ಮಡಿಕೇರಿ, ಜು. 8: ಸರ್ಕಾರ ಮುಂಗಾರು ಹಂಗಾಮಿನಲ್ಲಿ ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲು ಭಿಮಾ ಯೋಜನೆ ಹಾಗೂ ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆ ಯನ್ನು ಜಾರಿಗೊಳಿಸಿದ್ದು, ಈ ವಿಮಾ ಯೋಜನೆ ಪರಿಣಾಮಕಾರಿಯಾಗಿ ತಲಪಿಸುವಲ್ಲಿ ಅಗತ್ಯ ಕ್ರಮ ಕೈಗೊಳ್ಳುವಂತೆ ಕೃಷಿ, ತೋಟಗಾರಿಕೆ, ಲೀಡ್ ಬ್ಯಾಂಕ್ ಅಧಿಕಾರಿಗಳು ಮತ್ತು ಬ್ಯಾಂಕ್‍ಗಳ ವ್ಯವಸ್ಥಾಪಕರುಗಳಿಗೆ ಜಿಲ್ಲಾಧಿಕಾರಿ ಡಾ. ರಿಚರ್ಡ್ ವಿನ್ಸೆಂಟ್ ಡಿಸೋಜ ನಿರ್ದೇಶನ ನೀಡಿದ್ದಾರೆ.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲು ಭಿಮಾ ಯೋಜನೆ ಹಾಗೂ ಹವಾಮಾನ ಆಧಾರಿತ ಬೆಳೆ ವಿಮೆ ಅನುಷ್ಠಾನ ಕುರಿತು ಬ್ಯಾಂಕುಗಳ ವ್ಯವಸ್ಥಾಪಕರ ಉಪಸ್ಥಿತಿಯಲ್ಲಿ ನಡೆದ ಸಭೆಯಲ್ಲಿ ಅವರು ಮಾತನಾಡಿದರು. ಸರ್ಕಾರ ರೈತರ ಅನುಕೂಲಕ್ಕಾಗಿ ಈ ವಿಮಾ ಯೋಜನೆಯನ್ನು ಜಾರಿಗೊಳಿಸಿದ್ದು, ಈ ಕಾರ್ಯಕ್ರಮ ಅನುಷ್ಠಾನಗೊಳಿಸಲು ಬ್ಯಾಂಕುಗಳ ವ್ಯವಸ್ಥಾಪಕರು ಸಹಕರಿಸುವಂತೆ ಹೇಳಿದರು.

ಜಿ.ಪಂ. ಸಿಇಓ ಚಾರುಲತಾ ಸೋಮಲ್ ನಿರ್ಧಿಷ್ಟ ಸ್ಥಳ ಪ್ರಾಕೃತಿಕ ವಿಕೋಪ, ಭೂ ಕುಸಿತ ಸಂದರ್ಭದಲ್ಲಿ ಬೆಳೆ ನಷ್ಟ ಉಂಟಾದರೆ ವೈಯಕ್ತಿಕ ನಷ್ಟದ ನಿರ್ಧರಣೆಯನ್ನು ಜಾರಿಗೊಳಿಸಲಾಗಿದ್ದು, ಈ ವಿಮಾ ಯೋಜನೆಯನ್ನು ರೈತರಿಗೆ ತಲಪಿಸಬೇಕಿದೆ ಎಂದರು.

ಮುಂಗಾರು ಹಂಗಾಮಿನಲ್ಲಿ ಅತಿವೃಷ್ಠಿಯಿಂದ ಬೆಳೆ ನಷ್ಟ ಉಂಟಾದಲ್ಲಿ ವಿಮಾ ಸೌಲಭ್ಯ ಪಡೆಯಲು ಈ ಯೋಜನೆಗಳು ಸಹಕಾರಿಯಾಗಲಿವೆ ಎಂದು ಹೇಳಿದರು.

ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆಯಡಿ ಜಿಲ್ಲೆಗೆ ಒಳಪಡುವ ಬೆಳೆಗಳಾದ ಕಾಳುಮೆಣಸು ಮತ್ತು ಅಡಿಕೆ ಬೆಳೆಗೆ ವಿಮಾ ಕಂತು ಪಾವತಿಸಲು ತಾ. 10 ಕೊನೆಯ ದಿನವಾಗಿದೆ.

ಹಾಗೆಯೇ ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲು ಭಿಮಾ ಯೋಜನೆಯಡಿ ಭತ್ತ ಮತ್ತು ಮುಸುಕಿನ ಜೋಳ ಒಳಪಟ್ಟಿದ್ದು, ವಿಮಾ ಕಂತು ಪಾವತಿಸಲು ತಾ. 30 ಕೊನೆಯ ದಿನವಾಗಿದೆ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಕೆ. ರಾಮಪ್ಪ ಹಾಗೂ ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಬಿ.ಆರ್. ಗಿರೀಶ್ ಮಾಹಿತಿ ನೀಡಿದರು.

ಸಾಲ ಪಡೆದಿರುವ ರೈತರು ಕೂಡಲೇ ತಮ್ಮ ಬ್ಯಾಂಕ್ ಶಾಖೆಗೆ ಭೇಟಿ ನೀಡಿ ವಿಮಾ ಸೌಲಭ್ಯ ಪಡೆಯಲು ಕೋರಲಾಗಿದೆ. ಹಾಗೆಯೇ ಇದುವರೆಗೆ ಸಾಲ ಪಡೆಯದಿರುವವರು ಸಹ ಸಂಬಂಧಪಟ್ಟ ಬ್ಯಾಂಕುಗಳಲ್ಲಿ ಬೆಳೆ ವಿಮಾ ಕಂತನ್ನು ಪಾವತಿಸ ಬಹುದಾಗಿದೆ ಎಂದು ಅವರು ತಿಳಿಸಿದರು. ಜಿಲ್ಲೆಯಲ್ಲಿ ಬಿತ್ತನೆ ವಿಫಲಗೊಂಡಲ್ಲಿ ವಿಮಾ ಮೊತ್ತದ ಗರಿಷ್ಠ ಶೇ. 25 ರಷ್ಟು ಬೆಳೆ ವಿಮಾ ನಷ್ಟ ಪರಿಹಾರ ನೀಡಲು ಬಿತ್ತನೆಯಿಂದ ಕಟಾವು ಹಂತದವರೆಗಿನ ಮಧ್ಯದ ಅವಧಿಯಲ್ಲಿ ಬೆಳೆ ನಷ್ಟ ಉಂಟಾದರೆ ಮುಂಚಿತವಾಗಿ ಅಂದಾಜು ಮಾಡಲಾದ ಬೆಳೆ ವಿಮಾ ನಷ್ಟ ಪರಿಹಾರದಲ್ಲಿ ಶೇ. 25 ರಷ್ಟು ಹಣವನ್ನು ಪರಿಹಾರ ನೀಡಲಾಗುತ್ತದೆ. ಬೆಳೆ ಸಾಲ ಪಡೆಯುವ ಮತ್ತು ಬೆಳೆ ಸಾಲ ಪಡೆಯದ ರೈತರಿಗೆ ವಿಮಾ ಮೊತ್ತ ರಾಜ್ಯದ ಬೆಳೆವಾರು ಸರಾಸರಿ ಹಣಕಾಸು ಪ್ರಮಾಣಕ್ಕೆ ಸಮನಾಗಿರುತ್ತದೆ.

ವಿಮಾ ಕಂತನ್ನು ಲೆಕ್ಕ ಹಾಕಲು ಹಿಂದಿನ ಹತ್ತು ವರ್ಷಗಳಲ್ಲಿ ಇಳುವರಿ ಮಾಹಿತಿ ಪಡೆಯುವದರ ಜೊತೆಗೆ ಪ್ರಾರಂಭಿಕ ಇಳುವರಿಯ ಹಿಂದಿನ ಏಳು ವರ್ಷಗಳಲ್ಲಿ ಎರಡು ವರ್ಷಗಳ ವಿಪತ್ತು ಸಂಭವಿಸಿದ ವರ್ಷಗಳ ಇಳುವರಿಯ ಮಾಹಿತಿಯನ್ನು ಹೊರತುಪಡಿಸಿ ಪರಿಗಣಿಸಬೇಕಿದೆ ಎಂದರು.

ಲೀಡ್ ಬ್ಯಾಂಕ್ ವ್ಯವಸ್ಥಾಪಕ ಕೆ.ಎ. ದೇವಯ್ಯ ಹವಾಮಾನ ಸಂಬಂಧಿಸಿದಂತೆ ಗ್ರಾ.ಪಂ.ವಾರು ಮಳೆ ದಾಖಲೆ ಸಂಬಂಧ ಕಾಲ ಕಾಲಕ್ಕೆ ಮಾಹಿತಿ ಒದಗಿಸಬೇಕಿದೆ ಎಂದು ಅವರು ಮನವಿ ಮಾಡಿದರು. ನಬಾರ್ಡ್ ಜಿಲ್ಲಾ ವ್ಯವಸ್ಥಾಪಕ ಮುಂಡಂಡ ಸಿ. ನಾಣಯ್ಯ ವಿಮಾ ಕಾರ್ಯಕ್ರಮ ಅನುಷ್ಠಾನ ಸಂಬಂಧ ಹಲವು ಸಲಹೆ ನೀಡಿದರು. ವಿವಿಧ ಬ್ಯಾಂಕ್‍ಗಳ ವ್ಯವಸ್ಥಾಪಕರು ಮತ್ತಿತರರು ಇದ್ದರು.

ನೋಡಲ್ ಅಧಿಕಾರಿಗಳ ನೇಮಕ: ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲು ಭಿಮಾ ಯೋಜನೆ ಹಾಗೂ ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆ ಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವ ನಿಟ್ಟಿನಲ್ಲಿ ನೋಡಲ್ ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ಮಡಿಕೇರಿ ತಾಲೂಕಿಗೆ ಸಿ.ಎಂ. ಪ್ರಮೋದ್, ಸಹಾಯಕ ತೋಟಗಾರಿಕೆ ನಿರ್ದೇಶಕರು, ಮೊ.ಸಂ. 9945303149. ವರದರಾಜು, ಕೃಷಿ ಅಧಿಕಾರಿ ಮೊ.ಸಂ. 7259005550. ಸೋಮವಾರಪೇಟೆ ತಾಲೂಕಿಗೆ ಎಂ. ಶ್ರೀನಿವಾಸನ್, ಹಿರಿಯ ತೋಟಗಾರಿಕೆ ನಿರ್ದೇಶಕರು, ಮೊ.ಸಂ. 9980897219. ಕವಿತ, ಕೃಷಿ ಅಧಿಕಾರಿ ಮೊ.ಸಂ. 7259005557. ವೀರಾಜಪೇಟೆ ತಾಲೂಕಿಗೆ ಲಕ್ಷ್ಮಯ್ಯ ಸಹಾಯಕ ತೋಟಗಾರಿಕೆ ನಿರ್ದೇಶಕರು ಮೊ.ಸಂ 9731033727. ಮೀರಾ, ಕೃಷಿ ಅಧಿಕಾರಿ ಮೊ.ಸಂ. 7259005559. ಬೆಂಗಳೂರು ಸಹಾಯವಾಣಿ ಕೇಂದ್ರದ ಕೃಷಿ ಅಧಿಕಾರಿಗಳಾದ ಪ್ರಿಯಾಂಕ ಮೊ.ಸಂ. 7259004867, ಮಂಜುಳ, ಮೊ.ಸಂ. 7259004862. ಶುಭಾ, ಕೃಷಿ ಅಧಿಕಾರಿ ಮೊ.ಸಂ. 7022622920, ಮತ್ತು ಸ್ಥಿರ ದೂ.ಸಂ. 080-26564536, 080-26564538 ಇಲ್ಲಿಗೆ ಸಂಪರ್ಕಿಸಬಹುದಾಗಿದೆ.