ಮಡಿಕೇರಿ, ಅ. 24: ವೇಗವಾಗಿ ಬೆಳೆಯುತ್ತಿರುವ ಸಮಾಜದಲ್ಲಿ ಸಂಸ್ಕಾರ ಎಂಬದು ಮರೆಯಾಗುತ್ತಿದೆ. ಆದ್ದರಿಂದ ವಿದ್ಯೆಯೊಂದಿಗೆ ವಿದ್ಯಾರ್ಥಿಗಳಿಗೆ ಪೋಷಕರು ಜನಾಂಗದ ಸಂಸ್ಕಾರದ ಬಗ್ಗೆ ತಿಳಿಸಿಕೊಡಬೇಕೆಂದು ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರಾಡಳಿತ ಮಂಡಳಿಯ ಸದಸ್ಯ ರವಿಶಂಕರ್ ಮಿಜಾರ್ ಸಲಹೆ ನೀಡಿದರು.
ಬಿಲ್ಲವ ಸಮಾಜ ಸೇವಾ ಸಂಘದಿಂದ ನಗರದ ಕಾವೇರಿ ಕಲಾಕ್ಷೇತ್ರದಲ್ಲಿ ಭಾನುವಾರ ನಡೆದ ಸಮ್ಮೇಳನ ಮತ್ತು ವಿದ್ಯಾರ್ಥಿ ವೇತನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಇಂದು ಸಂಸ್ಕಾರ ಎಂಬದು ಕಡಿಮೆಯಾಗುತ್ತಿದೆ. ಆದ್ದರಿಂದ ವಿದ್ಯೆ ಮಾತ್ರ ಮಕ್ಕಳಿಗೆ ನೀಡಿ ಯಾವದೇ ಪ್ರಯೋಜನವಿಲ್ಲ. ವಿದ್ಯೆಯೊಂದಿಗೆ ಸಂಸ್ಕಾರವನ್ನು ಕಲಿಸಿದರೆ ಮಾತ್ರ ಜೀವನ ಸಾರ್ಥಕವಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟರು. ಬಿಲ್ಲವ ಸಮಾಜದ ಜಿಲ್ಲಾಧ್ಯಕ್ಷ ಬಿ.ವೈ. ಆನಂಧ ರಘು ಮಾತನಾಡಿ, ಕೊಡಗು ಜಿಲ್ಲೆಯಲ್ಲಿ ಸುಮಾರು 50 ಸಾವಿರಕ್ಕೂ ಅಧಿಕ ಬಿಲ್ಲವ ಸಮಾಜದವರು ನೆಲೆಸಿದ್ದಾರೆ. ಆದರೆ, ಕಾರ್ಯಕ್ರಮಕ್ಕೆ ಬೆರಳೆಣಿಕೆ ಸಂಖ್ಯೆಯಲ್ಲಿ ಮಾತ್ರ ಹಾಜರಾಗಿದ್ದಾರೆ. ಮುಂದಿನ ದಿನಗಳಲ್ಲಿ ಸಂಘವನ್ನು ಹಾಗೂ ಬಿಲ್ಲವ ಸಮಾಜದವರನ್ನು ಒಗ್ಗೂಡಿಸುವ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಕಾರ್ಯ ಕ್ರಮಗಳಲ್ಲಿ ಪಾಲ್ಗೊಳ್ಳಬೇಕೆಂದು ಮನವಿ ಮಾಡಿದರು.
ಸಂಘಟನೆಯೇ ಬಿಲ್ಲವ ಸಮಾಜದ ಆಸ್ತಿಯಾಗಿದ್ದು, ಸಂಘಟನೆಯತ್ತ ತೊಡಗಿಸಿಕೊಳ್ಳಬೇಕು. ಜಿಲ್ಲೆಯ ವಿವಿಧೆಡೆಯಲ್ಲಿ ನೆಲೆಸಿರುವ ಬಿಲ್ಲವ ಸಮಾಜದವರನ್ನು ಒಗ್ಗೂಡಿಸುವ ನಿಟ್ಟಿನಲ್ಲಿ ಸಂಘದಿಂದ ಸೋಮವಾರಪೇಟೆ ತಾಲೂಕಿನ ಸುಂಟಿಕೊಪ್ಪದಲ್ಲಿ ಡಿಸೆಂಬರ್ 10 ರಿಂದ ಮೂರು ದಿನಗಳ ಕಾಲ ಜನಾಂಗ ಬಾಂಧವರಿಗೆ ಕೋಟಿ ಚೆನ್ನಯ್ಯ ಹೆಸರಿನಲ್ಲಿ ಕ್ರೀಡಾಕೂಟ ಹಮ್ಮಿಕೊಳ್ಳಲಾಗಿದೆ. ಮುಂದಿನ ದಿನಗಳಲ್ಲಿ ಬಿಲ್ಲವ ಯುವ ಒಕ್ಕೂಟ ಹಾಗೂ ಬಿಲ್ಲವ ಮಹಿಳಾ ಒಕ್ಕೂಟ ಘಟಕಗಳನ್ನು ಸ್ಥಾಪಿಸುವ ಚಿಂತನೆ ಇದೆ ಎಂದು ತಿಳಿಸಿದರು. ನಮಗೆ ಸಮಾಜ ಏನು ಮಾಡಿದೆ ಎನ್ನುವದಕ್ಕಿಂತ ಸಮಾಜಕ್ಕೆ ನಾವು ಏನು ಕೊಡುಗೆ ನೀಡಿದ್ದೇವೆ ಎಂಬದನ್ನು ಪ್ರತಿಯೊಬ್ಬರೂ ಅರಿತುಕೊಳ್ಳಬೇಕು. ಶ್ರೀ ನಾರಾಯಣ ಗುರು ಅವರ ತತ್ವ ಸಿದ್ಧಾಂತಗಳನ್ನು ಮೈಗೂಡಿಸಿಕೊಳ್ಳಬೇಕು ಎಂದು ಹೇಳಿದರು.
ಮಡಿಕೇರಿ ತಾಲೂಕು ಬಿಲ್ಲವ ಸೇವಾ ಸಮಾಜದ ಅಧ್ಯಕ್ಷ ಬಿ.ಎಂ. ರಾಜಶೇಖರ ಮಾತನಾಡಿ, ಇಂದಿನ ಯುವ ಪೀಳಿಗೆ ಹಾದಿತಪ್ಪುತ್ತಿದೆ. ಆದ್ದರಿಂದ ಹಿರಿಯರು ಅವರಿಗೆ ಬುದ್ಧಿ ಹೇಳಿ ಮಾರ್ಗದರ್ಶನ ನೀಡ ಬೇಕಾಗಿದೆ. ಬಿಲ್ಲವ ಸಮಾಜ ಸೇವಾ ಸಂಘ ಕಳೆದ 14 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದು, ಜನಾಂಗ ದವರ ಅಭಿವೃದ್ಧಿಗೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬಂದಿದೆ ಎಂದು ತಿಳಿಸಿದರು.
ಸೋಮವಾರಪೇಟೆ ಶ್ರೀ ನಾರಾಯಣಗುರು ಸೇವಾ ಸಮಿತಿ ಅಧ್ಯಕ್ಷ ಎನ್.ಡಿ. ಕಷ್ಣಪ್ಪ ಮಾತನಾಡಿದರು. ಕಾರ್ಯಕ್ರಮದಲ್ಲಿ ಮಹಿಳಾ ಅಧ್ಯಕ್ಷೆ ರತ್ನಾ ವಿಜಯ, ಉಪ ಕಾರ್ಯದರ್ಶಿ ಬಿ.ಎಸ್. ಜಯಪ್ಪ, ಪ್ರಮುಖರಾದ ದಿವಾಕರ, ಚಂದ್ರೇಶ್, ಸುರೇಶ್ ಕೊಟ್ಯಾನ್ ಮತ್ತಿತರರು ಹಾಜರಿದ್ದರು. ಕಾರ್ಯಕ್ರಮದಲ್ಲಿ ಎಸ್‍ಎಸ್‍ಎಲ್‍ಸಿ, ಪಿಯುಸಿ, ಪದವಿ ವ್ಯಾಸಂಗದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಿಸಲಾಯಿತು.