*ಗೋಣಿಕೊಪ್ಪಲು, ಮೇ 28: ಬೆಂಗಳೂರಿನಲ್ಲಿ ಕಳ್ಳತನ ಮಾಡಿ ತಲೆ ಮರೆಸಿಕೊಳ್ಳಲು ಕೊಡಗಿಗೆ ಬಂದು ಇಲ್ಲಿಯೂ ತನ್ನ ಕೈಚಳಕ ತೋರಿಸುತ್ತಿದ್ದ ಆರೋಪಿಯೊಬ್ಬ ಶುಕ್ರವಾರ ಪೊಲೀಸರ ಬಲೆಗೆ ಸಿಕ್ಕಿಬಿದ್ದಿದ್ದಾನೆ. ಕಾಮಣ್ಣ ಎಂಬಾತನೆ ಬಂಧಿತ ಆರೋಪಿ.
ಬೆಂಗಳೂರಿನ ಬನಶಂಕರಿಯ ಮಂಜುನಾಥ ಕಾಲೋನಿಯ ನಿವಾಸಿಯಾದ ಈತನ ಮೇಲೆ ಅತ್ಯಾಚಾರ, ಕಳ್ಳತನಕ್ಕೆ ಸಂಬಂಧಿಸಿದಂತೆ ಅಲ್ಲಿನ ಚೆನ್ನಮ್ಮನ ಕೆರೆ ಅಚ್ಚುಕಟ್ಟು ಪ್ರದೇಶದ ಪೊಲೀಸ್ ಠಾಣೆ, ತ್ಯಾಗರಾಜನಗರ ಹಾಗೂ ಅಶೋಕನಗರ ಪೊಲೀಸ್ ಠಾಣೆಗಳಲ್ಲಿ ಹಲವು ಪ್ರಕರಣಗಳು ದಾಖಲಾಗಿವೆ.
ಬೆಂಗಳೂರಿನಲ್ಲಿ ಕಳ್ಳತನ, ಅತ್ಯಾಚಾರ ಮಾಡಿ ಪೊಲೀಸರಿಂದ ತಲೆ ಮರೆಸಿಕೊಳ್ಳಲು ಆಗಾಗ್ಗೆ ಕೊಡಗಿನ ಸಿದ್ದಾಪುರದ ತನ್ನ ಚಿಕ್ಕಮ್ಮನ ಮನೆಗೆ ಬರುತ್ತಿದ್ದ ಎನ್ನಲಾಗಿದೆ. ಹೀಗೆ ಬಂದಾಗ ಕೊಡಗಿನಲ್ಲಿಯೂ ಮನೆಗೆ ನುಗ್ಗಿ ಚಿನ್ನಾಭರಣ ಹಾಗೂ ಮೊಬೈಲ್‍ಗಳನ್ನು ಕಳವು ಮಾಡುವ ಚಾಳಿ ರೂಢಿಸಿಕೊಂಡಿದ್ದ ಎಂದು ಗೋಣಿಕೊಪ್ಪಲು ಸಿಪಿಐ ಪಿ.ಕೆ. ರಾಜು ತಿಳಿಸಿದ್ದಾರೆ.
ತಾ. 20 ರಂದು ಗೋಣಿಕೊಪ್ಪಲಿನ ಸಯ್ಯದ್ ಅವರ ಮನೆಯ ಬೀಗ ಮುರಿದು 2 ಮೊಬೈಲ್‍ಗಳನ್ನು ಕಳವು ಮಾಡಿದ್ದ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯ ಬಂಧನಕ್ಕೆ ಬಲೆ ಬೀಸಿದ ಪಿ.ಕೆ. ರಾಜು ಅವರ ನೇತೃತ್ವದ ತಂಡ ಶುಕ್ರವಾರ ಆರೋಪಿಯನ್ನು ಬಂಧಿಸುತ್ತಿದ್ದಂತೆ ಹಿಂದೆ ಕೊಡಗಿನ ವಿವಿಧ ಭಾಗಗಳಲ್ಲಿ ನಡೆದಿದ್ದ 6 ಕಳ್ಳತನದ ಪ್ರಕರಣಗಳು ಬೆಳಕಿಗೆ ಬಂದಿವೆ.
2014 ಜೂನ್ 23 ರಂದು ಬೆಮ್ಮತ್ತಿಯ 73 ವರ್ಷ ವಯಸ್ಸಿನ ಮುದ್ದಮ್ಮ ಅವರ ಮೇಲೆ ಧಾಳಿ ಮಾಡಿ, ಕರಿಮಣಿ ಸರ ಮತ್ತು ಚಿನ್ನದ ಚೈನ್ ಕಳವು, 2015 ಜೂನ್ 12 ರಂದು ಗೋಣಿಕೊಪ್ಪಲಿನ ವೈದ್ಯ ಬಿ.ವಿ. ಶೆಣೈ ಅವರ ಮನೆಯಲ್ಲಿನ ಮೊಬೈಲ್ ಕಳವು, ಜೂನ್ 15 ರಂದು ವೀರಾಜಪೇಟೆಯಲ್ಲಿ ಮನೆಯೊಂದರ ಬೀಗ ಒಡೆದು 100 ಗ್ರಾಂ. ಚಿನ್ನ ಕಳವು, ಸೆಪ್ಟಂಬರ್ 20 ರಂದು ಗೋಣಿಕೊಪ್ಪಲಿನ ಅಂಗಡಿಯೊಂದರ ಬೀಗ ಮುರಿದು ರೂ. 25 ಸಾವಿರ ನಗದು ಅಪಹರಣ, 2016ರ ಏಪ್ರಿಲ್ 4ರಂದು ಕುಟ್ಟ ಪೂಜೆಕಲ್ಲು ಗ್ರಾಮದ ಶಂಕರ ಅವರ ಮನೆಯಿಂದ 35 ಸಾವಿರ ನಗದು ಕಳವು, ಏಪ್ರಿಲ್ 14 ರಂದು ಕಂಡಂಗಾಲದ ಕಾವೇರಮ್ಮನವರ ಮನೆಯ ಬೀಗ ಒಡೆದು 8 ಗ್ರಾಂ. ಚಿನ್ನದ ಕಾಯಿನ್ ಕಳವು ಮಾಡಿರುವದಾಗಿ ಆತ ವಿಚಾರಣೆ ಸಂದರ್ಭದಲ್ಲಿ ಒಪ್ಪಿಕೊಂಡಿದ್ದಾನೆ ಎಂದು ರಾಜು ತಿಳಿಸಿದ್ದಾರೆ.
ಇದೀಗ ಬಂಧಿತನಾಗಿರುವ ಆರೋಪಿಯಿಂದ ರೂ. 1 ಲಕ್ಷ ಮೌಲ್ಯದ 108 ಗ್ರಾಂ. ಚಿನ್ನ, ರೂ. 18 ಸಾವಿರ ಮೌಲ್ಯದ 3 ಸ್ಯಾಮಸಂಗ್ ಮೊಬೈಲ್, ರೂ. 10 ಸಾವಿರ ನಗದು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವರ್ತಿಕಾ ಕಟಿಯಾರ್, ವೀರಾಜಪೇಟೆ ಡಿವೈಎಸ್‍ಪಿ ಕುಮಾರ್ ಚಂದ್ರ, ಸೋಮವಾರಪೇಟೆ ಡಿವೈಎಸ್‍ಪಿ ಕುಮಾರ್ ಅವರ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಶ್ರೀಮಂಗಲ ಠಾಣಾಧಿಕಾರಿ ಶ್ರೀಧರ್, ಸಿಬ್ಬಂದಿಗಳಾದ ಕೃಷ್ಣ, ಮನು, ಶರತ್, ಹರೀಶ್, ಗಣಪತಿ, ಅಬ್ದುಲ್ ಮಜೀದ್, ಕೀರ್ತಿ, ನಾಗೇಶ್, ಮೋಹನ್ ಮಹಮದ್ ಆಲಿ ಅವರಿದ್ದರು.
- ಎನ್.ಎನ್. ದಿನೇಶ್