ಕುಶಾಲನಗರ, ನ. 3: ಅಕ್ರಮವಾಗಿ ಬೀಟೆ ಮರದ ನಾಟಾಗಳನ್ನು ಸಾಗಾಟ ಮಾಡುತ್ತಿದ್ದ ಸಂದರ್ಭ ಕುಶಾಲನಗರ ಅರಣ್ಯ ಇಲಾಖೆ ಸಿಬ್ಬಂದಿಗಳು ಲಾರಿ ಯೊಂದನ್ನು ವಶಪಡಿಸಿಕೊಂಡು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಸಿದ್ದಾಪುರ ಅಮ್ಮತ್ತಿ-ಒಂಟಿಯಂಗಡಿ ಕಡೆಯಿಂದ ಬರುತ್ತಿದ್ದ ಕೇರಳದ ಲಾರಿಯನ್ನು (ಕೆಎಲ್.10.ಎಎಫ್.9836) ಹೊಸಪಟ್ಟಣ ಬಳಿ ಗುರುವಾರ ಬೆಳಿಗ್ಗೆ ವಶಪಡಿಸಿಕೊಳ್ಳಲಾಗಿದೆ. ಆರೋಪಿ ಗಳಾದ ಮನೋಜ್, ಸಾಜನ್, ಪ್ರಸಾದ್ ಎಂಬವರುಗಳನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆಗೆ ಒಳಪಡಿಸಿದ್ದಾರೆ. ಅಂದಾಜು 3.5 ಲಕ್ಷ ರೂ. ಮೌಲ್ಯದ ಮರ ಸೇರಿದಂತೆ ಲಾರಿಯನ್ನು ವಶಪಡಿಸಿಕೊಳ್ಳಲಾಗಿದೆ.
ಅಮ್ಮತ್ತಿ-ಒಂಟಿಯಂಗಡಿಯ ಖಾಸಗಿ ತೋಟವೊಂದರಿಂದ ಮರ ಸಾಗಾಟ ಮಾಡಲಾಗುತಿತ್ತು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಕಾರ್ಯಾಚರಣೆಯಲ್ಲಿ ಅರಣ್ಯ ವಲಯಾಧಿಕಾರಿ ಕೆ.ಎ.ನೆಹರು, ಸಹಾಯಕ ವಲಯ ಅರಣ್ಯಾಧಿಕಾರಿಗಳಾದ ಶಿವರಾಂ, ದೇವಿಪ್ರಸಾದ್, ರಂಜನ್, ಅರಣ್ಯ ರಕ್ಷಕರಾದ ಯತೀಶ್, ಮಂಜೇಗೌಡ, ಚಾಲಕ ನಾರಾಯಣ ಮತ್ತಿತರರು ಇದ್ದರು.