ಶ್ರೀಮಂಗಲ, ಡಿ. 23: ಕಾಫಿ ತೋಟಗಳಲ್ಲಿ ಬುಡಕಟ್ಟು ಜನಾಂಗದವರನ್ನು ಜೀತದಾಳುಗಳಾಗಿ ಶೋಷಿಸುತ್ತಿರುವ ಹಿನ್ನಲೆಯಲ್ಲಿ ತೋಟಗಳಿಂದ ಹೊರಬಂದು ದಿಡ್ಡಳ್ಳಿ ಅರಣ್ಯದಲ್ಲಿ ಗುಡಿಸಲು ನಿರ್ಮಿಸಿ ಕೊಂಡು ವಾಸ ಮಾಡುತ್ತಿದ್ದೇವೆ ಎಂದು ಮಾಡಿರುವ ಆರೋಪವನ್ನು ಜಿಲ್ಲಾ ಬೆಳೆಗಾರರ ಒಕ್ಕೂಟ ತೀವ್ರವಾಗಿ ಖಂಡಿಸಿದೆ.
ಗೋಣಿಕೊಪ್ಪದಲ್ಲಿ ಒಕ್ಕೂಟದ ಅಧ್ಯಕ್ಷ ಅಜ್ಜಮಾಡ ಶಂಕರು ನಾಚಪ್ಪ ಅವರ ಅಧ್ಯಕ್ಷತೆಯಲ್ಲಿ ಒಕ್ಕೂಟದ ಆಡಳಿತ ಮಂಡಳಿಯ ಸಭೆಯಲ್ಲಿ ಈ ಹೇಳಿಕೆಯು ಬಾಲಿಷವಾಗಿದ್ದು, ಸತ್ಯಕ್ಕೆ ದೂರವಾಗಿದ್ದು ಎಂದು ಹೇಳಲಾಯಿ
(ಮೊದಲ ಪುಟದಿಂದ) ಉನ್ನತ ಮಟ್ಟದ ತನಿಖೆ ನಡೆಯಬೇಕು. ತಪ್ಪಿತಸ್ಥರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒಕ್ಕೂಟ ಒತ್ತಾಯಿಸಿದೆ.
ಕಾಫಿ ಬೆಳೆಗಾರರ ಬಗ್ಗೆ ದಿಡ್ಡಳ್ಳಿಗೆ ಬಾಡಿಗೆಗೆ ಬಂದಿರುವ ಕೆಲವರು ಕೀಳು ಮಟ್ಟದ ಆರೋಪ ಮಾಡಿದ್ದಾರೆ. ಈ ಮೂಲಕ ಹಲವಾರು ವರ್ಷದಿಂದ ಕಾಫಿ ಬೆಳೆಗಾರರು ಮತ್ತು ಕಾರ್ಮಿಕರ ನಡುವೆ ಇರುವ ಬಾಂಧವ್ಯವನ್ನು ಕೆಡಿಸಿ, ಕಾರ್ಮಿಕರನ್ನು ನಕ್ಸಲ್ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಲು ಪ್ರಚೋದನೆ ನೀಡಲಾಗುತ್ತಿದೆ. ದಿಡ್ಡಳ್ಳಿ ಪ್ರಕರಣದಲ್ಲಿ ಪಾಲ್ಗೊಂಡಿರುವ ಕೆಲವರು ನಕ್ಸಲರ ಬಗ್ಗೆ ಮೃಧು ಧೋರಣೆ ಹೊಂದಿರುವವರಾಗಿದ್ದಾರೆ. ನಕ್ಸಲ್ ಹಾಗೂ ನಕ್ಸಲ್ ಬೆಂಬಲಿತರನ್ನು ಜಿಲ್ಲೆಯಲ್ಲಿ ನೆಲೆಯೂರಿಸಲು, ಈ ಪ್ರಕರಣವನ್ನು ಬಳಸಿಕೊಳ್ಳಲು ಕೆಲವರು ಮುಂದಾಗಿದ್ದಾರೆ ಎಂದು ಒಕ್ಕೂಟ ಆರೋಪಿಸಿದೆ.
ಕಾಫಿ ತೋಟಗಳಲ್ಲಿ ಕೆಲಸ ಮಾಡುತ್ತಿರುವ ಬುಡಕಟ್ಟು ಜನರು ಸೇರಿದಂತೆ ಇತರ ಕಾರ್ಮಿಕರಿಗೆ ವಿಶೇಷ ಸೌಲಭ್ಯ ನೀಡಿದ್ದಾರೆ. ವಾಸಿಸಲು ಲೈನ್ ಮನೆ, ಶೌಚಾಲಯ, ಕುಡಿಯಲು ಪರಿಶುದ್ಧ ನೀರು, ವಿದ್ಯುತ್ ಸೌಲಭ್ಯ, ದೂರದರ್ಶನ, ಸೌದೆ ಇತ್ಯಾದಿ ಸೌಲಭ್ಯಗಳನ್ನು ಉಚಿತವಾಗಿ ನೀಡಲಾಗುತ್ತಿದೆ. ಇದಲ್ಲದೇ ಆರೋಗ್ಯ, ಅವರ ಮಕ್ಕಳ ಶಿಕ್ಷಣ, ಕಷ್ಟ-ಸುಖಗಳಿಗೆ ಹಣಕಾಸಿನ ನೆರವು, ಕಾನೂನು ಬದ್ಧ ಕೂಲಿ ಸೌಲಭ್ಯ, ಹಬ್ಬ-ಹರಿದಿನಗಳಿಗೆ ವಿಶೇಷ ನೆರವು ನೀಡುತ್ತಾ ಕಾರ್ಮಿಕರನ್ನು ತಮ್ಮವರಂತೆÀ ಕಾಣಲಾಗುತ್ತಿದೆ ಎಂದು ಒಕ್ಕೂಟದ ಪ್ರಮುಖರು ಅಭಿಪ್ರಾಯ ಪಟ್ಟರು.
ಕಾಫಿ ಪ್ಲಾಂಟೇಶನ್ ಕಳೆದ 2 ದಶಕದಿಂದ ಹವಾಮಾನ ವೈಪರೀತ್ಯ, ಉತ್ಪಾದನಾ ವೆಚ್ಚ ಹೆಚ್ಚಳ, ಅತಿವೃಷ್ಟಿ, ಅನಾವೃಷ್ಟಿ, ಫಸಲು ಕುಂಠಿತ, ಮಾರುಕಟ್ಟೆ ದರ ಕುಸಿತ ಇತ್ಯಾದಿ ಸಮಸ್ಯೆಗಳಿಂದ ಬೆಳೆಗಾರರು ತೀವ್ರ ಸಂಕಷ್ಟ ಎದುರಿಸುತ್ತಿದ್ದರೂ, ಕಾರ್ಮಿಕರಿಗೆ ನಿಯಮದಂತೆ ವೇತನ ಇತರ ಸೌಲಭ್ಯವನ್ನು ಪ್ರಾಮಾಣಿಕವಾಗಿ ನೀಡಲಾಗುತ್ತಿದೆ. ಹೊರಗಿನ ಕೆಲವರ ಕುಮ್ಮಕ್ಕಿನಿಂದ ಸಂಕಷ್ಟದಲ್ಲಿರುವ ಬೆಳೆಗಾರರ ಮೇಲೆ ಸುಳ್ಳು ಆರೋಪ ಮಾಡುತ್ತಿರುವದು ಸಮಾಜದಲ್ಲಿ ಕಾಫಿ ಬೆಳೆಗಾರರ ಬಗ್ಗೆ ಕೆಟ್ಟ ಅಭಿಪ್ರಾಯ ಬರುವಂತೆ, ಸರಕಾರಕ್ಕೂ ತಪ್ಪು ಅಭಿಪ್ರಾಯ ಮೂಡುವಂತೆ ಮಾಡುವ ಷಡ್ಯಂತರ ಎಂದು ಒಕ್ಕೂಟದ ಪದಾಧಿಕಾರಿಗಳು ಆರೋಪಿಸಿದರು.
ಜಿಲ್ಲೆಯ ಕಾಫಿ ಪ್ಲಾಂಟೇಶನ್ 3-4 ಲಕ್ಷ ಕಾರ್ಮಿಕರಿಗೆ ಕೆಲಸ ನೀಡುತ್ತಿದೆ. ಹೊರ ಜಿಲ್ಲೆಯಿಂದ ಬರುವ ಕಾರ್ಮಿಕರಿಗೂ ಕೆಲಸ ಒದಗಿಸುತ್ತಿದೆ. ಹೊರ ಜಿಲ್ಲೆಯ ಕಾರ್ಮಿಕರು ಕೊಡಗು ಜಿಲ್ಲೆಯಲ್ಲಿ ಕಾರ್ಮಿಕರಿಗೆ ಉತ್ತಮ ವೇತನ ಸೌಲಭ್ಯ ನೀಡುತ್ತಿರುವದರಿಂದಲೇ ಹೆಚ್ಚಿನ ಸಂಖ್ಯೆಯಲ್ಲಿ ಜಿಲ್ಲೆಗೆ ಬರುತ್ತಿದ್ದಾರೆ. ಹಾಗೆಯೇ ಅಸ್ಸಾಂ, ಒರಿಸ್ಸಾ, ಪಶ್ಮಿಮ ಬಂಗಾಳ, ತಮಿಳುನಾಡು, ಬಿಹಾರ, ಕೇರಳ, ಆಂದ್ರದಿಂದಲೂ ಜಿಲ್ಲೆಗೆ ವಲಸೆ ಕಾರ್ಮಿಕರು ಬರುತ್ತಿದ್ದಾರೆ. ಜಿಲ್ಲೆಯ ಕಾಫಿ ಪ್ಲಾಂಟೇಶನ್‍ನಲ್ಲಿ ಕಾರ್ಮಿಕರನ್ನು ಜೀತದಾಳುಗಳಾಗಿ ಶೋಷಿಸುವ, ಅತೀ ಕಡಿಮೆ ವೇತನ ನೀಡುವ ಹಾಗೂ ಸೌಲಭ್ಯ ಯಾವದನ್ನು ನೀಡದೆ ಇದ್ದಿದ್ದರೆ ಹೊರ ಜಿಲ್ಲೆ, ಹೊರ ರಾಜ್ಯದಿಂದ ಅಲ್ಲಿ ದೊರೆಯುವ ಕೆಲಸವನ್ನು ಬಿಟ್ಟು ಏಕೆ ಕೊಡಗು ಜಿಲ್ಲೆಗೆ ಬರುತ್ತಿದ್ದರು ಎಂದು ಒಕ್ಕೂಟದ ಪದಾಧಿಕಾರಿಗಳು ಪ್ರಶ್ನಿಸಿದರು.
ಜಿಲ್ಲೆಯ ಸ್ಥಳೀಯ ಕಾರ್ಮಿಕರನ್ನು ಕೆಲವು ಮಧ್ಯವರ್ತಿಗಳು ಕಾನೂನು ಬದ್ದ ವೇತನಕ್ಕಿಂತ ದುಬಾರಿ ವೇತನಕ್ಕೆ ಒತ್ತಾಯಿಸಿ ಬೆಳೆಗಾರರಿಗೆ ನಿರಂತರ ಕಿರುಕುಳ ನೀಡುತ್ತಿರುವ ಪರಿಣಾಮದಿಂದ ಹೊರಗಿನ ವಲಸೆ ಕಾರ್ಮಿಕರನ್ನು ನಿಯಮ ಬದ್ಧ ವೇತನಕ್ಕೆ ಕರೆ ತಂದು ಕೆಲಸ ಮಾಡಿಸುವದು ಅನಿವಾರ್ಯವಾಗಿದೆ. ಹೀಗಿರುವಾಗ ಕೆಲವು ಕಾರ್ಮಿಕ ಮಾಫಿಯಾದವರು ಸ್ಥಳೀಯ ಕಾರ್ಮಿಕರಿಗೆ ಕೆಲಸ ದೊರೆಯುತ್ತಿಲ್ಲ ಎಂದು ವಸ್ತು ಸ್ಥಿತಿಯನ್ನು ಮರೆಮಾಚಿ ಆರೋಪ ಮಾಡುತ್ತಿದ್ದಾರೆ ಎಂದು ಒಕ್ಕೂಟ ಕಿಡಿಕಾರಿದೆ.
ಬೆಳೆಗಾರರನ್ನು ದೂಷಿಸುವ ಮೂಲಕ ಕಾನೂನು ಮೀರಿ ಅರಣ್ಯ ಪ್ರದೇಶವನ್ನು ಅತಿಕ್ರಮಣ ಮಾಡಿಕೊಳ್ಳುವ ಏಕೈಕ ಹುನ್ನಾರದಿಂದ ಹಾಗೂ ತಮ್ಮ ಸಮಾಜ ವಿದ್ರೋಹಿ ಕೆಲಸಕ್ಕೆ ಸ್ಥಳೀಯ ಬುಡಕಟ್ಟು ಜನಾಂಗದವರನ್ನು ಬಳಸಿಕೊಳ್ಳಲು ದಿಡ್ಡಳ್ಳಿ ಪ್ರಕರಣದ ಲಾಭ ಗಳಿಸಲು ಕೆಲವರು ಪ್ರಯತ್ನಿಸುತ್ತಿದ್ದಾರೆ ಎಂದು ಒಕ್ಕೂಟ ಆರೋಪಿಸಿದೆ.
ದಿಡ್ಡಳ್ಳಿಯ ನೈಜ ಬುಡಕಟ್ಟು ಜನಾಂಗವರಿಗೆ ಕಾನೂನು ಬದ್ದ ರೀತಿಯಲ್ಲಿ ಕಂದಾಯ ಇಲಾಖೆಗೆ ಸೇರಿದ ಸರಕಾರಿ ಜಾಗದಲ್ಲಿ ಜಿಲ್ಲೆಯ ಒಳಗೆ ಪುನರ್ ವಸತಿ ಕಲ್ಪಿಸಲು ಒಕ್ಕೂಟ ಬೆಂಬಲ ನೀಡುತ್ತದೆ. ಆದರೆ ಬುಡಕಟ್ಟು ಜನಾಂಗದ ಸೋಗಿನಲ್ಲಿ ಸ್ಥಳೀಯರಲ್ಲದ ಬುಡಕಟ್ಟು ಜನಾಂಗಕ್ಕೆ ಯಾವದೇ ಕಾರಣಕ್ಕೆ ಜಿಲ್ಲೆಯಲ್ಲಿ ಪುನರ್ ವಸತಿ ಕಲ್ಪಿಸಬಾರದು. ದೇಶದ ಎಲ್ಲಾ ಭಾಗದ ನಿರಾಶ್ರಿತರಿಗೆ ಕೊಡಗು ಜಿಲ್ಲೆಯಲ್ಲಿಯೇ ಆಶ್ರಯ ನೀಡಲು ಸಾಧ್ಯವಿಲ್ಲ ಎಂದು ಒಕ್ಕೂಟ ಅಭಿಪ್ರಾಯ ವ್ಯಕ್ತಪಡಿಸಿದೆ.
ಅರಣ್ಯ ಪ್ರದೇಶ ಅತಿಕ್ರಮಣಕ್ಕೆ ಒಳಗಾಗಿ, ವಿಸ್ತೀರ್ಣ ಕಡಿಮೆಗೊಂಡು ಆನೆ ಮಾನವ ಸಂಘರ್ಷ ಹೆಚ್ಚಾಗಿದೆ. ಈ ಸಂಘರ್ಷದಿಂದ ಬೆಳೆಗಾರರು, ಕಾರ್ಮಿಕರು, ಬುಡಕಟ್ಟು ಜನಾಂಗದವರು ಸಾವನಪ್ಪಿದ್ದಾರೆ. ಆದ್ದರಿಂದ ಅರಣ್ಯ ಪ್ರದೇಶದ ವ್ಯಾಪ್ತಿಯಲ್ಲಿ ಪುನರ್‍ವಸತಿ ಕಲ್ಪಿಸಬಾರದು ಎಂದು ಅಭಿಪ್ರಾಯ ಪಟ್ಟಿರುವ ಒಕ್ಕೂಟ ಕಾನೂನು ರೀತಿಯಲ್ಲಿ ಅರಣ್ಯದೊಳಗಿನಿಂದ ಕೆಲವು ಬುಡಕಟ್ಟು ಜನಾಂಗದವರನ್ನು ತೆರವುಗೊಳಿಸಿರುವ ಅರಣ್ಯ ಹಾಗೂ ಪೊಲೀಸ್ ಇಲಾಖೆಯ ಅಧಿಕಾರಿ ಸಿಬ್ಬಂದಿಗಳಿಗೆ ಸೂಕ್ತ ರಕ್ಷಣೆ ನೀಡಬೇಕೆಂದು ಒತ್ತಾಯಿಸಿದರು.
ರಾಜಕೀಯ ಪಕ್ಷದ ಮುಖಂಡರು, ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ದಿಡ್ಡಳ್ಳಿ ಪ್ರಕರಣದ ನೈಜ ಫಲಾನುಭವಿಗಳಿಗೆ ಸೂಕ್ತ ಸೌಲಭ್ಯವನ್ನು ಕಾನೂನಿನ ಅಡಿಯಲ್ಲಿ ಪ್ರಾಮಾಣಿಕವಾಗಿ ಮಾಡಬೇಕು. ಅದು ಬಿಟ್ಟು ಕಾನೂನು ಮೀರಿ ಜನರನ್ನು ಓಲೈಸುವ ಹಾಗೂ ಬುಡಕಟ್ಟು ಜನರಿಗೆ ಸುಳ್ಳು ಭರವಸೆಗಳನ್ನು ನೀಡಿ ದಾರಿ ತಪ್ಪಿಸಬಾರದು ಎಂದು ಒಕ್ಕೂಟದ ಪದಾಧಿಕಾರಿಗಳು ಆಗ್ರಹಿಸಿದರು.
ಸಭೆಯಲ್ಲಿ ಒಕ್ಕೂಟದ ಕಾರ್ಯದರ್ಶಿ ಅಣ್ಣೀರ ಹರೀಶ್ ಮಾದಪ್ಪ, ಸಲಹೆಗಾರ ಚೆಪ್ಪುಡಿರ ಶರಿ ಸುಬ್ಬಯ್ಯ, ಮಾಜಿ ಕಾರ್ಯದರ್ಶಿ ಜಮ್ಮಡ ಮೋಹನ್ ಮಾದಪ್ಪ, ನಿರ್ದೇಶಕ ಕೈಬುಲಿರ ಎಂ. ಹರೀಶ್ ಹಾಜರಿದ್ದರು.