ಶ್ರೀಮಂಗಲ, ಜು. 28 : ಬೆಳೆಸಿ ತಿನ್ನುವದರಲ್ಲಿ ದೊರೆಯುವ ಸಂತೃಪ್ತಿ, ಗಳಿಸಿ ತಿನ್ನುವದರಲ್ಲಿ ದೊರೆ ಯುವದಿಲ್ಲ. ಪಾರಂಪರಿಕವಾಗಿ ಕೃಷಿಯನ್ನು ರೂಢಿಸಿಕೊಂಡು ಬಂದಿರುವ ಜಿಲ್ಲೆಯ ರೈತರು ಯಾವದೇ ಕಾರಣಕ್ಕೆ ಭತ್ತದ ಕೃಷಿ ಭೂಮಿಯನ್ನು ಪಾಳು ಬಿಡದೆ, ಕೃಷಿಯೇತರ ಉದ್ದೇಶಕ್ಕೆ ಬಳಸದೆ ಮಾರಾಟ ಮಾಡದೆ ಜಿಲ್ಲೆಯಲ್ಲಿ ಹಿಂದಿನ ಕೃಷಿ ವೈಭವವನ್ನು ಮರುಕಳಿಸಲು ಮುಂದಾಗಬೇಕು. ಇದಕ್ಕೆ ಪೂರಕವಾಗಿ ಕೃಷಿಯಲ್ಲಿ ತಾಂತ್ರಿಕತೆ ಹಾಗೂ ಯಾಂತ್ರೀ ಕರಣವನ್ನು ಬಳಸಿಕೊಳ್ಳಬೇಕೆಂದು ವಿಧಾನ ಪರಿಷತ್ ಸದಸ್ಯೆ ಶಾಂತೆಯಂಡ ವೀಣಾ ಅಚ್ಚಯ್ಯ ಕರೆ ನೀಡಿದರು.
ಗೋಣಿಕೊಪ್ಪ ಸಮೀಪ ಕೈಕೇರಿ ಗ್ರಾಮದ ಜಮ್ಮಡ ಎಸ್.ಮೋಹನ್ ಮಾದಪ್ಪರವರ ಭತ್ತದ ಗದ್ದೆಯಲ್ಲಿ ಯುನೈಟೆಡ್ ಕೊಡವ ಆರ್ಗನೈಜೇಷನ್ ಸಂಘಟನೆಯ ಗ್ರಾಮೀಣಭಿವೃದ್ಧಿ ಯೋಜನೆಯ ಮೂಲಕ ಹಮ್ಮಿಕೊಂಡಿರುವ ಪಾಳುಬಿಟ್ಟ ಗದ್ದೆಗಳಲ್ಲಿ ಕೃಷಿ ಪುನಶ್ಚೇತನ ಮತ್ತು ಭತ್ತದ ಕೃಷಿಯಲ್ಲಿ ಯಾಂತ್ರೀಕರಣದ ಪರಿಚಯದ ಮೂರನೇ ವರ್ಷದ ಕಾರ್ಯ ಕ್ರಮವಾದ ‘ನಾಡ ಮಣ್ಣ್ - ನಾಡ ಕೂಳ್’ ಯೋಜನೆಯ ಪ್ರಾತ್ಯಕ್ಷಿಕ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು.
ಯುಕೋ ಸಂಘಟನೆಯ ಯುವಕರು ಈ ಯೋಜನೆಯ ಮೂಲಕ ಉತ್ತಮ ಕೆಲಸ ಮಾಡುತ್ತಿದ್ದು, ಇದರಿಂದ ಬಹಳಷ್ಟು ರೈತರಲ್ಲಿ ಭತ್ತದ ಕೃಷಿಯನ್ನು ಯಾಂತ್ರೀಕರಣದ ಮೂಲಕ ಲಾಭದಾಯಕವಾಗಿ ಹಾಗೂ ಸುಲಭವಾಗಿ ಮಾಡಬಹುದು ಎನ್ನುವ ಭರವಸೆ ಮೂಡಿಸಿದ್ದಾರೆ. ಇಂತಹ ಪ್ರಯತ್ನ ಹಲವು ವರ್ಷದ ಹಿಂದೆಯೇ ಆಗಿದ್ದರೆ ಭತ್ತದ ಕೃಷಿ ನಷ್ಟವೆಂದು ಗದ್ದೆಯನ್ನು ಪಾಳುಬಿಡುವ, ಮಾರಾಟ ಮಾಡಿ ಕೃಷಿಯಿಂದ ವಿಮುಖರಾಗಿ ಜಿಲ್ಲೆಯ ಜನತೆ ನಗರ ಪ್ರದೇಶಕ್ಕೆ ಉದ್ಯೋಗ ಅರಸಿ ವಲಸೆ ಹೋಗುವದನ್ನು ತಡೆಗಟ್ಟ ಬಹುದಾಗಿತ್ತು ಎಂದು ಅಭಿಪ್ರಾಯಪಟ್ಟರು.