ಸೋಮವಾರಪೇಟೆ, ಆ.9: ಬೆಟ್ಟದಳ್ಳಿ ಗ್ರಾಮ ಪಂಚಾಯಿತಿಗೆ ಮಂಗಳವಾರ ಬೀಗ ಜಡಿದು ಪ್ರತಿಭಟಿಸುವ ಕಾರ್ಯಕ್ರಮ ಸಭೆ ನಡೆಯುವ ಮೂಲಕ ಇತ್ಯರ್ಥವಾಯಿತು.
ಪಿಡಿಒ ಹಾಗೂ ಅಧ್ಯಕ್ಷೆಯ ವಿರುದ್ಧ ಮುನಿಸಿಕೊಂಡು ಪಂಚಾಯಿತಿಗೆ ಬೀಗ ಜಡಿದು, ಪ್ರತಿಭಟಿಸಲು ಪಂಚಾಯಿತಿಯ ಆರು ಮಂದಿ ಸದಸ್ಯರು ಹಾಗು ಪಿಡಿಒ ವರ್ಗಾವಣೆಗೆ ಗ್ರಾಮಸ್ಥರು ನಿರ್ಧರಿಸಿದ್ದರು.
ಮಂಗಳವಾರದಂದು ಪಿಡಿಒ ಯಾದವ್ ಪಂಚಾಯಿತಿ ಕಚೇರಿಗೆ ಆಗಮಿಸಿದರೆ, ಅವರಿಗೆ ದಿಗ್ಭಂದನದೊಂದಿಗೆ ಪಂಚಾಯಿತಿಗೆ ಬೀಗ ಜಡಿಯಲಾಗುವದು ಎಂದು 6 ಮಂದಿ ಸದಸ್ಯರು ಹಾಗು ಕೆಲ ಗ್ರಾಮಸ್ಥರು ಮಾಧ್ಯಮದ ಮೂಲಕ ಎಚ್ಚರಿಸಿದ್ದರು.
ಆರು ಮಂದಿ ಸದಸ್ಯರು ತನಗೆ ಮಾನಸಿಕ ಕಿರುಕುಳ ನೀಡುತ್ತಿದ್ದಾರೆ. ಕೆಲ ಸದಸ್ಯರು ಅವಾಚ್ಯ ಶಬ್ಧಗಳಿಂದ ನಿಂದಿಸಿ, ನಿಯಮ ಬಾಹಿರ ಕಾಮಗಾರಿಗೆ ಸಹಿ ಹಾಕುವಂತೆ ಪೀಡಿಸುತ್ತಿದ್ದಾರೆ. ಅಲ್ಲದೆ ಪಿಡಿಒ ಅವರಿಗೂ ಕಿರುಕುಳ ನೀಡುತ್ತಿದ್ದಾರೆ. ಪಂಚಾಯಿತಿಗೆ ಪೊಲೀಸರು ಸೂಕ್ತ ಭದ್ರತೆ ಕಲ್ಪಿಸುವಂತೆ ಅಧ್ಯಕ್ಷೆ ಎಚ್.ಆರ್.ಪವಿತ್ರ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ತಮ್ಮ ಅಸಹಾಯಕತೆ ತೋಡಿಕೊಂಡಿದ್ದರು.
ಈ ಹಿನ್ನೆಲೆಯಲ್ಲಿ ಠಾಣಾಧಿಕಾರಿ ಮಂಚಯ್ಯ, ಎಎಸ್ಐ ರವೀಂದ್ರನಾಥ್ ನೇತೃತ್ವದಲ್ಲಿ ಸಿಬ್ಬಂದಿಗಳು ಪಂಚಾ ಯಿತಿಗೆ ಸೂಕ್ತ ಬಂದೋಬಸ್ತ್ ಕಲ್ಪಿಸಿದ್ದರು. ಪಿಡಿಒ ಯಾದವ್ ಬೆಸೂರು ಗ್ರಾಮ ಪಂಚಾಯಿತಿಗೆ ವರ್ಗಾವಣೆಯಾಗಿರುವ ಹಿನ್ನೆಲೆ, ಪ್ರತಿಭಟನೆ ದಿನ ಪಂಚಾಯಿತಿಗೆ ಗೈರಾದ ಕಾರಣ ಪ್ರತಿಭಟನೆಯಿಂದ ಹಿಂದೆ ಸರಿದ ಪ್ರತಿಭಟನಾಕಾರರು ಸಭೆ ನಡೆಸಿ ತೆರಳಿದರು. ಸಭೆಯಲ್ಲಿ ಅನೇಕರು ಅಧ್ಯಕ್ಷೆಯ ವಿರುದ್ಧ ಆರೋಪಗಳನ್ನು ಮಾಡಿದರು. ಪಂಚಾಯಿತಿ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೋಗಬೇಕು ಎಂದು ಸದಸ್ಯರುಗಳು ಹೇಳಿದರು. ಅನೇಕರು ಅಧ್ಯಕ್ಷೆಗೆ ಉಪದೇಶವನ್ನು ನೀಡಿದರು.
ತನ್ನನ್ನು ಅಧಿಕಾರದಿಂದ ಇಳಿಸುವ ಪ್ರಯತ್ನ ನಡೆಯುತ್ತಿದೆ. ತನ್ನಿಂದ ತಪ್ಪು ಮಾಡಿಸಿ, ತನಿಖೆ ಮೂಲಕ ಅಧಿಕಾರದಿಂದ ಇಳಿಸುವ ತಂತ್ರ ರೂಪಿಸಲಾಗಿದೆ. ನಿಯಮ ಬಾಹಿರ ಕೆಲಸಗಳಿಗೆ ತಾನು ಮುಂದೆಯೂ ಸಹಿ ಹಾಕುವದಿಲ್ಲ. ಕಾಮಗಾರಿ ಕಳಪೆಯಾದರೆ ಬಿಲ್ ನೀಡುವದಿಲ್ಲ ಎಂದು ಅಧ್ಯಕ್ಷೆ ಪವಿತ್ರ ಖಡಾಖಂಡಿತವಾಗಿ ಹೇಳಿದರು.
ನರೇಗಾ ಯೋಜನೆಯಲ್ಲಿ ಕೆಲವೊಮ್ಮೆ ಯಂತ್ರಗಳ ಮೂಲಕ ಕೆಲಸ ನಿರ್ವಹಿಸಬೇಕಾಗುತ್ತದೆ. ಎಲ್ಲದಕ್ಕೂ ನಿಯಮ ಅಂತ ಹೋದರೆ ಗ್ರಾಮಾಣಾಭಿವೃದ್ಧಿ ಅಸಾಧ್ಯ ಎಂದು ಬಹುತೇಕ ಗ್ರಾಮಸ್ಥರು ಹೇಳಿದರು. ಸುಮಾರು ಎರಡು ಗಂಟೆಗಳ ಕಾಲ ಅಧ್ಯಕ್ಷೆ ಮತ್ತು ಗ್ರಾಮಸ್ಥರ ನಡುವೆ ಚರ್ಚೆಗಳು ನಡೆದವು. ಅಧ್ಯಕ್ಷೆ ತನ್ನ ನಿರ್ಧಾರವನ್ನು ಬದಲಾಯಿಸಲಿಲ್ಲ. ಸದಸ್ಯರು ನನಗೆ ಸಹಕಾರ ನೀಡಿದರೆ ತಾನು ಸಹಕಾರ ನೀಡುತ್ತೇನೆ ಎಂದು ಹೇಳಿದರು.
ಜನರಿಂದ ಮತ ಪಡೆದು ಆಯ್ಕೆಯಾದವರು ಪಂಚಾಯತ್ ರಾಜ್ ನಿಯಮವನ್ನು ಪಾಲಿಸ ಬೇಕಾಗುತ್ತದೆ. ಗ್ರಾಮಸಭೆಗಳಿಗೆ, ವಾರ್ಡ್ ಸಭೆಗಳಿಗೆ ಇಷ್ಟ ಬಂದ ಹಾಗೆ ಗೈರಾಗುವದಕ್ಕೆ ಅವಕಾಶವಿಲ್ಲ ಎಂದು ಗ್ರಾಮೀಣ ಉದ್ಯೋಗ ವಿಭಾಗದ ಸಹಾಯಕ ನಿರ್ದೇಶಕ ಸುನಿಲ್ ಕುಮಾರ್ ಹೇಳಿದರು. ಗ್ರಾಮ ಪಂಚಾಯಿತಿ ಆಡಳಿತ ಮಂಡಳಿ ಗ್ರಾಮಸಭೆಗಳನ್ನು ನಡೆಸದಿದ್ದರೆ ಆಡಳಿತ ಮಂಡಳಿಯನ್ನು ಸೂಪರ್ಸೀಡ್ ಮಾಡುವ ಅವಕಾಶವಿದೆ. ಸದಸ್ಯರು ಎರಡು ಸಭೆಗಳಿಗೆ ಗೈರಾದರೆ ತಲಾ ಸಭೆಗೆ 300ರೂ.ಗಳ ದಂಡ ತೆರಬೇಕಾಗುತ್ತದೆ. ಸದಸ್ಯರು ಮೂರು ಬಾರಿ ಗೈರಾದರೆ,ಸದಸ್ಯತ್ವ ಕಳೆದುಕೊಳ್ಳುತ್ತಾರೆ ಎಂದು ಎಚ್ಚರಿಸಿದರು.
ಪಂಚಾಯಿತಿ ಸದಸ್ಯರುಗಳು ಹೊಂದಾಣಿಕೆಯಿಂದ ಪ್ರತಿಫಲಾ ಪೇಕ್ಷೆಯಿಲ್ಲದೆ ಕಾರ್ಯನಿರ್ವಹಿಸಿದರೆ ಗ್ರಾಮೀಣಾಭಿವೃದ್ಧಿ ಸಾಧ್ಯ ಎಂದು ವಿಧಾನ ಪರಿಷತ್ ಮಾಜೀ ಸದಸ್ಯ ಎಸ್.ಜಿ. ಮೇದಪ್ಪ ಹಾಗೂ ಜಿ.ಪಂ. ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್ ಸಲಹೆ ನೀಡಿದರು. ಬೆಟ್ಟದಳ್ಳಿ ಗ್ರಾಪಂ ಪಿಡಿಒ ಯಾದವ್ ಅವರು ಮೂರು ವರ್ಷ ಕಾರ್ಯನಿರ್ವಹಿಸಿರುವ ಹಿನ್ನೆಲೆ ಸಿಇಒ ಅವರು ವರ್ಗಾವಣೆ ಮಾಡಿದ್ದು ಬೆಸೂರು ಗ್ರಾಮ ಪಂಚಾಯಿತಿಯಲ್ಲಿ ಕಾರ್ಯನಿರ್ವ ಹಿಸಲಿದ್ದಾರೆ. ಹಾನಗಲ್ ಗ್ರಾಪಂ ಪಿಡಿಒ ಎಚ್.ಪಿ.ರವೀಶ್ ಬೆಟ್ಟದಳ್ಳಿ ಯಲ್ಲಿ ಕಾರ್ಯನಿರ್ವ ಹಿಸಲಿದ್ದಾರೆ ಎಂದು ತಾ.ಪಂ. ಕಾರ್ಯ ನಿರ್ವಹಣಾಧಿಕಾರಿ ಚಂದ್ರಶೇಖರ್ ತಿಳಿಸಿದರು.
ಸಭೆಯಲ್ಲಿ ತಾಪಂ ಸದಸ್ಯ ಧರ್ಮಪ್ಪ, ಬೆಟ್ಟದಳ್ಳಿ ಗ್ರಾಪಂ ಉಪಾಧ್ಯಕ್ಷೆ ಕುಮಾರಿ, ಸದಸ್ಯರಾದ ಎಸ್.ಕೆ.ಮಾಚಯ್ಯ, ಮಹೇಶ್ ಕುಮಾರ್, ಕೆ.ಎನ್.ಶಿವಣ್ಣ, ವಿಶಾಲಾಕ್ಷಿ, ಸೀತಮ್ಮ, ಗ್ರಾಮಸ್ಥರಾದ ಕೆ.ಕೆ.ಗೋಪಾಲ್, ಕುಂದಳ್ಳಿ ದಿನೇಶ್, ರಾಜೇಶ್, ದೇಶ್ರಾಜ್, ನಂಜಪ್ಪ, ಶಂಕರ್, ಕುಶಾಲಪ್ಪ, ಸಂಪತ್ ಮತ್ತಿತರರು ಇದ್ದರು.