ಶ್ರೀಮಂಗಲ, 24: ಬರಗಾಲ ಅಥವಾ ಹವಮಾನ ವೈಪರೀತ್ಯದಿಂದ ಕಾಫಿ ಫಸಲು ನಷ್ಟವಾಗಿಲ್ಲ ಎಂದು ಕಾಫಿ ಮಂಡಳಿ ಸಮೀಕ್ಷಾ ವರದಿ ಸಲ್ಲಿಸಿದೆ. ಈ ಹಿನ್ನೆಲೆಯಲ್ಲಿ ಕಾಫಿ ಬೆಳೆಗೆ ನಷ್ಟ ಪರಿಹಾರಕ್ಕಾಗಿ ಬೆಳೆಗಾರರು ಅರ್ಜಿ ಸಲ್ಲಿಸುವಂತೆ ಸರಕಾರದಿಂದ ಯಾವದೇ ಆದೇಶ ಬಂದಿಲ್ಲ ಎಂದು ಜಿಲ್ಲಾಧಿಕಾರಿ ಡಾ. ರಿಚರ್ಡ್ ವಿನ್ಸೆಂಟ್ ಡಿಸೋಜ ತಿಳಿಸಿದರು.
ಶ್ರೀಮಂಗಲ ಗ್ರಾ.ಪಂ. ಸಭಾಂಗಣದಲ್ಲಿ ನಡೆದ ಶ್ರೀಮಂಗಲ ಹೋಬಳಿ ಜನಸಂಪರ್ಕ ಸಭೆಯಲ್ಲಿ ಅವರು ಬೆಳೆಗಾರರ ಸಂಘ ಸಂಸ್ಥೆಗಳು ಮನವಿ ಸಲ್ಲಿಸಿದ ಸಂದರ್ಭ ಈ ವಿಚಾರ ತಿಳಿಸಿದರು. ಕಾಫಿ ನಷ್ಟದ ಬಗ್ಗೆ ಕಾಫಿ ಮಂಡಳಿ ಹಾಗೂ ಕಂದಾಯ ಇಲಾಖೆ ಜಂಟಿಯಾಗಿ ಸಮೀಕ್ಷೆ ನಡೆಸಿದೆ. ಆದರೆ ಸಮೀಕ್ಷೆಯಲ್ಲಿ ಶೇ 50ಕ್ಕಿಂತ ಹೆಚ್ಚು ಕಾಫಿ ಫಸಲು ನಷ್ಟಗೊಂಡಿಲ್ಲ ಎಂದು ವರದಿ ಬಂದಿದೆ. ಶೇ 50ಕ್ಕಿಂತ ಕಡಿಮೆ ನಷ್ಟವಾದರೆ ಪರಿಹಾರ ನೀಡಲು ನಿಯಮದಲ್ಲಿ ಅವಕಾಶವಿಲ್ಲ ಎಂದು ಈ ಸಂದÀರ್ಭ ತಿಳಿಸಿದರು.
ಜಿಲ್ಲಾಧಿಕಾರಿಗಳಿಗೆ ಜಿಲ್ಲಾ ಸಾರ್ವಜನಿಕ ಹಿತರಕ್ಷಣಾ ಸಮಿತಿಯ ಅಧ್ಯಕ್ಷ ಅಜ್ಜಮಾಡ ಕಟ್ಟಿಮಂದಯ್ಯ, ಜಿಲ್ಲಾ ರೈತ ಸಂಘದ ಸಂಚಾಲಕ ಚಿಮ್ಮಂಗಡ ಗಣೇಶ್ ಹಾಗೂ ಸಂಘಟನಾ ಕಾರ್ಯದರ್ಶಿ ಕಳ್ಳಿಚಂಡ ಧನು, ಜಿಲ್ಲಾ ಬೆಳೆಗಾರರ ಒಕ್ಕೂಟದ ಪ್ರಮುಖರಾದ ಮಾಣೀರ ಮುತ್ತಪ್ಪ ಹಾಗೂ ಅಜ್ಜಮಾಡ ಟಿ.ಚಂಗಪ್ಪ ಅವರು ಪ್ರತ್ಯೇಕವಾಗಿ ಮನವಿ ಸಲ್ಲಿಸಿದರು.
ಮನವಿಯಲ್ಲಿ ಕೊಡಗು ಜಿಲ್ಲೆ ಸತತವಾಗಿ ಎರಡನೇ ವರ್ಷ ಬರಗಾಲಕ್ಕೆ ತುತ್ತಾಗಿದ್ದು, ಕಾಫಿ, ಕರಿಮೆಣಸು, ಅಡಿಕೆ, ಇತ್ಯಾದಿ ಫಸಲು ನಷ್ಟಗೊಂಡಿದೆ. ಎಕರೆಗೆ ಕನಿಷ್ಟ 50 ಸಾವಿರ ಪರಿಹಾರ ನೀಡಬೇಕು. ಭತ್ತ ಕಾಫಿ, ಕರಿಮೆಣಸು ಫಸಲು ಸಂರಕ್ಷಣೆಗೆ ನೀರು ಬಳಸಲು, ಕುಡಿಯುವ ನೀರು ಒದಗಿಸಲು ಹಾಗೂ ನೀರಿನ ಮೂಲಗಳಾದ ಬಾವಿ. ಕೆರೆ, ಕಟ್ಟೆಗಳ ಅಂತರ್ಜಲ ಮಟ್ಟ ಕುಸಿಯದಂತೆ ತಡೆಗಟ್ಟಲು ಎಲ್ಲಾ ನದಿಗಳಿಗೆ ಬರ ಕಾಮಗಾರಿಯಡಿಯಲ್ಲಿ ಕನಿಷ್ಟ ಪಕ್ಷ 5 ರಿಂದ 10 ಅಡಿ ಚೆಕ್ ಡ್ಯಾಂ ನಿರ್ಮಿಸಬೇಕು. ಬರಗಾಲಕ್ಕೆ ತುತ್ತಾಗಿ ಸಂಕಷ್ಟದಲ್ಲಿದ್ದರೂ ಬ್ಯಾಂಕಿನಿಂದ ಬಲತ್ಕಾರವಾಗಿ ಸಾಲ ವಸೂಲಾತಿ ಮಾಡಲಾಗುತ್ತಿದೆ. ಇದನ್ನು ನಿಲ್ಲಿಸಿ ಬೆಳೆಗಾರರ ಎಲ್ಲಾ ಸಾಲ ಮನ್ನ ಮಾಡಿ ಹೊಸ ಸಾಲ ನೀಡಬೇಕು. ವಿದ್ಯುತ್ ಬಿಲ್ ಬಾಕಿ ಇರುವದನ್ನು ಸಂಪೂರ್ಣ ಮನ್ನಾ ಮಾಡಿ ಉಚಿತ ವಿದ್ಯುತ್ ಕಲ್ಪಿಸಬೇಕು ಸೇರಿದಂತೆ ವಿವಿಧ ಬೇಡಿಕೆಗಳುಳ್ಳ ಮನವಿ ಪತ್ರವನ್ನು ಜಿಲ್ಲಾಧಿಕಾರಿಗಳಿಗೆ ನೀಡಿದರು.
ಅಸಮಾಧಾನ: ಕಾಫಿ ಮಂಡಳಿ ಹಾಗೂ ಕಂದಾಯ ಇಲಾಖೆ ಬೆಳೆಗಾರರನ್ನು ಕತ್ತಲೆಯಲ್ಲಿಟ್ಟು ಕಾಫಿ ನಷ್ಟದ ಸಮೀಕ್ಷೆ ಮಾಡಿದೆ. ಶೇ 50ಕ್ಕಿಂತ ಕಡಿಮೆ ಫಸಲು ನಷ್ಟಗೊಂಡಿದೆ ಎಂದು ವರದಿ ಸಲ್ಲಿಸಿರುವ ಬಗ್ಗೆ ವಿವಿಧ ಸಂಘಟನೆಗಳು ಅಸಮಾಧಾನ ವ್ಯಕ್ತಪಡಿಸಿವೆ. ಶೀರ್ಘದಲ್ಲಿಯೇ ಬೆಳೆಗಾರರ ಸಂಘಟನೆಗಳ ಉಪಸ್ಥಿತಿಯಲ್ಲಿ ಮರುಸಮೀಕ್ಷೆ ನಡೆಸಬೇಕೆಂದು ಬೆಳೆಗಾರರ ಒಕ್ಕೂಟದ ಸ್ಥಾಪಕ ಸದಸ್ಯ ಮಾಣೀರ ಮುತ್ತಪ್ಪ ಹಾಗೂ ಅಜ್ಜಮಾಡ ಟಿ. ಚಂಗಪ್ಪ, ಒಕ್ಕೂಟದ ಕಾರ್ಯದರ್ಶಿ ಅಣ್ಣೀರ ಹರೀಶ್ ಮಾದಪ್ಪ ಆಗ್ರಹಿಸಿದರು.
ಈ ಸಂದÀರ್ಭ ಜಿ.ಪಂ. ಸದಸ್ಯ ಶಿವು ಮಾದಪ್ಪ, ತಾ.ಪಂ ಸದಸ್ಯ ಪಲ್ವೀನ್ ಪೂಣಚ್ಚ ಮತ್ತಿತರರು ಹಾಜರಿದ್ದರು.