ಮಡಿಕೆÉೀರಿ, ಆ. 24 : ಮಡಿಕೇರಿ ನಗರಸಭೆಯಲ್ಲಿ ತೆರಿಗೆ ಹಾಗೂ ಬಾಡಿಗೆ ವಸೂಲಾತಿಯಲ್ಲಿನ ಅವ್ಯವಹಾರ ಪ್ರಕರಣ ಹಾಗೂ ಭವಿಷ್ಯನಿಧಿಗೆ ಸಂಬಂಧಿಸಿದಂತೆ ನಗರಸಭೆಯ ಬ್ಯಾಂಕ್ ಖಾತೆ ಜಪ್ತಿಯಾಗಿರುವ ಪ್ರಕರಣಗಳಿಗೆ ಸಂಬಂಧಿಸಿದಂತೆ ನಗರಸಭಾ ಸದಸ್ಯರುಗಳ ತಂಡ ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ಚರ್ಚಿಸಿದೆ.

ಸ್ಥಾಯಿ ಸಮಿತಿ ಅಧ್ಯಕ್ಷ ಮನ್ಸೂರ್ ಅಹ್ಮದ್ ನೇತೃತ್ವದ ತಂಡ ಜಿಲ್ಲಾಧಿಕಾರಿ ಡಾ. ರಿಚರ್ಡ್ ವಿನ್ಸೆಂಟ್ ಡಿಸೋಜ ಅವರನ್ನು ಭೇಟಿ ಮಾಡಿ ಬಿಲ್ ಅವ್ಯವಹಾರಕ್ಕೆ ಸಂಬಂಧಿಸಿದಂತೆ ಸಜಿತ್ ಕುಮಾರ್ ಹಾಗೂ ಸ್ವಾಮಿ ಅವರುಗಳ ಮೇಲಿನ ತನಿಖಾ ವರದಿ ಬಹಿರಂಗ ಮಾಡುವಂತೆ ಕೋರಿದರು. ಸತ್ಯಾಸತ್ಯತೆ ಬಗ್ಗೆ ಮಾಹಿತಿ ಬಯಸಿದರು. ಅಲದೆ ಭವಿಷ್ಯ ನಿಧಿಗಾಗಿ ಬ್ಯಾಂಕ್ ಖಾತೆಯಲ್ಲಿದ್ದ 97 ಲಕ್ಷ ರೂಪಾಯಿ ಜಪ್ತಿಯಾಗಿದ್ದು, ಇದರಿಂದಾಗಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಕಷ್ಟವಾಗಲಿದೆ. ಈ ಹಣವನ್ನು ಮರು ಪಾವತಿ ಮಾಡಿಸಿಕೊಡುವಂತೆ ಕೋರಿದರು.

ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿಗಳು, ತಾವು ಬಂದ ಮೇಲೆ ಅವ್ಯವಹಾರ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ತನಿಖೆ ಶೀಘ್ರಗತಿಯಲ್ಲಿ ನಡೆಯುತ್ತಿದೆ. ಆದಷ್ಟು ಬೇಗ ವರದಿ ನೀಡುವದಾಗಿ ಹೇಳಿದರು.