ಸಿದ್ದಾಪುರ, ಡಿ. 21: ಮಹಿಳೆಯರು ಬೆತ್ತಲೆ ಪ್ರತಿಭಟನೆ ನಡೆಸಿರುವದು ರಾಜ್ಯದ ಸಂಸ್ಕøತಿಯಲ್ಲ ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಬಾಯ್ ವಿಷಾದ ವ್ಯಕ್ತಪಡಿಸಿದರು.
ಮಾಲ್ದಾರೆ ದಿಡ್ಡಳ್ಳಿಯ ನಿರಾಶ್ರಿತರನ್ನು ಭೇಟಿಯಾಗಿ ಗಿರಿಜನರ ಸಮಸ್ಯೆಯನ್ನು ಆಲಿಸಿ ಮಾತನಾಡಿದ ಅವರು, ಆದಿವಾಸಿಗಳ ಮನೆ ನೆಲಸಮ ಮಾಡಿದ ಸಂದರ್ಭ ಮಹಿಳೆಯರು ಬೆತ್ತಲೆ ಪ್ರತಿಭಟನೆ ಮಾಡಬಾರದಿತ್ತು. ಬೆತ್ತಲೆ ಪ್ರತಿಭಟಿಸಿದ ಮಹಿಳೆಯರ ಮೇಲೆ ಹಲ್ಲೆ ನಡೆಸಿ ದೌರ್ಜನ್ಯವೆಸಗಿದ ಅರಣ್ಯ ಹಾಗೂ ಪೊಲೀಸ್ ಇಲಾಖಾ ಅಧಿಕಾರಿಗಳಿಗೆ ಕೂಡಲೇ ನೋಟೀಸ್ ಜಾರಿ ಮಾಡಲಾಗುವದು ಎಂದು ತಿಳಿಸಿದರು.
ಗುಡಿಸಲು ಕಳೆದುಕೊಂಡ 577 ಕುಟುಂಬದವರಿಗೂ ಆಹಾರ , ನೀರು ಹಾಗೂ ಜೀವನಕ್ಕೆ ಬೇಕಾದ ಎಲ್ಲಾ ಮೂಲಭೂತ ಸೌಕರ್ಯವನ್ನು ಮಕ್ಕಳಿಗೆ ಬೇಕಾದ ಪೌಷ್ಟಿಕ ಆಹಾರವನ್ನು ಕೂಡಲೇ ಒದಗಿಸಬೇಕೆಂದು ಸ್ಥಳದಲ್ಲಿದ್ದ ಶಿಶು ಕಲ್ಯಾಣಾಧಿಕಾರಿ ಹಾಗೂ ಸಮಾಜ ಕಲ್ಯಾಣಾಧಿಕಾರಿಗಳಿಗೆ ಸೂಚನೆ ನೀಡಿದರು. ನಿರಾಶ್ರಿತರ ಶೋಚನೀಯ ಸ್ಥಿತಿಯನ್ನು ಸರಕಾರ ಹಾಗೂ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತರಲಾಗುವದು. ಇದೇ ಸಂದರ್ಭ ಬೆತ್ತಲೆ ಪ್ರತಿಭಟನೆ ನಡೆಸಿದ ಮುತ್ತಮ್ಮ ಅಂದಿನ ಘಟನೆ ಹಾಗೂ ದೌರ್ಜನ್ಯ ನಡೆಸಿದ ಬಗ್ಗೆ ನೋವನ್ನು ತೋಡಿಕೊಂಡರು. ಸಮಾಜ ಕಲ್ಯಾಣ ಅಧಿಕಾರಿಗಳನ್ನು ಮಹಿಳಾ ಆಯೋಗದ ಅಧ್ಯಕ್ಷೆ ತರಾಟೆಗೆ ತೆಗೆದು ಕೊಂಡರಲ್ಲದೇ,
(ಮೊದಲ ಪುಟದಿಂದ) ಕೂಡಲೇ ಮೂಲಭೂತ ಸೌಕರ್ಯವನ್ನು ಒದಗಿಸಬೇಕು. ಇಲ್ಲವಾದಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವದಾಗಿ ಎಚ್ಚರಿಸಿದರು. ಈ ಸಂದರ್ಭ ಜಿಲ್ಲಾ ಶಿಶು ಕಲ್ಯಾಣ ಅಧಿಕಾರಿ ಮಮ್‍ತಾಜ್ ಇದ್ದರು.
ಸ್ವಾಮೀಜಿ ಆಗ್ರಹ : ಇಂದು ಪ್ರತಿಭಟನಾ ಸ್ಥಳಕ್ಕೆ ಕಾಗಿನೆಲೆ ಕನಕಗುರು ಪೀಠದ ಹೊಸದುರ್ಗ ಶಾಖೆಯ ಸ್ವಾಮೀಜಿ ಈಶ್ವರಾನಂದ ಪುರಿ ಅವರು ಆಗಮಿಸಿ, ಗಿರಿಜನ ಮಂದಿಯ ಯೋಗಕ್ಷೇಮ ವಿಚಾರಿಸಿದರು. ದಿಢೀರಾಗಿ ಅಮಾಯಕರನ್ನು ಒಕ್ಕಲೆಬ್ಬಿಸಿದ ಕ್ರಮವನ್ನು ಖಂಡಿಸಿದರು. ಗಿರಿಜನ ಮಂದಿಯನ್ನು ಇಷ್ಟೊಂದು ಹೀನಾಯ ಸ್ಥಿತಿಗೆ ತಂದುದಕ್ಕಾಗಿ ದುಃಖ ವ್ಯಕ್ತಪಡಿಸಿದರು. ಜಿಲ್ಲೆಯ ಜನಪ್ರತಿನಿಧಿಗಳು ಮತ್ತು ರಾಜ್ಯ ಸರ್ಕಾರಿ ಧುರೀಣರು ಅಮಾಯಕರ ನೈಜ ಸಮಸ್ಯೆಯನ್ನು ಅರ್ಥ ಮಾಡಿಕೊಂಡು ತಕ್ಷಣ ವಸತಿ ಕಲ್ಪಿಸುವಂತೆ ಸ್ವಾಮೀಜಿ ಆಗ್ರಹಿಸಿದರು. ಶ್ರೀಮಂತರು ಮಾಡಿರುವ ಒತ್ತುವರಿ ಬಗ್ಗೆ ಕ್ರಮಕೈಗೊಳ್ಳದಿರುವ ಅರಣ್ಯ ಇಲಾಖೆ ಸಾಮಾನ್ಯ ಜನರನ್ನು ಶೋಷಿಸುತ್ತಿರುವದಾಗಿ ಟೀಕಿಸಿದರು. ಈ ನಡುವೆ ವಿಧಾನ ಪರಿಷತ್ ಬೆಂಗಳೂರು ವಿಭಾಗದ ಸದಸ್ಯ ಡಿ.ಎಸ್. ವೀರಯ್ಯ ಅವರು ಸ್ಥಳಕ್ಕೆ ಆಗಮಿಸಿ ಪ್ರತಿಭಟನಾಕಾರರಿಗೆ ಬೆಂಬಲ ವ್ಯಕ್ತಪಡಿಸಿದರು.