ನಾಪೋಕ್ಲು, ಅ. 9: ವಿದ್ಯಾರ್ಥಿಗಳು ರಾಷ್ಟ್ರೀಯ ಭಾವೈಕ್ಯತೆಯನ್ನು ಜೀವನದಲ್ಲಿ ಅಳವಡಿಸಿಕೊಂಡು ಇತರರಲ್ಲಿಯೂ ಈ ಮನೋಭಾವನೆಯನ್ನು ಬೆಳೆಸಲು ಕಾರ್ಯೋನ್ಮುಖರಾಗಬೇಕು ಎಂದು ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷೆ ಐಮುಡಿಯಂಡ ರಾಣಿ ಮಾಚಯ್ಯ ಹೇಳಿದರು. ಸಮೀಪದ ಬೆಟ್ಟಗೇರಿಯ ಉದಯ ಪ್ರೌಢಶಾಲೆಯಲ್ಲಿ ರಾಷ್ಟ್ರೀಯ ಸೇವಾ ಯೋಜನಾ ಘಟಕದ ವತಿಯಿಂದ ಏರ್ಪಡಿಸಲಾಗಿದ್ದ ವಾರ್ಷಿಕ ವಿಶೇಷ ಶಿಬಿರದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ವಿಜ್ಞಾನ ಮತ್ತು ವೈಜ್ಞಾನಿಕ ಮನೋಭಾವನೆಯನ್ನು ಬೆಳೆಸುವ ಉದ್ದೇಶದಿಂದ ರಾಷ್ಟ್ರೀಯ ಸೇವಾ ಯೋಜನಾ ಘಟಕದ ಮೂಲಕ ವಿಶೇಷ ವಾರ್ಷಿಕ ಶಿಬಿರವನ್ನು ಹಮ್ಮಿಕೊಳ್ಳಲಾಗಿದ್ದು, ಶಿಬಿರದ ಮೂಲಕ ವಿದ್ಯಾರ್ಥಿಗಳು ಉತ್ತಮ ನಾಯಕತ್ವ ಗುಣಗಳನ್ನು ರೂಢಿಸಿಕೊಳ್ಳಬೇಕು. ಮೈತ್ರಿ, ಸೌಹಾರ್ದತೆ, ಸಹಕಾರ ಮನೋಭಾವ ಮತ್ತು ಸೇವಾ ಮನೋಭಾವ, ಸಹಜೀವನ ಗುಣಗಳನ್ನು ಮೈಗೂಡಿಸಿಕೊಳ್ಳಬೇಕು ಎಂದರು. ತಾವು ವಾಸಿಸುವ ಸಮುದಾಯ ಅಥವಾ ಸಮಾಜದ ಸಮಸ್ಯೆಗಳನ್ನು ಅರಿತು ಸಮಾಜದ ಅಗತ್ಯತೆಗಳನ್ನು ಗುರುತಿಸಿ ಏನಾದರೂ ಒಳಿತನ್ನು ಮಾಡಿದರೆ ಉತ್ತಮ ಸೇವೆ ಆಗಬಲ್ಲದು.
ಎನ್ಎಸ್ಎಸ್ ಸಂಕಲ್ಪವಾದ ರಾಷ್ಟ್ರ ಸೇವೆಯನ್ನು ಮಾಡಿದಂತಾಗುವದು ಎಂದರು. ಬೆಟ್ಟಗೇರಿ ಉದಯ ವಿದ್ಯಾಸಂಸ್ಥೆಯ ಅಧ್ಯಕ್ಷ ತಳೂರು ಬಿ. ಕಿಶೋರ್ ಕುಮಾರ್ ಶಿಬಿರವನ್ನು ಉದ್ಘಾಟಿಸಿದರು. ಅರುಣ ಪದವಿಪೂರ್ವ ಕಾಲೇಜಿನ ನಿವೃತ್ತ ಪ್ರಾಂಶುಪಾಲೆ ಪಿ.ಎಂ. ದೇವಕಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎಡಿಕೇರಿ ಕೆ. ವಾಸುದೇವ, ಬೆಟ್ಟಗೇರಿ ಕಾರ್ಪೋರೇಷನ್ ಬ್ಯಾಂಕಿನ ಪ್ರಬಂಧಕ ಕುಮಾರ್ ಅಭಿಷೇಕ್, ಕಾಫಿ ಬೆಳೆಗಾರ ಕೂಪದಿರ ದೊರೆ ಮಾದಪ್ಪ, ಅರುಣ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಎ. ಶ್ರೀಪ್ರಕಾಶ್, ಬೆಟ್ಟಗೇರಿ ಮತ್ತು ಚೇರಂಬಾಣೆ ಪ್ರೌಢಶಾಲಾ ಮುಖ್ಯ ಶಿಕ್ಷಕರು ಪಾಲ್ಗೊಂಡಿದ್ದರು.