ಮಡಿಕೇರಿ, ಅ.4 : ಕಾಫಿಯ ಗುಣಮಟ್ಟ ಹಾಗೂ ಬೆಳೆಗಾರರ ಹಿತರಕ್ಷಣೆಗೆ ಅನುಗುಣವಾಗಿ ಯುನೈಟೆಡ್ ಪ್ಲಾಂಟರ್ಸ್ ಅಸೋಸಿಯೇಷನ್ ಆಫ್ ಸದರ್ನ್ ಇಂಡಿಯಾ (ಉಪಾಸಿ) ಮೂಲಕ ಕಾರ್ಯ ನಿರ್ವಹಿಸುವದಾಗಿ ಸಂಸ್ಥೆಯ ನೂತನ ಅಧ್ಯಕ್ಷ ವಿನೋದ್ ಶಿವಪ್ಪ ಭರವಸೆ ನೀಡಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಳೆÉಗಾರರು ಮತ್ತು ಕಾರ್ಮಿಕ ವರ್ಗದ ಹಿತ ಚಿಂತನೆಯನ್ನೆ ಧ್ಯೇಯವನ್ನಾಗಿಸಿಕೊಂಡಿರುವ ಉಪಾಸಿ ಕೇವಲ ಒಂದು ಸಂಘಟನೆಯಲ್ಲವೆಂದರು. 1893ರಲ್ಲಿ ಆರಂಭಗೊಂಡ ಉಪಾಸಿ ಸಂಸ್ಥೆ ಕಾಫಿ ಸೇರಿದಂತೆ ವಿವಿಧ ಪ್ಲಾಂಟೇಷನ್ ಬೆಳೆಗಳ ಅಭಿವೃದ್ಧಿ ಮತ್ತು ಬೆಳೆÀಗಾರರು, ಕಾರ್ಮಿಕರ ಹಿತದೃಷ್ಟಿಯನ್ನು ಕಾಯ್ದುಕೊಳ್ಳುತ್ತಿದೆ ಎಂದರು. ಈ ಸಂಸ್ಥೆ ಕಾಫಿ ಬೆಳೆಯುವ 13 ಜಿಲ್ಲೆಗಳನ್ನು ಒಳಗೊಂಡಂತೆ ಕಾರ್ಯನಿರ್ವಹಿಸುತ್ತಿದೆ. ಕಾಫಿ ಉದ್ಯಮ 1992-93 ರವರೆಗೆ ಕಾಫಿ ಮಂಡಳಿಯ ಹಿಡಿತದಲ್ಲಿತ್ತು. ಬಳಿಕ ಮುಕ್ತ ಮಾರುಕಟ್ಟೆಯನ್ನು ಪ್ರವೇಶಿಸಿದೆ. ಈ ಹಂತದಲ್ಲಿ ಕಾಫಿಯ ಗುಣಮಟ್ಟ, ಬೆಳೆಗಾರರ ಹಿತರಕ್ಷಣೆಗೆ ಅನುಗುಣವಾಗಿ ಉಪಾಸಿ ಕಾರ್ಯೋನ್ಮುಖವಾಗಲಿದೆ ಎಂದು ತಿಳಿಸಿದರು.

ಪ್ರಸ್ತುತ ಕೇಂದ್ರ ಸರ್ಕಾರ ಜಾರಿಗೆ ತರಲು ಉದ್ದೇಶಿಸಿರುವ ನೂತನ ಕಾಫಿ ಕಾಯ್ದೆಯನ್ನು ಸಮರ್ಥಿಸಿಕೊಂಡ ಅವರು 1942 ರ ಕಾಫಿ ಕಾಯ್ದೆಗೆ ತಿದ್ದುಪಡಿ ತರುವ ಮೂಲಕ ಕಾಫಿಯ ಗುಣಮಟ್ಟ ಹೆಚ್ಚಳ, ಕಾಫಿ ಪ್ರಸರಣ, ಬೆಳೆಗಾರರಲ್ಲಿ ತಾಂತ್ರಿಕ ಕೌಶಲ್ಯತೆ ವೃದ್ಧಿ ಸೇರಿದಂತೆ ವಿವಿಧ ಕ್ಷೇತ್ರಗಳ ಬೆಳವಣಿಗೆಯ ವಿಚಾರಗಳನ್ನು ಕಾಫಿ ಮಂಡಳಿಯಲ್ಲಿ ಸೇರ್ಪಡೆಗೊಳಿಸುವ ಪ್ರಯತ್ನಗಳಿಗೆ ಮುಂದಾಗಿರುವದಾಗಿ ಅಭಿಪ್ರಾಯಪಟ್ಟರು.

ಕಾಫಿ ಉದ್ಯಮ ಸಾಕಷ್ಟು ಬದಲಾವಣೆÉಗಳಿಗೆ ತನ್ನನ್ನು ತೆರೆದುಕೊಳ್ಳುತ್ತಿರುವ ಹಂತದಲ್ಲಿ ಅದಕ್ಕೆ ಪೂರಕವಾದ ಸಂಶೋಧನೆ ಅತ್ಯವಶ್ಯವಾಗಿ ನಡೆಯಬೇಕಾಗಿದೆ. ಪ್ರಸ್ತುತ ಸೆಂಟ್ರಲ್ ಕಾಫಿ ರಿಸರ್ಚ್ ಇನ್‍ಸ್ಟಿಟ್ಯೂಟ್‍ನ ಯಾವದೇ ಸಂಶೋಧನಾ ವಿಚಾರಗಳು ಕಾಫಿಯ ಗುಣಮಟ್ಟ ಹೆಚ್ಚಳಕ್ಕೆ, ಉತ್ಪಾದನೆಯ ಹೆಚ್ಚಳಕ್ಕೆ ಅನುಗುಣವಾಗಿ ಪೂರÀಕವಾಗಿಲ್ಲ. ಈ ಹಿನ್ನೆಲೆಯಲ್ಲಿ ಕಾಫಿ ಕೃಷಿಯ ಅಗತ್ಯತೆಗಳಿಗೆ ತಕ್ಕಂತೆ ವಿವಿಧ ಪ್ಲಾಂಟೇಷನ್ ಬೆಳೆÉಗಳ ಅಭಿವೃದ್ಧಿಗೆ ಪೂರಕವಾದ ಸಂಶೋಧನೆಗಳತ್ತ ಉಪಾಸಿ ಆಸಕ್ತವಾಗಿದ್ದು, ಅಗತ್ಯ ನೆರವನ್ನು ಸರ್ಕಾರಗಳು ಒದಗಿಸಬೇಕೆಂದು ವಿನೋದ್ ಶಿವಪ್ಪ ಮನವಿ ಮಾಡಿದರು.

ಕಾಫಿ ಮಂಡಳಿಯ ಇಂಟಿಗ್ರೇಟೆಡ್ ಕಾಫಿ ಡೆವಲಪ್‍ಮೆಂಟ್‍ನ 950 ಕೋಟಿ ರೂ.ಗಳ ಯೋಜನೆಯಡಿ 450 ಕೋಟಿ ರೂ. ಮಂಜೂರಾಗಿದೆ. ಇದರಲ್ಲಿ ಕೇವಲ ಶೇ.30 ರಷ್ಟು ಮೊತ್ತವನ್ನು ಮಾತ್ರ ವಿತರಿಸಲಾಗಿದೆ. ಉಪಾಸಿ ಮೂಲಕ ಐಸಿಡಿಪಿ ಯೋಜನೆಯಡಿ ಅನುದಾನವನ್ನು ವಿವಿಧ ಕ್ಷೇತ್ರಗಳಿಗೆ ವಿತರಿಸುವದಕ್ಕೆ ಸಂಬಂಧಿಸಿದಂತೆ ಮಾಹಿತಿಯನ್ನು ಕೋರಿದ್ದರೂ ಇಲ್ಲಿಯವರೆಗೆ ಮಾಹಿತಿ ಒದಗಿಸಿಲ್ಲ. ಮರುನಾಟಿಗೆ ಸಂಬಂಧಿಸಿದಂತೆ 2013-14 ಮತ್ತು 2014-15ನೇ ಸಾಲಿಗೆ ಬೆಳೆಗಾರರಿಗೆ ನೀಡಬೇಕಾದ ಸಹಾಯಧನವನ್ನು ಇಲ್ಲಿಯವರೆಗೆ ವಿತರಿಸಿಲ್ಲ, ಇದನ್ನು ತಕ್ಷಣ ವಿತರಿಸಬೇಕೆಂದು ಒತ್ತಾಯಿಸಿದರು.

ಉಪಾಸಿಯ ಸಂಬಾರ ಬೆಳೆಗಳಿಗಾಗಿ ಇರುವ ಸ್ಥಾಯಿ ಸಮಿತಿಯ ಅಧ್ಯಕ್ಷ ಸಿ.ಎಂ. ಪೆಮ್ಮಯ್ಯ ಮಾತನಾಡಿ, ನೂತನ ಕಾಫಿ ಕಾಯ್ದೆಯಡಿ ಕಾಫಿ ಮಂಡಳಿಯ ಕಾರ್ಯದರ್ಶಿಗಳಿಗೆ ಹೆಚ್ಚಿನ ಅಧಿಕಾರವನ್ನು ನೀಡಲಾಗಿದೆಯಾದರು, ಮಂಡಳಿಯಿಂದ ಯಾವದೇ ಕಾರಣಕ್ಕೂ ಹಳೆÉಯ ಮಾರಾಟ ವ್ಯವಸ್ಥೆ ಮತ್ತೆ ಆರಂಭವಾಗುವದಿಲ್ಲವೆಂದರು. ನೂತನ ಕಾಯ್ದೆಯಂತೆ ತೋಟಗಳ ನೋಂದಣಿಯಿಂದ ಒತ್ತುವರಿದಾರರಿಗಷ್ಟೆ ತೊಂದರೆಯಾಗಬಹುದೆಂದು ಅಭಿಪ್ರಾಯಪಟ್ಟರು. ಗೋಷ್ಠಿಯಲ್ಲಿ ಉಪಾಸಿಯ ಕಾಫಿ ಸ್ಥಾಯಿ ಸಮಿತಿಯ ಅಧ್ಯಕ್ಷ ನಾಗಪ್ಪನ್ ಉಪಸ್ಥಿತರಿದ್ದರು.