾದ ಚೆಪ್ಪುಡಿರ ಎಂ.ಪೆÇನ್ನಪ್ಪ, ಬೆಂಗಳೂರು ಬೇಗೂರು ಕೊಡವ ಸಾಂಸ್ಕೃತಿಕ ಸಂಘದ ಅಧ್ಯಕ್ಷ ಮಲ್ಲಂಡ ಬೋಪಯ್ಯ ಮುಂತಾದವರು ಪಾಲ್ಗೊಂಡಿದ್ದರು.
ಮುಂದಿನ ಹಂತವಾಗಿ ಶ್ರೀ ಮಹಾವಿಷ್ಣುವಿನ ಗರ್ಭಗುಡಿ, ತೀರ್ಥ ಮಂಟಪ, ಗಣಪತಿ ಗುಡಿ, ಸುಬ್ರಮಣ್ಯ ಗುಡಿ, ಕೊಡಿಮರ (ನೀಲಕೊಡಿ), ದೇವಸ್ಥಾನ ಸುತ್ತಲೂ ಪೌಳಿ ನಿರ್ಮಾಣ, ಅರ್ಚಕರ ವಸತಿಗೃಹ, ಸಮುದಾಯ ಭವನ, ಭೋಜನ ಶಾಲೆ, ಆವರಣ ಗೋಡೆ ಮುಂತಾದ ಕಾಮಗಾರಿಗಳಿಗೆ ಸುಮಾರು ರೂ. 1.50 ಕೋಟಿ ಯೋಜನೆಯನ್ನು ರೂಪಿಸಿದ್ದು, ಜಿಲ್ಲೆಯ ಭಕ್ತಾದಿಗಳಿಂದಲೂ ಕ್ಷೇತ್ರದ ಅಭಿವೃದ್ಧಿಗೆ ಧನ ಸಹಾಯವನ್ನು ನಿರೀಕ್ಷಿಸಿರುವದಾಗಿ ಅಧ್ಯಕ್ಷ ಮಲ್ಲಂಡ ಸುಬ್ರಮಣಿ (9731576540) ತಿಳಿಸಿದ್ದಾರೆ.
ಶ್ರೀ ಮಹಾವಿಷ್ಣು ದೇವಾಲಯ ಜೀರ್ಣೋದ್ಧಾರ ಸಮಿತಿಯ ಉಪಾಧ್ಯಕ್ಷರಾದ ಕಾಯಪಂಡ ಕಂಠಿ ಕರುಂಬಯ್ಯ, ಕಾರ್ಯದರ್ಶಿ ಕೊಟ್ಟಂಗಡ ರಾಜಾ ಸುಬ್ಬಯ್ಯ, ಖಂಜಾಂಚಿ ಮಲ್ಲಂಡ ಮಧು ದೇವಯ್ಯ, 15 ಮಂದಿ ಸಮಿತಿ ಸದಸ್ಯರು ಹಾಗೂ 13 ಮಂದಿ ಸಲಹಾ ಸಮಿತಿ ಸದಸ್ಯರ ಮಾರ್ಗದರ್ಶನದಲ್ಲಿ ದೇಗುಲವನ್ನು ಸರ್ವಾಂಗೀಣ ಸುಂದರವಾಗಿ ನಿರ್ಮಿಸುವ ನಿಟ್ಟಿನಲ್ಲಿ ಶ್ರದ್ಧಾಭಕ್ತಿಯೊಂದಿಗೆ ಕಾರ್ಯಕ್ರಮ ಹಾಕಿಕೊಳ್ಳಲಾಗಿದೆ ಎಂದು ಸ್ಥಾಪಕ ಅಧ್ಯಕ್ಷರು ತಿಳಿಸಿದ್ದಾರೆ.
- ಟಿ.ಎಲ್. ಶ್ರೀನಿವಾಸ್